ಚಿಕ್ಕಮಗಳೂರು: 25 ಎಕರೆ ತನಕ ಒತ್ತುವರಿ ಮಾಡಿರುವ ಸರ್ಕಾರಿ ಜಾಗವನ್ನು (ಕಂದಾಯ ಭೂಮಿ) ಗುತ್ತಿಗೆ ಆಧಾರದಲ್ಲಿ ಪಡೆಯಲು ಪ್ಲಾಂಟೇಷನ್ ಬೆಳೆಗಾರರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ(ಕೆಜಿಎಫ್) ಅಧ್ಯಕ್ಷ ಎಚ್.ಟಿ.ಮೋಹನ್‌ಕುಮಾರ್ ತಿಳಿಸಿದರು.
1995ರಿಂದಲೂ ಬೆಳೆಗಾರರ ಸಂಘಟನೆಗಳು ನಿರಂತರ ಹೋರಾಟ ನಡೆಸಿಕೊಂಡು ಬಂದಿವೆ. 1960ರಿಂದ 2005ರ ತನಕ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನನ್ನು ಗುತ್ತಿಗೆಗೆ ಆಧಾರದಲ್ಲಿ ರೈತರಿಗೆ ಕೊಡಬೇಕು ಎಂಬ ಬೇಡಿಕೆಯಿಂದ ಒಕ್ಕೂಟ ಸಾಕಷ್ಟು ಹೋರಾಟ ನಡೆಸಿದೆ. ಇದರ ಫಲವಾಗಿ ರಾಜ್ಯ ಸರ್ಕಾರ ಗುತ್ತಿಗೆ ನೀಡಲು ಮುಂದಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಕ್ಷಾತೀತವಾಗಿ ರಾಜಕಾರಣಿಗಳು ತಮ್ಮ ಆಡಳಿತದ ಅವಧಿಯಲ್ಲಿ ನೀಡಿದ ಸಹಕಾರದಿಂದ ಇದು ಸಾಧ್ಯವಾಗಿದೆ. ಅರ್ಜಿ ಸಲ್ಲಿಸಲು ಇರುವ 90 ದಿನಗಳ ಕಾಲಾವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರ ಕೇಳಿರುವ ಅಗತ್ಯ ದಾಖಲೆಗಳನ್ನು ಬೆಳೆಗಾರರು ಒದಗಿಸಬೇಕು ಎಂದರು.
ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಮ್ ಮಾತನಾಡಿ, ‘ಚಿಕ್ಕಮಗಳೂರು ಜಿಲ್ಲೆಯಲ್ಲಿ 20,844 ಎಕರೆಯಷ್ಟು ಕಂದಾಯ ಭೂಮಿ ಒತ್ತುವರಿಯಾಗಿದೆ ಎಂಬುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಮಾಡಿದ್ದರೆ ಅದನ್ನು ಗುತ್ತಿಗೆಗೆ ಪಡೆಯಲು ಅವಕಾಶ ಇಲ್ಲ’ ಎಂದು ಹೇಳಿದರು.
‘25 ಎಕರೆಗಿಂತ ಹೆಚ್ಚು ಜಾಗ ಒತ್ತುವರಿ ಮಾಡಿರುವುದು 56 ಬೆಳೆಗಾರರಷ್ಟೆ. ಅವರು ಬಾಕಿ ಜಾಗವನ್ನು ಸರ್ಕಾರಕ್ಕೆ ಬಿಟ್ಟು ಕೊಡಬೇಕಾಗುತ್ತದೆ. ಬಹುತೇಕ ಬೆಳೆಗಾರರು 1 ಎಕರೆಯಿಂದ 10 ಎಕರೆ ತನಕ ಅಷ್ಟೇ ಒತ್ತುವರಿ ಮಾಡಿದ್ದಾರೆ’ ಎಂದರು.
ಅರ್ಜಿಯೊಂದಿಗೆ 5 ವರ್ಷಗಳ ಆದಾಯ ತೆರಿಗೆ ಪಾವತಿ ವಿವರ ನೀಡಬೇಕಾಗುತ್ತದೆ. ಸಣ್ಣ ಬೆಳೆಗಾರರು ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ದೊಡ್ಡ ಬೆಳೆಗಾರರು ಪ್ರತಿವರ್ಷ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಸರ್ಕಾರ ಕೇಳಿರುವ ದಾಖಲೆಗಳಲ್ಲಿ ಯಾವುದೇ ಗೊಂದಲ ಇಲ್ಲ. ಈ ಜಾಗವನ್ನು ಗುತ್ತಿಗೆಗೆ ನೀಡುವುದರಿಂದ ಸರ್ಕಾರಕ್ಕೂ ಸುಮಾರು ₹2,500 ಕೋಟಿಯಷ್ಟು ವರಮಾನ ಬರಲಿದೆ. ಬೆಳೆಗಾರರಿಗೂ ಭದ್ರತೆ ಸಿಗಲಿದೆ. ಆದ್ದರಿಂದ ಬೆಳೆಗಾರರು ಸೂಕ್ತ ದಾಖಲೆಗಳನ್ನು ಒದಗಿಸಿ ಗುತ್ತಿಗೆಗೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಭೂಕುಸಿತ: ಸರ್ಕಾರದ ಯೋಜನೆ ಕಾರಣ ‘ರಸ್ತೆ ಪೈಪ್‌ಲೈನ್ ಸೇರಿದಂತೆ ಸರ್ಕಾರದ ಯೋಜನೆಗಳಿಂದಾಗಿ ಭೂಕುಸಿತ ಹೆಚ್ಚಾಗುತ್ತಿದೆ. ಕಾಫಿ ಬೆಳೆಗಾರರು ಪರಿಸರವನ್ನು ರಕ್ಷಣೆ ಮಾಡಿದ್ದಾರೆಯೇ ಹೊರತು ಹಾಳು ಮಾಡಿಲ್ಲ’ ಎಂದು ಎಚ್.ಟಿ.ಮೋಹನ್‌ಕುಮಾರ್ ಹೇಳಿದರು. ‘ಕಾಡಿನೊಂದಿಗೆ ಜೀವನ ನಡೆಸಿಕೊಂಡು ಬಂದಿದ್ದೇವೆ. ರೆಸಾರ್ಟ್‌ಗಳನ್ನು ನಿರ್ಮಿಸುತ್ತಿರುವುದು ಹೊರಗಿಂದ ಬಂದವರೇ ಹೊರತು ಸ್ಥಳೀಯ ಬೆಳೆಗಾರರಲ್ಲ. ತೋಟಗಳನ್ನು ತುಂಡು ಭೂಮಿಯಾಗಿ ವಿಭಾಗಿಸಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಹೊರಟಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.