ಗುರುವಾರ , ಫೆಬ್ರವರಿ 9, 2023
30 °C
ಮೂಡಿಗೆರೆ: ಪ್ರತಿಭಟನಾ ಸ್ಥಳದಲ್ಲಿ ಕುಮಾರಸ್ವಾಮಿ ಅಂಗಿ ಹರಿದ ಪ್ರಕರಣ

ಕುಮಾರಸ್ವಾಮಿ ಅಂಗಿ ಹರಿದ ಪ್ರಕರಣ:ಶಾಸಕರ ಹೇಳಿಕೆ ಅಲ್ಲಗಳೆದ ಪ್ರತ್ಯಕ್ಷದರ್ಶಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಹುಲ್ಲೆಮನೆ– ಕುಂದೂರಿನಲ್ಲಿ ಭಾನುವಾರ ಆನೆ ದಾಳಿಯಿಂದ ಸಾವಿಗೀಡಾದ ಶೋಭಾ ಅವರ ಮೃತದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತಡವಾಗಿ ಬಂದಿದ್ದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಅಂಗಿಯನ್ನು ಉದ್ರಿಕ್ತರು ಹರಿದಿಲ್ಲ ಎಂಬುದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ.

ಶಾಸಕ ಕುಮಾರಸ್ವಾಮಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿಯಬಿಟ್ಟು ‘ಪತಿಭಟನಾ ಸ್ಥಳದಲ್ಲಿ ಹಲ್ಲೆ ನಡೆಸಿ ಅಂಗಿ ಹರಿದರು’ ಎಂದು ಆರೋಪಿಸಿರುವುದನ್ನು ಗ್ರಾಮಸ್ಥರು ಅಲ್ಲಗಳೆದರು. ಕುಮಾರಸ್ವಾಮಿ ಅವರು ತಡವಾಗಿ ಸ್ಥಳಕ್ಕೆ ಬಂದಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು. ತಳ್ಳಾಟ ನೂಕಾಟವಾಯಿತು. ಕೆಲವರು ಕಲ್ಲು ತೂರಿದರು. ಅವರ ಕಡೆಗೆ ಹೂವಿನ ಹಾರ ಎಸೆದರು. ಕುಮಾರಸ್ವಾಮಿ ಅವರನ್ನು ಪೊಲೀಸರು ಕರೆದೊಯ್ದು ಜೀಪಿನಲ್ಲಿ ಕೂರಿಸಿದರು ಎಂದು ಪ್ರತಿಭಟನಾ ಸ್ಥಳದಲ್ಲಿದ್ದವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸಕ ಕುಮಾರಸ್ವಾಮಿ ಅವರನ್ನು ಪೊಲೀಸರೇ ಜೀಪಿಗೆ ಕೂರಿಸಿದರು. ಆಗ ಅವರ ಅಂಗಿ ಚೆನ್ನಾಗಿತ್ತು. ಜೀಪಿಗೆ ಕೂರಿಸಿದ ವಿಡಿಯೊಗಳು ಇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌, ಗ್ರಾಮಸ್ಥ ಅಣ್ಣೇಗೌಡ, ಶಿವಕುಮಾರ್‌ ತಿಳಿಸಿದರು.

ತಡವಾಗಿ ಬಂದಿದ್ದಕ್ಕೆ ಆಕ್ರೋಶ: ‘ಭಾನುವಾರ ಆನೆ ದಾಳಿ ಘಟನೆ ನಡೆದಿದ್ದು ಬೆಳಿಗ್ಗೆ. ಆದರೆ ಶಾಸಕ ಕುಮಾರಸ್ವಾಮಿ ಅವರು ಅಲ್ಲಿಗೆ ಬಂದಿದ್ದು ಸಂಜೆ. ಅವರು ತಡವಾಗಿ ಬಂದಿದ್ದಕ್ಕೆ ಅಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು. ಉದ್ರಿಕ್ತರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಶಾಸಕರ ಬಳಿ ಕ್ಷಮೆಯಾಚಿಸಿದ್ದೇನೆ’ ಎಂದೂ ಸಂತೋಷ್‌ ತಿಳಿಸಿದರು.

ಉದ್ಯೋಗಕ್ಕೆ ಮನವಿ: ಮೃತ ಶೋಭಾ ಪತಿ ಸತೀಶ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಈ ಭಾಗದಲ್ಲಿ ಆನೆಗಳ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಗ್ರಾಮ ಪ್ರದೇಶದ ಸುತ್ತ ಬೇಲಿ ನಿರ್ಮಿಸುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.

‘ಪುತ್ರನಿಗೆ ಸರ್ಕಾರಿ ಉದ್ಯೋಗ ಮತ್ತು ₹ 50 ಲಕ್ಷ ಪರಿಹಾರ ನೀಡುವಂತೆ ಕೋರಿದ್ದೇವೆ. ₹ 15 ಲಕ್ಷ ಪರಿಹಾರ ಕೊಡಿಸುವುದಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ಸಾಂತ್ವನ: ಶಾಸಕ ಕುಮಾರಸ್ವಾಮಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಕುಂದೂರಿಗೆ ತೆರಳಿ ಮೃತ ಶೋಭಾ ಅವರ ಪತಿ ಸತೀಶ್‌, ಪುತ್ರ ಶಶಾಂಕ್‌ಗೆ ಸಾಂತ್ವನ ಹೇಳಿದರು. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಅರಣ್ಯ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ದೂರಿನ ಮೇರೆಗೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ.

‘ಮಹಿಳೆಯರು ಅಂಗಿ ಹರಿದರು’

ಶಾಸಕ ಎಂ.ಪಿ.ಕುಮಾರಸ್ವಾಮಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಘಟನಾ ಸ್ಥಳಕ್ಕೆ ತೆರಳಿದ್ದಾಗ ಉದ್ರಿಕ್ತರು ದರೋಡೆಕೋರನ ರೀತಿಯಲ್ಲಿ ಅಟ್ಟಿಸಿಕೊಂಡು ಬಂದರು. ಪೊಲೀಸರ ಬಳಿ ವಿಡಿಯೋಗಳು ಇವೆ. ಇಬ್ಬರು ಮಹಿಳೆಯರು ಅಂಗಿ ಹಿಡಿದು ಎಳೆದು ಹರಿದರು’ ಎಂದರು.

3 ಆನೆಗಳ ಸ್ಥಳಾಂತರಕ್ಕೆ ಅನುಮತಿ

ಆಲ್ದೂರು, ಮೂಡಿಗೆರೆ ವಲಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆ ಹಿಡಿದು, ಆನೆ ಶಿಬಿ ರಕ್ಕೆ ಸ್ಥಳಾಂತರಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ.

‘ಶೋಭಾ ಅವರ ಕುಟುಂಬದವರಿಗೆ ಒಟ್ಟು ₹7.5 ಲಕ್ಷ ಪರಿಹಾರ ನೀಡಲು ಒಪ್ಪಿಕೊಂಡಿದ್ದೇವೆ. ₹ 2ಲಕ್ಷ ಪರಿಹಾರ ನೀಡಿದ್ದು, ಬಾಕಿ ಮೊತ್ತವನ್ನು ಶೀಘ್ರದಲ್ಲಿ ತಲುಪಿಸುತ್ತೇವೆ. ಕಂದೂರು ಭಾಗದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯ ಆರಂಭವಾಗಿದೆ. ಆನೆಗಳ ಸೆರೆ ಕಾರ್ಯಾಚರಣೆಯನ್ನು ಶೀಘ್ರದಲ್ಲಿ ಶುರು ಮಾಡುತ್ತೇವೆ’ ಎಂದು ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಸಿದ್ರಾಮಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು