ಗುರುವಾರ , ಮೇ 19, 2022
25 °C
ವಿವಿಧೆಡೆ ಕಾರ್ಮಿಕ ದಿನಾಚರಣೆ; ಸಿಹಿ ವಿತರಣೆ

ಕಾರ್ಮಿಕರು ಅಭಿವೃದ್ಧಿಯ ರೂವಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಪ್ರೀತಿಯಿಂದ ವೃತ್ತಿ ಮಾಡಬೇಕು, ಕೀಳರಿಮೆ ಇರಬಾರದು ಎಂದು ಸಂಚಾರಠಾಣೆ ಪಿಎಸ್‌ಐ ಜಿ.ಕೆ.ಬಸವರಾಜು ಅವರು ಕಾರ್ಮಿಕರಿಗೆ ಸಲಹೆ ನೀಡಿದರು.

ಜಿಲ್ಲಾ ದ್ವಿಚಕ್ರ ವಾಹನ ಮೆಕ್ಯಾನಿಕ್‌ಗಳ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು. ಬದುಕಿಗೆ ವೃತ್ತಿ ಅನಿವಾರ್ಯ, ಅದನ್ನು ಗೌರವಿಸಬೇಕು. ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಎಂದು ಹೇಳಿದರು.

‘ಯಾವುದೇ ವೃತ್ತಿ ಕೀಳಲ್ಲ. ಶ್ರದ್ಧೆ, ಛಲ, ಪರಿಶ್ರಮ ಇದ್ದರೆ ಯಾವುದೇ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಸಂಘದ ಜಿಲ್ಲಾಘಟಕದ ಅಧ್ಯಕ್ಷ ಅಬೂಬಕ್ಕರ್ ಮಾತನಾಡಿ, ಮೆಕ್ಯಾನಿಕ್‌ಗಳು ವಾಹನ ರಿಪೇರಿ ಮಾಡುವಾಗ, ಚಾಲನೆ ಮಾಡುವಾಗ ಗಾಯಗೊಂಡರೆ, ಮೃತಪಟ್ಟರೆ ಸಂಘದಿಂದ ನೆರವು ನೀಡಲಾಗುತ್ತದೆ. ಮೆಕ್ಯಾನಿಕ್‌ಗಳ ಹಿತ ಕಾಯುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗಿದೆ ಎಂದರು.

ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷ ಮಹೇಶ್, ಸಹಕಾರ್ಯದರ್ಶಿ ಮಹಮದ್ ಅಸ್ಲಂ, ಸಂಘಟನಾ ಕಾರ್ಯದರ್ಶಿ ಜೈರಾಂ ಇದ್ದರು.

‘ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ’

ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ತರವಾದುದು ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಹೇಳಿದರು.

ಜೆಡಿಎಸ್ ಕಾರ್ಮಿಕ ವಿಭಾಗದ ವತಿಯಿಂದ ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು.

‘ಕೃಷಿ, ಕೈಗಾರಿಕೆ, ಇತರ ಕ್ಷೇತ್ರಗಳ ಅಭಿವೃದ್ಧಿಗೆ ಕಾರ್ಮಿಕರ ಶ್ರಮ ಮುಖ್ಯವಾಗಿರುತ್ತದೆ. ಕಾರ್ಮಿಕರನ್ನು ಕಡೆಗಣಿಸಿದರೆ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಅವರುಗೆ ದುಡಿಮೆಗೆ ತಕ್ಕ ಪ್ರತಿಫಲ ದೊರೆಯಬೇಕು’ ಎಂದು ಹೇಳಿದರು.

ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸಲು ಸರ್ಕಾರ ಆದ್ಯತೆ ನೀಡಬೇಕು. ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದರು.

ಪಕ್ಷದ ಕಾರ್ಮಿಕ ವಿಭಾಗದ ಜಿಲ್ಲಾಘಟಕದ ಅಧ್ಯಕ್ಷ ಮಾನು ಮಿರಾಂಡ, ಮುಖಂಡರಾದ ಮಂಜಪ್ಪ, ಎಂ.ಡಿ.ರಮೇಶ್, ಹೊಲದಗದ್ದೆ ಗಿರೀಶ್, ಜಿ.ಎಸ್.ಚಂದ್ರಪ್ಪ, ಸೋಮೇಗೌಡ, ಲಕ್ಷ್ಮಣ್, ಚಿದಾನಂದ್, ವಿನಯ್ ರಾಜ್, ಜಯರಾಜ್ ಅರಸ್ ಇದ್ದರು.

ಸವಲತ್ತುಗಳ ಪ್ರಯೋಜನ ಪಡೆಯಲು ಸಲಹೆ

ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.

ಆಜಾದ್ ಪಾರ್ಕ್‌ ವೃತ್ತದಲ್ಲಿ ಕಾರ್ಮಿಕರಿಗೆ ಸಿಹಿ ಹಂಚಿ ಶುಭಾಶಯ ಕೋರಿದರು.

ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್ ಮಾತನಾಡಿ, ಅಸಂಘಟಿತ ಕಾರ್ಮಿಕರ ಭದ್ರತೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಕಾರ್ಮಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ಸಮಿತಿಯ ಜಿಲ್ಲಾಘಟಕದ ಅಧ್ಯಕ್ಷ ರಸೂಲ್ ಖಾನ್, ಉಪಾಧ್ಯಕ್ಷ ಜೋಸೆಫ್, ಸದಸ್ಯರಾದ ಅಮರ್, ಮೂರ್ತಿ, ನಜೀರ್ ಅಹಮದ್ ಇದ್ದರು.

 
‘ಕಾಯಕ ಗೌರವಿಸಿ, ಹಕ್ಕಿಗಾಗಿ ಹೋರಾಟ ಮಾಡಿ’

ಜಾತಿ, ಧರ್ಮ ಮೀರಿದ ಆಚರಣೆ ಕಾರ್ಮಿಕ ದಿನ ಎಂದು ಸಿಪಿಐ ಮುಖಂಡ ಬಿ.ಅಮ್ಜದ್ ಅಭಿಪ್ರಾಯಪಟ್ಟರು.

ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ, ಕ್ಯಾತನಬೀಡು ಪ್ರತಿಷ್ಠಾನ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕ ದಿನಾಚರಣೆಯ ಹಿಂದೆ ದೊಡ್ಡ ಚರಿತ್ರೆ ಇದೆ. ಜಗತ್ತಿನ ಅಭಿವೃದ್ಧಿಗೆ ಕಾರ್ಮಿಕರ ಶ್ರಮ ಅಗತ್ಯ. ಕಾಯಕವನ್ನು ಗೌರವಿಸಬೇಕು. ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದರು.

ಕೃಷಿಕ ಬಾಣೂರು ಚನ್ನಪ್ಪ ಮಾತನಾಡಿ, ‘ದುಡಿದು ತಿನ್ನಬೇಕು. ಕಪಟದ ದುಡಿಮೆ ಆತ್ಮತೃಪ್ತಿ ನೀಡುವುದಿಲ್ಲ’ ಎಂದರು.

ಟೈಲರ್ ಅನಿಲ್‌ಕುಮಾರ್, ಕಾರ್ಮಿಕರಾದ ನವೀನ್, ಚೇತನ್, ರಘು, ಶಿವು ಇದ್ದರು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.