ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಉತ್ಪನ್ನ, ಗುಟ್ಕಾ; ಕದ್ದುಮುಚ್ಚಿ ಮಾರಾಟ

ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ
Last Updated 6 ಜನವರಿ 2019, 13:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದ ಅಂಗಡಿಮಳಿಗೆಗಳಲ್ಲಿ ಗುಟ್ಕಾ, ತಂಬಾಕು ಉತ್ಪನ್ನಗಳ ಮಾರಾಟ ಅವ್ಯಾಹತವಾಗಿ ಮುಂದುವರಿದಿದ್ದು, ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ(ಕೊಟ್ಪಾ) ಲೆಕ್ಕಕ್ಕಿಲ್ಲವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ತಂಬಾಕು ಉತ್ಪನ್ನಗಳು, ಮಾದಕ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಇದ್ದರೂ ಅದನ್ನು ಪಾಲನೆಯಾಗುತ್ತಿಲ್ಲ. ನಿಲ್ದಾಣದ ಮಳಿಗೆಗಳಲ್ಲಿ ಸಿಗರೇಟು, ಬೀಡಿ, ಗುಟ್ಕಾ, ಜರ್ದಾ ಮೊದಲಾದವುಗಳ ಕದ್ದುಮುಚ್ಚಿ ಮಾರಾಟ ಎಗ್ಗಿಲ್ಲದೆ ಸಾಗಿದೆ.

ಮಳಿಗೆಗಳಲ್ಲಿ ತಿಂಡಿತಿನಿಸು, ಪಾನೀಯ, ಹಣ್ಣು ಮೊದಲಾದವನ್ನು ಕಾಣಿಸುವಂತೆ ಇಟ್ಟಿರುತ್ತಾರೆ. ಆದರೆ, ಈ ಮಾದಕ ವಸ್ತುಗಳನ್ನು ಕಾಣದಂತೆ ಒಳಗೆ ಇಟ್ಟಿರುತ್ತಾರೆ. ಅವುಗಳನ್ನು ಕೇಳಿದವರಿಗೆ ಮರೆಮಾಚಿ ಕೊಡುತ್ತಾರೆ. ನಿಲ್ದಾಣದೊಳಗೆ ಆಜುಬಾಜಿನಲ್ಲಿ ಧೂಮಪಾನ ಮಾಡುತ್ತಾರೆ. ಗುಟ್ಕಾ ಜಗಿದು ಗೋಡೆಗಳ ಮೇಲೆ ಮತ್ತು ಪಕ್ಕದಲ್ಲಿ ಉಗುಳುತ್ತಾರೆ.

‘ಪ್ರಯಾಣಿಕರು ಮಾತ್ರವಲ್ಲ ಕೆಲ ನಿರ್ವಾಹಕರು, ಚಾಲಕರು, ಸಿಬ್ಬಂದಿ ಇಲ್ಲಿ ಗುಟ್ಕಾ, ಸಿಗರೇಟು, ಬೀಡಿ ಖರೀದಿಸುತ್ತಾರೆ. ಈ ವಸ್ತುಗಳನ್ನು ಮಾರಾಟ ಮಾಡಿ, ಸಿಕ್ಕಿಬಿದ್ದರೆ ದಂಡ ಹಾಕುತ್ತಾರೆ ಎಂಬುದು ಅಂಗಡಿಯವರಿಗೂ ಗೊತ್ತು. ಲಾಭದಾಸೆಗೆ ಮಾಡುತ್ತಾರೆ. ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಕಡಿವಾಣ ಹಾಕಬೇಕು’ ಎಂದು ಬೇಲೂರಿನ ಶಿಕ್ಷಕ ಶಂಕರಪ್ಪ ಹೇಳುತ್ತಾರೆ.

ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತ ವಿಭಾಗದ ಅಧಿಕಾರಿಗಳು ಕೆಲ ದಿನಗಳ ಹಿಂದೆ ನಿಲ್ದಾಣದ ಮಳಿಗೆಗಳಲ್ಲಿ ಕಾರ್ಯಾಚರಣೆ ನಡೆಸಿ ಸಿಗರೇಟು, ಬೀಡಿ, ಗುಟ್ಕಾ, ಜರ್ದಾ ಪೊಟ್ಟಣಗಳನ್ನು ವಶಪಡಿಸಿಕೊಂಡಿದ್ದರು. ಅವುಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆಯನ್ನೂ ನೀಡಿದ್ದರು. ಆದಾಗ್ಯೂ, ಮತ್ತೆ ಮಾರಾಟ ಮುಂದುವರಿದಿದೆ.

ನಿಲ್ದಾಣದಲ್ಲಿ ಧೂಮಪಾನ ಮಾಡಿದರೆ ₹ 200 ದಂಡ ವಿಧಿಸಲಾಗುತ್ತದೆ. ಮಾದಕ ವಸ್ತುಗಳನ್ನು ಮಾರಾಟ ಮಾಡಿದರೆ ದಂಡ ವಿಧಿಸಲು, ಮಳಿಗೆ ಲೈಸೆನ್ಸ್‌ ಅನ್ನೇ ರದ್ದುಪಡಿಸಲು ಅವಕಾಶ ಇದೆ. ಈ ನಿಯಮಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ನಿಲ್ದಾಣದ ಆಜುಬಾಜಿನಲ್ಲಿ ಗುಟ್ಕಾ ಸೇವನೆ, ಮದ್ಯಪಾನ, ಧೂಮಪಾನ ನಿರಾತಂಕವಾಗಿ ಸಾಗಿದೆ. ಪೊಲೀಸರ ‘ಜಾಣ ಕುರುಡು’ ವ್ಯಸನಿಗಳಿಗೆ ಅನುಕೂಲವಾಗಿ ಪರಿಣಮಿಸಿದೆ.

‘ಚಿಕ್ಕಗಳೂರು, ಕಡೂರು, ಅರಸೀಕರೆ ಎಲ್ಲ ನಿಲ್ದಾಣಗಳಲ್ಲಿ ಮಳಿಗೆಗಳಲ್ಲಿ ಕಾರ್ಯಾಚರಣೆ ನಡೆಸಿ ಗುಟ್ಕಾ, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದೇವೆ. ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಡಿಸೆಂಬರ್‌ ತಿಂಗಳಿನಲ್ಲಿ ಧೂಮಪಾನಿಗಳಿಗೆ ಸುಮಾರು 35 ಸಾವಿರ ದಂಡ ವಿಧಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತ ಅಧಿಕಾರಿ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಾದಕ ವಸ್ತುಗಳನ್ನು ಮಾರುವಂತಿಲ್ಲ ಎಂದು ಬಾಡಿಗೆ ಕರಾರಿನಲ್ಲಿ ಷರತ್ತು ವಿಧಿಸಲಾಗಿರುತ್ತದೆ. ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು. ಬಚ್ಚಿಟ್ಟು ಮಾರಾಟ ಮಾಡುವುದು, ರಜೆ ದಿನಗಳಂದು ಮಾರುವ ಬಗ್ಗೆ ಮಾಹಿತಿ ಇದೆ. ಕಾರ್ಯಾಚರಣೆ ಮುಂದುವರಿಸುತ್ತೇವೆ. ಎಚ್ಚರಿಕೆ ಫಲಕಗಳನ್ನು ನಿಲ್ದಾಣದಲ್ಲಿ ಶೀಘ್ರದಲ್ಲಿ ಅಳವಡಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT