ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಮನಸ್ಸಿನ ಹತೋಟಿ ಅಗತ್ಯ: ಹರಿಹರಪುರ ಸ್ವಾಮೀಜಿ

ಗ್ರಾಮಾಭಿವೃದ್ಧಿ ಯೋಜನೆಯ 1527ನೇ ಮದ್ಯವರ್ಜನ ಶಿಬಿರ ಸಮಾರೋಪ
Last Updated 14 ಮೇ 2022, 2:24 IST
ಅಕ್ಷರ ಗಾತ್ರ

ಕೊಪ್ಪ: ‘ಮನುಷ್ಯ ಪರಿಪೂರ್ಣನಾಗಲು ಮನಸ್ಸನ್ನು ಹತೋಟಿಯಲ್ಲಿಡಬೇಕು. ಚಂಚಲ ಮನಸ್ಸಿನಿಂದ ಸಾಧನೆ ಅಸಾಧ್ಯ’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹರಿಹರಪುರ ಸಮೀ ಪದ ಅಂಬಳಿಕೆ ಕೆ.ಟಿ.ಕೆ ಸಭಾಭವನದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿ ಸಿದ್ದ 1,527ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

‘ಬುದ್ಧಿ ಎಂಬುದು ರಾಜನಾದರೆ, ಮನಸ್ಸು ಮಂತ್ರಿಯಿದ್ದಂತೆ. ಮನಸ್ಸು ಚಂಚಲವಾದಾಗ ಎಲ್ಲಾ ಕಾರ್ಯಗಳು ಅಪೂರ್ಣವಾಗುತ್ತವೆ. ಯಾವ ಕೆಲಸವ ನ್ನಾದರೂ ಏಕಚಿತ್ತದಿಂದ ಮಾಡಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತ ನಾಡಿ, ‘ವೀರೇಂದ್ರ ಹೆಗ್ಗಡೆಯವರು ಕಂಡ ವ್ಯಸನಮುಕ್ತ ಸಮಾಜದ ಕನಸು ಮದ್ಯವರ್ಜನ ಶಿಬಿರದಿಂದ ನನಸಾಗುತ್ತಿದೆ. ವ್ಯಸನಕ್ಕೆ ಸಿಲುಕಿದ ಲಕ್ಷಾಂತರ ಮಂದಿ ಶಿಬಿರದಲ್ಲಿ ಪಾಲ್ಗೊಂಡ ಬಳಿಕ ನೆಮ್ಮದಿ ಹಾಗೂ ಗೌರವಯುತ ಜೀವನ ಸಾಗಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕಾರ್ಯಕ್ರಮಗಳಿಂದ ಗುರುತಿಸಿಕೊಂಡಿದೆ’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಡಾ. ಎಲ್.ಎಚ್.ಮಂಜುನಾಥ್ ಮಾತನಾಡಿ, ‘ಬದಲಾವಣೆ ಜಗದ ನಿಯಮ. ಜೀವನದಲ್ಲಿ ಸ್ವಾರ್ಥವನ್ನು ಬಿಟ್ಟು ತ್ಯಾಗವನ್ನು ಮಾಡಬೇಕು. ಶಿಬಿರಾರ್ಥಿಗಳು ಮುಂದಿನ ಮೂರು ತಿಂಗಳವರೆಗೆ ಕುಟುಂಬದೊಂದಿಗೆ ಪ್ರತಿ ಮುಂಜಾನೆ, ಸಂಜೆ ದೇವರ ಸ್ಮರಣೆ ಮಾಡಿ, ಏಕಾಗ್ರತೆಯಿಂದ 10 ನಿಮಿಷಗಳ ಕಾಲ ಭಜನೆ ಮಾಡಬೇಕು’ ತಿಳಿಸಿದರು.

‘ಅಮ್ಮ ಫೌಂಡೇಷನ್’ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಮೊದಲು ನಗರ ಪ್ರದೇಶಗಳಿಗಷ್ಟೇ ಸೀಮಿತ ವಾಗಿದ್ದ ಮೋಜು ಮಸ್ತಿಗಳು ಇತ್ತೀಚೆಗೆ ಗ್ರಾಮೀಣ ಭಾಗದಲ್ಲೂ ಕಂಡುಬರುತ್ತಿದ್ದು, ಮಹಿಳೆಯರು ಮದ್ಯ ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ದುಶ್ಚಟಗಳು ಸಮಾಜದ ನೆಮ್ಮದಿ ಹಾಳುಮಾಡುತ್ತಿವೆ’ ಎಂದು ಹೇಳಿದರು.

1,527ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭಂಡಿಗಡಿ ದಿವಾಕರ ಭಟ್ ಮಾತನಾಡಿ, ‘ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವುದು ಸ್ವಾಗತಾರ್ಹ. ಸರ್ಕಾರ ಯೋಜನೆಗಳನ್ನು ರೂಪಿಸುವಾಗ ವೀರೇಂದ್ರ ಹೆಗ್ಗಡೆ ಅವರಂತಹವರಿಂದ ಸಲಹೆ ಪಡೆದರೆ ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲಿಯಾನ್, ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅರವಿಂದ ಸೋಮಯಾಜಿ, ಜನವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಯೋಜನಾಧಿಕಾರಿ ಎಂ.ಆರ್.ನಿರಂಜನ್, ಸಮಿತಿ ಉಪಾಧ್ಯಕ್ಷ ವೆಂಕಟೇಶ್ ಪ್ರಮುಖರು ಇದ್ದರು.

70 ಮಂದಿ ಶಿಬಿರಾರ್ಥಿಗಳು ಭಾಗಿ: ಮೇ 5 ರಿಂದ 12ರ ವರೆಗೆ ಆಯೋಜಿಸಿದ್ದ 1,527ನೇ ಮದ್ಯವರ್ಜನ ಶಿಬಿರದಲ್ಲಿ 70 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ನವಜೀವನ ಸಮಿತಿ ರಚನೆ, ಭಜನಾ ಮಂಗಳೋತ್ಸವ ಇತ್ಯಾದಿಗಳು ಜರುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT