ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಕರ್ನಾಟಕದ ಊಟಿ ‘ಕೆಮ್ಮಣ್ಣುಗುಂಡಿ’

ಪ್ರವಾಸೋದ್ಯಮ ಇಲಾಖೆಯ ತೆಕ್ಕೆಯಲ್ಲಿ ‘ಸರ್ವಋತು ಪ್ರವಾಸಿತಾಣ’
Last Updated 15 ಮೇ 2022, 4:52 IST
ಅಕ್ಷರ ಗಾತ್ರ

ಬೀರೂರು: ಪಶ್ಚಿಮಘಟ್ಟಗಳ ಗಿರಿಶ್ರೇಣಿಯ ಹಸಿರು ಹೊದಿಕೆಯ ನಡುವೆ ಮುತ್ತಿನಹಾರದಂತೆ ಕಂಗೊಳಿಸುತ್ತಿರುವ ಕೃಷ್ಣರಾಜೇಂದ್ರ ಗಿರಿಧಾಮ ‘ಕೆಮ್ಮಣ್ಣುಗುಂಡಿ’ ಎಂದೇ ಪ್ರಸಿದ್ಧ. ತರೀಕೆರೆ ತಾಲ್ಲೂಕಿನಲ್ಲಿರುವ ಈ ಪ್ರಕೃತಿ ವಿಸ್ಮಯವು ಬೀರೂರಿನಿಂದ 30 ಕಿ.ಮೀ ದೂರದಲ್ಲಿದ್ದು, ಜನಸಾಮಾನ್ಯರ ಪಾಲಿನ ‘ಕರ್ನಾಟಕದ ಊಟಿ’ ಎನ್ನುವ ಅಭಿದಾನಕ್ಕೆ ಉತ್ಪ್ರೇಕ್ಷೆ ಏನೂ ಅಲ್ಲ.

ಸಮುದ್ರಮಟ್ಟದಿಂದ 4,702 ಅಡಿ ಎತ್ತರದಲ್ಲಿರುವ ಈ ಚೇತೋಹಾರಿ ಪ್ರವಾಸಿ ತಾಣ, ಭದ್ರಾ ಹುಲಿ ರಕ್ಷಿತ ಅರಣ್ಯದ ವ್ಯಾಪ್ತಿಗೆ ಒಳಪಟ್ಟು, 2021ರವರೆಗೆ ತೋಟಗಾರಿಕಾ ಇಲಾಖೆಯ ಉಸ್ತುವಾರಿಯಲ್ಲಿತ್ತು. ಈ ನಂದನವನ ಈಗ ಪ್ರವಾಸೋದ್ಯಮ ಇಲಾಖೆಯ ಅಧೀನಕ್ಕೆ ಸೇರಿದ್ದು, ಸರ್ವಋತು ಪ್ರವಾಸಿತಾಣಗಳ ಪಟ್ಟಿಯಲ್ಲಿ ರಾರಾಜಿಸಲು ಅಡಿ ಇಡುತ್ತಿದೆ. ಉತ್ತಮ ಊಟ, ವಸತಿ ವ್ಯವಸ್ಥೆಯ ಮೂಲಕ ಜನರನ್ನು ಆಕರ್ಷಿಸಲು ‘ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್‌’ ಮುಂದಡಿ ಇಟ್ಟಿದೆ.

ಬ್ರಿಟಿಷರ ಕಾಲದಲ್ಲಿ ಭದ್ರಾವತಿಯ ಉಕ್ಕಿನ ಕಾರ್ಖಾನೆಗೆ ರೋಪ್‍ವೇ ಮೂಲಕ ಮ್ಯಾಂಗನೀಸ್ ಅದಿರು ಸಾಗಿಸುತ್ತಿದ್ದ ‘ಕೆಮ್ಮಣ್ಣುಗುಂಡಿ’ ನಂತರದ ದಿನಗಳಲ್ಲಿ ತನ್ನ ಆಹ್ಲಾದ ಮಯ ಪರಿಸರದಿಂದಾಗಿ ಗಿರಿಧಾಮ ವಾಗಿ ಬದಲಾಯಿತು. ಇತಿಹಾಸದ ತುಣುಕಾಗಿ ಇತ್ತೀಚಿನವರೆಗೂ ಇದ್ದ ರೋಪ್‍ವೇ ಅವಶೇಷಗಳು ಸ್ವಾರ್ಥಿಗಳ ಪಾಲಿಗೆ ಗುಜರಿ ವಸ್ತುವಾಗಿ ನಾಮಾವಶೇಷವಾಗಿದೆ. ಗಣಿಗಾರಿಕೆ ನಿಂತ ಬಳಿಕ ಕ್ರಮೇಣ ಆ ಎಲ್ಲ ಪ್ರದೇಶಗಳೂ ಹಸಿರು ಹೊದಿಕೆಯನ್ನು ಪಡೆಯುತ್ತಿವೆ.

1932ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೆಚ್ಚಿನ ತಾಣವಾಗಿದ್ದ ಇದು, ‘ಬೇಸಿಗೆ ಗಿರಿಧಾಮ’ವಾಗಿ ಮೈಸೂರು ಅರಸರ ಒಡೆತನದಲ್ಲಿತ್ತು. ದತ್ತಾತ್ರೇಯ ಭವನ ನಿರ್ಮಿಸಿ ಬೇಸಿಗೆ ವಿಹಾರಧಾಮವಾಗಿಸಿಕೊಂಡಿದ್ದ ಒಡೆಯರ ಸ್ಮರಣಾರ್ಥ 1942ರಲ್ಲಿ ಇದನ್ನು ‘ಕೃಷ್ಣರಾಜೇಂದ್ರ ಗಿರಿಧಾಮ’ ವಾಗಿ ಘೋಷಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಲಾಯಿತು. ಒಂದೆಡೆ ಹುಲ್ಲುಗಾವಲು ಪ್ರದೇಶದಂತೆ ತೋರುವ ಶೋಲಾರಣ್ಯ, ಮತ್ತೊಂದು ಪಾರ್ಶ್ವದಲ್ಲಿ ದಟ್ಟ ಕಾನನದ ಮಧ್ಯೆ ಹುಲಿ, ಆನೆ, ಕಡವೆಗಳ ಹಿಂಡು. ಜತೆಗೆ ವೈವಿಧ್ಯಮಯ ಪಕ್ಷಿ ಸಂಕುಲದ ಆಶ್ರಯತಾಣ ಹಾಗೂ ಸಸ್ಯಸಂಪತ್ತಿನ ಮೂಲವಾಗಿ ಪರಿಸರ ಸಮತೋಲನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿರುವ ಈ ಭೂಮಿ ಸಾವಿರಾರು ಪ್ರವಾಸಿಗ ರನ್ನು ಆಕರ್ಷಿಸಿದರೂ ಅಭಯಾರಣ್ಯ ವಾಗಿರುವ ಕಾರಣ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ಉಳಿದುಕೊಂಡಿದೆ.

1974ರಲ್ಲಿ ಇಲ್ಲಿ ಸ್ಥಾಪಿತವಾದ ರಾಜಭವನ ಪ್ರವಾಸಿಗರ ಪಾಲಿಗೆ ಗಿರಿಧಾಮದ ಅರಮನೆಯಾಗಿದೆ. ಇಲ್ಲಿಂದಲೇ ಭದ್ರಾ ಹಿನ್ನೀರಿನ ವಿಹಂಗಮ ನೋಟ, ಶೋಲಾರಣ್ಯ ಮತ್ತು ದಟ್ಟಕಾಡಿನ ದರ್ಶನ, ತೋಟ ಗಾರಿಕಾ ಇಲಾಖೆಯ ಆಸಕ್ತಿಯ ಫಲವಾದ ವಿವಿಧ ತಳಿಗಳ ಗುಲಾಬಿ ವನ ಪ್ರವಾಸಿಗರ ಆಕರ್ಷಣೀಯ ತಾಣಗಳು.

ರಾಜಭವನದ ಎದುರೇ ಇರುವ ಕಿರುಹಾದಿ ಕ್ರಮಿಸಿದರೆ ಅದು ಪ್ರವಾಸಿಗರನ್ನು ‘ಝೆಡ್ ಪಾಯಿಂಟ್’ ಕಡೆ ಕರೆದೊಯ್ಯುತ್ತದೆ. ಕಡಿದಾದ ಹಾದಿಯಲ್ಲಿ ಒಂದು ಪಕ್ಕ ಗಿರಿಶ್ರೇಣಿ ಇದ್ದರೆ ಮತ್ತೊಂದು ಬದಿಗೆ ಎದೆ ಝಲ್ಲೆನಿಸುವ ಪ್ರಪಾತ. ಅಲ್ಲಿಂದ ಮುಂದೆ ಸಾಗಿದರೆ ಮನಸ್ಸನ್ನು ಮುದಗೊಳಿಸುವ ಶಾಂತಿ ಫಾಲ್ಸ್ ಸಿಗುತ್ತದೆ. ಕೆಲವು ಬಾರಿ ಮಂಜುಮುಸುಕಿದ ಹಾದಿಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ಬಂದ ಮೇಲೆ ಇಲ್ಲಿ ‘ಗೈಡೆಡ್ ಟ್ರಕ್ಕಿಂಗ್’ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ, ಝೆಡ್ ಪಾಯಿಂಟ್ ಮೂಲಕ ಸೂರ್ಯೋದಯದ ಆನಂದ ಸವಿಯುವ ಜತೆ ಸಾಹಸಕ್ಕೂ ಅವಕಾಶವಿದೆ.

ಇನ್ನು ಇಲ್ಲಿನ ಸೂರ್ಯಾಸ್ತಮಾನ ದೃಶ್ಯ ವೀಕ್ಷಿಸುವುದೇ ಒಂದು ರೋಮಾಂಚಕ ಅನುಭವ. ಕಣ್ಣು ಹಾಯಿಸುವಷ್ಟು ದೂರದ ವಿಸ್ತಾರ ಬಯಲಿನಲ್ಲಿ ಕ್ಷಣಕ್ಕೊಮ್ಮೆ ವರ್ಣರಂಜಿತನಾಗುವ ಸೂರ್ಯ ಆಗಸದಲ್ಲಿ ಮೂಡಿಸುವ ಕೆಂಧೂಳಿಯ, ಹೊನ್ನಿನ ಚಿತ್ತಾರ ಕವಿಗಳ ಪಾಲಿನ ಕಾವ್ಯೋದ್ಭವದ ಸುಸಂಧಿ. ಇಷ್ಟೆಲ್ಲ ವೈವಿಧ್ಯಗಳ ನಡುವೆ ರಾರಾಜಿಸುತ್ತಿರುವ ವನರಾಶಿ ಸುಮಾರು 10.ಕಿ.ಮೀ ದೂರದಿಂದಲೇ ನಿಮಗೆ ತಣ್ಣನೆಯ ಸ್ವಾಗತ ಕೋರುತ್ತದೆ. ಬೇಸಿಗೆಯಲ್ಲಿ ತಂಪಾದ, ಚಳಿಗಾಲದಲ್ಲಿ ಬೆಚ್ಚಗಿನ ಸ್ಪರ್ಶ ನೀಡುವ ಧಾಮ ಮಳೆಗಾಲದಲ್ಲಿ ತೊಯ್ದು ಬೆಚ್ಚಗೆ ಒಳಗೇ ಇದ್ದು ಪ್ರಕೃತಿ ರಮಣೀಯತೆ ಆಸ್ವಾದಿಸುವ ಆಹ್ವಾನ ನೀಡುತ್ತಿದೆ.

ಗಿರಿಧಾಮಕ್ಕೆ ಸರ್ಕಾರಿ ಅಥವಾ ಖಾಸಗಿ ಬಸ್‍ಗಳ ಓಡಾಟ ಇಲ್ಲದಿರುವುದರಿಂದ ಸ್ವಂತ ವಾಹನ ಅವಲಂಬಿಸಬೇಕಿರುವುದು, ಅಲ್ಲದೆ ಪ್ರವೇಶದ್ವಾರದಿಂದ ರಾಜಭವನದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಅತಿ ಶೀಘ್ರವಾಗಿ ದುರಸ್ತಿಯಾಗಬೇಕಾದ ಅಗತ್ಯವಿದೆ. ಜಂಗಲ್ ಲಾಡ್ಜಸ್ ವತಿಯಿಂದಲೇ ಸದ್ಯ ಹೆಬ್ಬೆ ಜಲಪಾತಕ್ಕೂ ಟ್ರೆಕ್ಕಿಂಗ್ ಅವಕಾಶ ಕಲ್ಪಿಸುವ ಸಲುವಾಗಿ ಗಿರಿಧಾಮದ ಪ್ರವೇಶದ್ವಾರದ ಪಕ್ಕದಿಂದ ಜೀಪ್ ಓಡಾಡುತ್ತವೆ. ಒಬ್ಬ ವ್ಯಕ್ತಿಗೆ ₹ 590 ಪ್ರವೇಶಧನ ನಿಗದಿಯಾಗಿದೆ. ಇಲ್ಲಿಂದ ಹಾದು ದುರ್ಗಮ ರಸ್ತೆಯ ಮೂಲಕ ಹೆಬ್ಬೆ ಜಲಪಾತ ತಲುಪಿದರೆ ಅತ್ತಕಡೆ ಮುಳ್ಳಯ್ಯನ ಗಿರಿ, ಸೀತಾಳಯ್ಯನಗಿರಿ ಮತ್ತು ಬಾಬಾಬುಡನ್‍ಗಿರಿ ಶ್ರೇಣಿ ತಲುಪಿದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT