ಶನಿವಾರ, ಡಿಸೆಂಬರ್ 7, 2019
24 °C
ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸುಜಾತಾ ಕೃಷ್ಣಪ್ಪ

ಕ್ರಿಯಾಶೀಲ ಜೀವನಕ್ಕೆ ಮೊಬೈಲ್‌ ತೊಡಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಕ್ರಿಯಾಶೀಲ ಜೀವನಕ್ಕೆ ತೊಡಕಾಗಿರುವ ಮೊಬೈಲ್ ಅನ್ನು ದೂರವಿರಿಸಿ ಕ್ರೀಡೆ, ಸಾಂಸ್ಕೃತಿಕ ಚಟು ವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.

ಪಟ್ಟಣ ಹೊರವಲಯದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕ್ರೀಡಾಂಗಣ ದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಳಗಡಿ ಸರ್ಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನ ಅಮೂಲ್ಯ ವಾದದ್ದು, ಸಮಯವನ್ನು ಹಾಳು ಮಾಡದೇ, ಜೀವನವನ್ನು ರೂಪಿಸುವ ಕ್ರಿಯಾಶೀಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ‍್ಳಬೇಕು. ಕ್ರೀಡೆಯಲ್ಲಿ ಭಾಗವಹಿಸಿ, ವಿವಿಧ ಹಂತಗಳಲ್ಲಿ ಸಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತೆ ಸಾಧನೆ ಮಾಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಂತಿ ನಾಗರಾಜ್, ‘ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಸೋಲು ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ, ಮೇಲಿನ ಹಂತದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿ ನಮ್ಮ ತಾಲ್ಲೂಕನ್ನು ಪ್ರತಿನಿಧಿಸಿ, ಒಳ್ಳೆಯ ಹೆಸರು ತನ್ನಿ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಗಣಪತಿ, ‘ಇಂದು ತಾಲ್ಲೂಕು ಮಟ್ಟದ ಕ್ರೀಡಾ ಹಬ್ಬವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಏಳಿಗೆಗೆ ಶ್ರಮಿಸುವ ಗುರುಗಳಿಗೆ, ತಂದೆ ತಾಯಿಗೆ ಗೌರವವನ್ನು ಕೊಡಬೇಕು. ದಾನಿಗಳಿಂದಾಗಿ ಇಂದು ಶೈಕ್ಷಣಿಕ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ. ಮೊಬೈಲ್ ನಮ್ಮ ಕ್ರಿಯಾಶೀಲತೆಯನ್ನು ನಾಶಪಡಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎನ್. ರಾಮಸ್ವಾಮಿ, ದಿವ್ಯಾ ದಿನೇಶ್, ತಾಲ್ಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಕಿರಣ್ ಮಾತನಾಡಿದರು.

ಕ್ರೀಡಾಂಗಣಕ್ಕೆ ಬಾಳಗಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸುಜನಾ ಕ್ರೀಡಾ ಜ್ಯೋತಿ ತಂದರು. ಅದನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್ ಸ್ವೀಕಾರ ಮಾಡಿದರು.

ಮುಖ್ಯ ಶಿಕ್ಷಕ ಶೇಖರಪ್ಪ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರೀತಿ ಮತ್ತು ತಂಡ ಪ್ರಾರ್ಥನೆ ಮಾಡಿದರು. ಶಿಕ್ಷಕಿ ಕೆ.ಆರ್. ಶೋಭಾ ನಿರೂಪಣೆ ಮಾಡಿ, ಶಿಕ್ಷಕ ರತ್ನಾಕರ್ ವಂದನಾರ್ಪಣೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಇಒ ಎಚ್.ಡಿ. ನವೀನ್ ಕುಮಾರ್, ಕ್ಷೇತ್ರ ಪ್ರಭಾರಿ ಸಮನ್ವಯಾಧಿಕಾರಿ ಎನ್. ಶೇಖರಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಘ್ನೇಶ್ವರಪ್ಪ, ತಾಲ್ಲೂಕು ಫ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್. ಶೇಖರಪ್ಪ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗಜೇಂದ್ರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಬಿ.ಕೆ. ವೆಂಕಟಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಜೇಶ್, ದಾನಿ ವೆಂಕಟಗೌಡ ಇದ್ದರು.

 

ಪ್ರತಿಕ್ರಿಯಿಸಿ (+)