ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡು: ನಿಲ್ಲದ ಮಳೆ ಅಬ್ಬರ, ಅಪಾರ ಹಾನಿ

ಕಾಫಿ ತೋಟಗಳಿಗೆ ನುಗ್ಗಿದ ಹೇಮಾವತಿ, ಚಿಕ್ಕಳ್ಳ, ಸುಣ್ಣದಹಳ್ಳ, ಜಪಾವತಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳ
Last Updated 9 ಜುಲೈ 2022, 6:29 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರವೂ ಮಳೆ ಮುಂದುವರೆದಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಗುರುವಾರ ತಡರಾತ್ರಿಯ ಬಳಿಕ ಮಳೆಯು ಬಿರುಸುಗೊಂಡಿದ್ದು, ನಸುಕಿನವರೆಗೂ ಬಿಡುವಿಲ್ಲದೇ ಸುರಿಯಿತು.

ಬೆಳಿಗ್ಗೆ 7 ರ ಸುಮಾರಿಗೆ ಹೇಮಾವತಿ ನದಿಯು ಉಗ್ಗೆಹಳ್ಳಿ ಗ್ರಾಮದಲ್ಲಿ ಗದ್ದೆ ಬಯಲಿಗೆ ವ್ಯಾಪಿಸಿದ್ದು ಆತಂಕ ಸೃಷ್ಟಿಸಿತು. ಹ್ಯಾರಗುಡ್ಡೆ ಗ್ರಾಮದ ಬಳಿ ಹೇಮಾವತಿ ನದಿ ನೀರು ಕಾಫಿ ತೋಟಗಳಿಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಚಿಕ್ಕಳ್ಳ, ಸುಣ್ಣದಹಳ್ಳ, ಜಪಾವತಿ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ.

ರಾತ್ರಿ ಸುರಿದ ಮಳೆಗೆ ಚಿನ್ನಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಯ್ಸಳಲು ಗ್ರಾಮದ ಸುಂದರೇಶ್, ಸುರೇಶ್ ಎಂಬುವವರ ಮನೆಗಳು ಜಖಂಗೊಂಡಿವೆ. ಗೋಣಿಬೀಡು ಗ್ರಾಮದ ಜಿ. ಹೊಸಳ್ಳಿಯ ಹೂವಮ್ಮ ಎಂಬುವರ ಮನೆಯ ಚಾವಣಿ ಕುಸಿದು ಹಾನಿಯಾಗಿದ್ದು, ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಭಾಷ್ ನಗರದ ಸುಮಿತ್ರಾ ಎಂಬುವರ ಮನೆಯ ಗೋಡೆ ಕುಸಿದು ನಷ್ಟ ಉಂಟಾಗಿದೆ.

ಗದ್ದೆ ಬಯಲುಗಳು ಜಲಾವೃತವಾ
ಗಿದ್ದು, ಸಸಿಮಡಿಗಾಗಿ ಅಗಡಿಗಳಿಗೆ ಹಾಕಿದ್ದ ಭತ್ತ ನೀರಿನಲ್ಲಿ ಕೊಚ್ಚಿಹೋಗಿದೆ. ರೈತರು ನಷ್ಟ ಅನುಭವಿಸುವಂತಾಗಿದೆ. ‘ಸುರಿಯು
ತ್ತಿರುವ ಮಳೆಯು ಕಾಫಿ ತೋಟಗಳಿಗೂ ಹಾನಿಯುಂಟು ಮಾಡಿದ್ದು, ಹೀಚು ಕಟ್ಟಿರುವ ಕಾಫಿಯು ಉದುರತೊಡಗಿದೆ. ಕಾಳು ಮೆಣಸಿಗೆ ಮಳೆಯು ಹದ ನೀಡಿದ್ದರೂ, ನಿರಂತರವಾಗಿ ಸುರಿಯುತ್ತಿರುವುದರಿಂದ ತೆನೆಕಟ್ಟಿರುವ ಕಾಳು ಮೆಣಸಿಗೆ ಶೀತ ಹೆಚ್ಚಳವಾಗಿ, ತೊಟ್ಟು ಕಳಚಿ ಬೀಳುತ್ತಿವೆ’ ಎಂದು ರೈತರು ಹೇಳಿದ್ದಾರೆ.

ಮಳೆಯಿಂದ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ದೇವರುಂದ, ಮೇಕನಗದ್ದೆ, ಆನಗಸಿ, ತ್ರಿಪುರ, ಹಂತೂರು, ಕೂಡುರಸ್ತೆ, ಕನ್ನೆಹಳ್ಳಿ, ಕಜ್ಜೆಹಳ್ಳಿ ಭಾಗಗಳಲ್ಲಿ ವಿದ್ಯುತ್ ಪೂರೈಕೆಗೆ ಅಡ್ಡಿಯಾಗಿದ್ದು, ಮಳೆಯ ನಡುವೆಯೇ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕಕ್ಕಾಗಿ ಶ್ರಮಿಸುತ್ತಿದ್ದಾರೆ.

ಜನಜೀವನ ಅಸ್ತವ್ಯಸ್ತ
ಶೃಂಗೇರಿ:
ತಾಲ್ಲೂಕಿನಾದ್ಯಾಂತ ಮಳೆ ಚುರುಕಾಗಿದ್ದು, ಶುಕ್ರವಾರವೂ ಮಳೆ ಆರ್ಭಟ ಮುಂದುವರಿದಿತ್ತು. ಕಿಗ್ಗಾ ಮತ್ತು ಕೆರೆಕಟ್ಟೆಯಲ್ಲಿ ಉತ್ತಮ ಮಳೆಯಾಗಿದೆ.

ತಾಲ್ಲೂಕಿನ ಕಿಗ್ಗಾದಲ್ಲಿ 162.8 ಮಿ.ಮೀ. ಶೃಂಗೇರಿಯಲ್ಲಿ 117.6 ಮಿ.ಮೀ, ಕೆರೆಕಟ್ಟೆಯಲ್ಲಿ 233.6 ಮಿ.ಮೀ ಮಳೆಯಾಗಿದೆ.

ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಮಳೆಯಿಂದ ಧರೇಕೊಪ್ಪ ಗ್ರಾಮದ ಹಳಕ ರಸ್ತೆ ಸಂಪೂರ್ಣ ಹಾಳಾಗಿದೆ. ಮಾಸುರ್ಡಿಯಿಂದ ಕೀತ್ಲೆಬೈಲ್ ಸಂಪರ್ಕಿಸುವ ಸೇತುವೆ ಕುಸಿದಿದೆ. ಹಳ್ಳದ ನೀರು ಜಾಸ್ತಿಯಾಗಿ ಎಡೆಹಳ್ಳಿಯ ಶ್ರೀನಿವಾಸ್ ಗೌಡ ಮತ್ತು ಸತೀಶ್ ಗೌಡರವರ ಸಾಗುವಳಿ ಜಮೀನು ಹಳ್ಳದ ಪಾಲಾಗಿದೆ. ಕೀತ್ಲೆಬೈಲ್‍ನ ಸುಬ್ರಾಯ ಆಚಾರ್, ಸುಂದರೇಶ್ ಆಚಾರ್, ಉಮೇಶ್ ಆಚಾರ್‌ ಅವರ ಸಾಗುವಳಿ ಜಮೀನಿಗೆ ಹಳ್ಳದ ದಂಡೆ ಒಡೆದು ನೀರು ನುಗ್ಗಿ ಹಾನಿ ಉಂಟಾಗಿದೆ.

ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಟ್ಟೆಯ ಕೃಷ್ಣ ಮತ್ತು ಶಿವರಾಮ್‍ ಅವರ ಮನೆಯ ಹಿಂದಿನ ಧರೆ ಕುಸಿದಿದೆ. ಮೌಳಿ ರಸ್ತೆಯ ಪಕ್ಕದಲ್ಲಿ ಧರೆ ಕುಸಿದಿದೆ. ಕೆರೆಕಟ್ಟೆಯ ಹನುಮನಗುಂಡಿಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದಿದೆ ಮತ್ತು ಗುಲುಗುಂಜಿಮನೆಯ ವನಜಾರವರ ಮನೆಯ ಗೋಡೆ ಬಿರುಕು ಬಿಟ್ಟಿದೆ ಮತ್ತು ಚಾವಣಿ ಕುಸಿದಿದೆ. ಕುಂಚೇಬೈಲ್ ಗಡಿಕಲ್ಲು ರಸ್ತೆಯಲ್ಲಿ ಮರ ಬಿದ್ದಿದೆ. ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕುರ್ಡಿಯಲ್ಲಿ ರಸ್ತೆಗೆ ಧರೆ ಕುಸಿದಿದೆ. ಗುಂಡಗದ್ದೆಮಕ್ಕಿ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದೆ.

ಪಟ್ಟಣದ ಹನುಮಂತ ನಗರದಲ್ಲಿ 2, ಬೇಗಾರ್ ಗ್ರಾಮ ಪಂಚಾಯಿತಿಯ ಬೋಳೂರಿನಲ್ಲಿ 2, ಕಿಗ್ಗಾದ ಸಸಿ ಮನೆಯಲ್ಲಿ 1 ಕಂಬ ಧರೆಗೆ ಉರುಳಿದೆ. ಅಡಿಕೆ ತೋಟಕ್ಕೆ ಬೋರ್ಡೋ ಸಿಂಪಡಣೆ ಸಾಧ್ಯವಾಗಲಿಲ್ಲ. ಜೂನ್‍ನಲ್ಲಿ ಮೊದಲ ಬಾರಿ ಬೋರ್ಡೋ ಸಿಂಪಡಣೆ ಮಾಡಿದ್ದ ರೈತರು, ಜುಲೈನ ಎರಡನೇ ಅವಧಿಯ ಬೋರ್ಡೋ ಸಿಂಪಡಣೆಗೆ ಮಳೆ ಅಡ್ಡಿಯಾಗಿದೆ.

ಬಿರುಸುಗೊಂಡ ಮಳೆ
ತರೀಕೆರೆ:
ತಾಲ್ಲೂಕಿನಾದ್ಯಂತ ಪುನರ್ವಸು ಮಳೆ ಬಿರುಸುಗೊಂಡಿದೆ. ಲಿಂಗದಹಳ್ಳಿ ಹೋಬಳಿಯ ತಣಿಗೆಬೈಲ್, ಜಯಪುರ ಗ್ರಾಮಗಳಲ್ಲಿ ಸತತ ಮಳೆಯಿಂದ ರಸ್ತೆ ಬದಿಯ ಮರಗಳು ಧರೆಗೆ ಉರುಳುತ್ತಿವೆ. ಸಂಚಾರಕ್ಕೆ ಅಡ್ಡಿಯಾದ ಮರಗಳನ್ನು ತಿಗಡ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಸಹಕಾರದೊಂದಿಗೆ ತೆರವುಗೊಳಿಸಿದರು. ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ.

ಸತತ ಮಳೆಯಿಂದ ಲಿಂಗದಹಳ್ಳಿ ಗ್ರಾಮದ ಹೇಮಾವತಿ ಕೋ ಕೃಷ್ಣಪ್ಪನವರ ಮನೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಲಕ್ಕವಳ್ಳಿ ಹೋಬಳಿಯ ವಡ್ಡರದಿಬ್ಬ ಗ್ರಾಮದಲ್ಲಿ ಶಾರದಮ್ಮ ಕೋ ಕೃಷ್ಣಪ್ಪ ಅವರ ಮನೆಯ ಗೋಡೆ ಕುಸಿದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT