ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಎಚ್ಚೆತ್ತರೆ ಮಲೆನಾಡು ಉಳಿಸಲು ಸಾಧ್ಯ

ಭೂಮಿ ಮತ್ತು ವಸತಿಗಾಗಿ ಹೋರಾಟ: ಜನಾಗ್ರಹ ಸಭೆಯಲ್ಲಿ ಕಲ್ಕುಳಿ ವಿಠಲ ಹೆಗ್ಡೆ
Last Updated 29 ಮಾರ್ಚ್ 2022, 2:03 IST
ಅಕ್ಷರ ಗಾತ್ರ

ಕೊಪ್ಪ: ‘ಮಲೆನಾಡಿಗರು ಎಚ್ಚೆತ್ತರೆ ಮಾತ್ರ ಮಲೆನಾಡು ಉಳಿಸಲು ಸಾಧ್ಯ’ ಎಂದು ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಹೇಳಿದರು.

ಭೂಮಿ ಮತ್ತು ವಸತಿ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಸೋಮವಾರ ತಾಲ್ಲೂಕು ಕಚೇರಿ ಎದುರು ಕರ್ನಾಟಕ ಜನಶಕ್ತಿ ಚಿಕ್ಕಮಗಳೂರು ವತಿಯಿಂದ ಆಯೋಜಿಸಿದ್ದ ಜನಾಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಬಡವರ ಪರವಾಗಿ ಹೋರಾಡಲು ರಾಜಕಾರಣಿಗಳಿಗೆ ಬದ್ಧತೆಯೇ ಇಲ್ಲ’ ಎಂದು ಟೀಕಿಸಿದರು.

‘ಯಾರಿಗೆ ಹಕ್ಕುಪತ್ರ ಸಿಗಬೇಕಿತ್ತೋ ಅಂತಹವರಿಗೆ ಸಿಕ್ಕಿಲ್ಲ. ಹಕ್ಕುಪತ್ರ ನೀಡುವ ಸಮಿತಿಯಿಂದಲೇ ಅನರ್ಹರಿಗೆ ಹಕ್ಕುಪತ್ರ ನೀಡುವ ಕೆಲಸ ನಡೆಯುತ್ತಿದೆ. ಹತ್ತಾರು ಎಕರೆ ಜಮೀನು ಇರುವಂಥವರ ಹೆಂಡತಿ, ಮಕ್ಕಳ ಹೆಸರಿಗೆ ಹಕ್ಕುಪತ್ರ ನೀಡಲಾಗಿದೆ. ಜಮೀನು ಇಲ್ಲದವರಿಗೆ ಸಿಗಬೇಕಿದ್ದ 4.38 ಎಕರೆ ಜಾಗ ಸಿಕ್ಕಿಲ್ಲ’ ಎಂದು ಹೇಳಿದರು.

‘ಬಡವರು ಜೀವನೋಪಾಯಕ್ಕೆ ಒತ್ತುವರಿ ಮಾಡಿ ಕೃಷಿ ಮಾಡಿದ ಜಾಗಕ್ಕೆ ಹಕ್ಕುಪತ್ರ ಸಿಗುತ್ತಿಲ್ಲ. ಅದಕ್ಕೆ ಅಧಿಕಾರಿಗಳು ಡೀಮ್ಡ್ ಫಾರೆಸ್ಟ್, ಸೆಕ್ಷನ್ 4(1) ಇತ್ಯಾದಿ ನೆಪ ಹೇಳುತ್ತಿದ್ದಾರೆ. ಈ ಸಮಸ್ಯೆ ಎದುರಿಸುತ್ತಿರುವವರು ಅರಣ್ಯ ವ್ಯವಸ್ಥಾಪನಾಧಿಕಾರಿಗೆ ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕಡೂರಿನಲ್ಲಿರುವ ವ್ಯವಸ್ಥಾಪನಾಧಿಕಾರಿಗೆ ಬಡವರು ಹೋಗಿ ಅರ್ಜಿ ಸಲ್ಲಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಬಸವರಾಜಪ್ಪ ಮಾತನಾಡಿ, ‘ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ, ನಮೂನೆ 50, 53, 57ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಬಡವರಿಗೆ ನಿವೇಶನ, ವಸತಿ, ವಿದ್ಯುತ್, ಶಾಲೆ, ರಸ್ತೆ, ಉದ್ಯೋಗ ವ್ಯವಸ್ಥೆ ದೊರಕಿಸಿಕೊಡಲು ಸಾಧ್ಯವಾಗಿಲ್ಲ’ ಎಂದರು.

‘ಬಡವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿದ್ದ ಅರಣ್ಯ ಹಕ್ಕು ಕಾಯ್ದೆಗೆ ಕಠಿಣ ನಿಯಮ ತರುವ ಮೂಲಕ 75 ವರ್ಷಗಳ ಹಿಂದಿನ ದಾಖಲೆ ಕೇಳುತ್ತಿದ್ದಾರೆ. ಇದು ಬಡವರನ್ನು ಬಡವರಾಗಿಯೇ ಇರಿಸುವ ಹುನ್ನಾರವಾಗಿದೆ’ ಎಂದು ಆರೋಪಿಸಿದರು.

ಬಿಎಸ್ಪಿ ಮುಖಂಡ ಬಿ.ಎನ್.ಆನಂದ ಬೆಳಗೊಳ ಮಾತನಾಡಿ, ‘ಎಚ್.ಜಿ. ಗೋವಿಂದೇಗೌಡ ಅವರ ಅವಧಿಯಲ್ಲಿ ಬಡವರಿಗೆ ನಿವೇಶನ ಗುರುತಿಸಲಾಗಿತ್ತು. ಅರಣ್ಯ ಇಲಾಖೆಯವರು ತಮಗೆ ಸೇರಿದ ಜಾಗ ಎನ್ನುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಿದ್ದಾಗ ಸೊಪ್ಪಿನಬೆಟ್ಟಕ್ಕೆ ಹಕ್ಕುಪತ್ರ ವಿತರಿಸಲಾಗಿತ್ತು. ಈಗ ಖಾತೆ ಮಾಡಿಕೊಡಲು ಅಧಿಕಾರಿಗಳು ಕಾನೂನು ತೊಡಕಿನ ನೆಪ ಹೇಳುತ್ತಿದ್ದಾರೆ’ ಎಂದರು.

ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಮುಖಂಡ ಹಾಗಲಗಂಚಿ ವೆಂಕಟೇಶ್, ಆದಿವಾಸಿ ಹಿತರಕ್ಷಣಾ ವೇದಿಕೆಯ ಮರಿಯಪ್ಪ ಮಾತನಾಡಿದರು. ಜನಶಕ್ತಿ ಸಂಘದ ಸದಸ್ಯ ಕೌಳಿ ರಾಮು, ಆನಂದ್ ಗಡಿಕಲ್, ಕುದುರೆಮುಖ ಭಾಗದ ಸುರೇಶ್, ರಾಧಾ, ಸರೋಜಾ ಇದ್ದರು.

ಪ್ರತಿಭಟನಕಾರರು ಮೇಲಿನಪೇಟೆ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಶೀಲ್ದಾರ್ ಎಚ್.ಎಸ್. ಪರಮೇಶ್ ಮತ್ತು ವಲಯಾ ರಣ್ಯಾಧಿಕಾರಿ ಪ್ರವೀಣ್ ಅವರಿಗೆ ಮನವಿ ಸಲ್ಲಿಸಿದರು. ಸರ್ಕಲ್ ಇನ್ ಸ್ಪೆಕ್ಟರ್ ಗುರಣ್ಣ ಹೆಬ್ಬಾಳ್, ಪಿಎಸ್ಐ ಶ್ರೀನಾಥ್ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT