ಮೂಡಿಗೆರೆ: ‘ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ’ ಎಂದು ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಮಂಗಳವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಂಗಳೂರು ಮಹಾನಗರವನ್ನು ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಕೆಂಪೇಗೌಡರಿಗಗೆ ಸಲ್ಲುತ್ತದೆ. ಅವರ ಸಾಧನೆ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಕೆಂಪೇಗೌಡ ಸೇರಿದಂತೆ ಈ ನಾಡಿನ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರ ಜಯಂತಿಗಳನ್ನು ತಾಲ್ಲೂಕು ಆಡಳಿತ ಅದ್ದೂರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಒಳ್ಳೆಯ ವಿಚಾರ ನೀಡಿದಾಗ ಮಾತ್ರ ಮಹನೀಯರ ಜಯಂತಿಗೆ ಅರ್ಥ ಸಿಗುತ್ತದೆ’ ಎಂದರು.
ಕಾಂಗ್ರೆಸ್ ಕಸಬಾ ಹೋಬಳಿ ಅಧ್ಯಕ್ಷ ಸಿ.ಬಿ ಶಂಕರ್ ಮಾತನಾಡಿ, ‘ಕೆಂಪೇಗೌಡರ ಜಯಂತಿಯನ್ನು ತಾಲ್ಲೂಕು ಆಡಳಿತವು ಕಾಟಾಚಾರಕ್ಕೆ ನಡೆಸುತ್ತಿದೆ. ಯಾವುದೇ ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಿಲ್ಲ. ಒಂದು ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿಲ್ಲ. ಹಳೆ ಬ್ಯಾನರ್‌ನಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಆರೋಪಿಸಿದರು.
ಎಂ.ಕೆ ಪ್ರಾಣೇಶ್ ಮಾತನಾಡಿ, ‘ಮಹನೀಯರ ಜಯಂತಿಗಳನ್ನು ನಾಮಕಾವಸ್ಥೆಗೆ ಮಾಡುವಂಥದ್ದಲ್ಲ. ಇಂತಹ ಘಟನೆಗಳು ಮರುಕಳಿಸಬಾರದು. ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸೇರಿಸಿಕೊಂಡು ಅಚ್ಚುಕಟ್ಟಾಗಿ ಜಯಂತಿ ಆಚರಿಸಬೇಕು’ ಎಂದು ಸೂಚಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯೆ ಆಶಾ ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ ಸುರೇಂದ್ರ, ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್, ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲಾವತಿ, ಮುಖಂಡರಾದ ಬಿ.ಎಸ್ ಜಯರಾಂಗೌಡ, ಕೆ.ಸಿ ರತನ್, ಡಿ.ಕೆ ಲಕ್ಷ್ಮಣಗೌಡ, ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.