ಗುರುವಾರ , ಜನವರಿ 27, 2022
27 °C
10ರಂದು ಪೋಷಕರ ಸಭೆ, ಸಮವಸ್ತ್ರಕ್ಕೆ ತಾತ್ಕಾಲಿಕ ವಿನಾಯಿತಿ

ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಸ್ಕಾರ್ಫ್: ಎಬಿವಿಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿಗಳಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಂಗಳವಾರ ಕಾಲೇಜು ಆವರಣದಲ್ಲಿ ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು.

ಕೆಲವು ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ ಬಂದಿದ್ದರು. ಮಂಗಳವಾರ ಪ್ರತಿಭಟನೆ ಮುಂದುವರಿಸಿ, ಕಾಲೇಜು ಆಡಳಿತ ಮಂಡಳಿ ವಿರುದ್ಧವೂ ಘೋಷಣೆ ಕೂಗಿದರು. ಸಮವಸ್ತ್ರ ವಿಚಾರದಲ್ಲಿ ಆಡಳಿತ ಮಂಡಳಿ ಭೇದ ಭಾವ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತರಗತಿಗಳಿಗೆ ಗೈರು ಹಾಜರಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕಾಲೇಜು ಪ್ರಾಂಶುಪಾಲ ಡಾ. ಎಸ್.ಅನಂತ, ‘ಜ.10ರಂದು ಪೋಷಕರ ಸಭೆ ಕರೆದು ತೀರ್ಮಾನ ಕೈಗೊಳ್ಳುವ ವರೆಗೆ ವಿದ್ಯಾರ್ಥಿಗಳು ಶಾಂತ ರೀತಿಯಿಂದ ವರ್ತಿಸಬೇಕು’ ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್‌ ಪಡೆದರು.

ಡಾ.ಎಸ್.ಅನಂತ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಜ.9ರವರೆಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರದಲ್ಲಿ ವಿನಾಯಿತಿ ನೀಡಲಾಗಿದೆ. 10ರಂದು ತರಗತಿ ರದ್ದು ಮಾಡಿ, ಬೆಳಿಗ್ಗೆ 11ಕ್ಕೆ ಪೋಷಕರ ಸಭೆ ಕರೆಯಲಾಗಿದೆ. ಅಂದು ಇದ್ದಂತಹ ಪರೀಕ್ಷೆಯನ್ನು 11ಕ್ಕೆ ಮುಂದೂಡಲಾಗಿದೆ. ಪೋಷಕರ ಸಭೆಯಲ್ಲಿ ಶಾಸಕರು, ಡಿವೈಎಸ್ಪಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆಯ ಎಇಇ, ತಾಲ್ಲೂಕು ವೈದ್ಯಾಧಿಕಾರಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು