ಅಜ್ಜಂಪುರ: ಸಂತ್ರಸ್ತ ಗ್ರಾಮಗಳಿಗೆ ಹರಿಯದ ಭದ್ರೆ

5

ಅಜ್ಜಂಪುರ: ಸಂತ್ರಸ್ತ ಗ್ರಾಮಗಳಿಗೆ ಹರಿಯದ ಭದ್ರೆ

Published:
Updated:
Deccan Herald

ಅಜ್ಜಂಪುರ: ಭದ್ರಾ ಜಲಾಶಯದಿಂದ ತಾಲ್ಲೂಕಿನ 16 ಕೆರೆಗಳಿಗೆ ನೀರು ಹರಿಸುವಂತೆ ಭದ್ರಾ ಮೇಲ್ದಂಡೆ ಯೋಜನೆ ಸಂತ್ರಸ್ತ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.

ಪ್ರಸ್ತುತ ಕಲ್ಲುಶೆಟ್ಟಿಹಳ್ಳಿಯ ಹೊಸಕೆರೆ ಸೇರಿದಂತೆ ಬಹುತೇಕ ಕೆರೆ ಗಳು ಮಳೆಗಾಲದಲ್ಲೂ ತುಂಬಿಲ್ಲ. ಮಳೆಯಿಂದಲೇ ತುಂಬುತ್ತವೆ ಎಂಬ ನಿರೀಕ್ಷೆಯೂ ಇಲ್ಲ. ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಸುರಂಗ ಮಾರ್ಗ ದಿಂದ ಅಂತರ್ಜಲವೂ ಬಸಿಯುತ್ತದೆ. ಜೀವನಾಡಿಯಾದ ಕೆರೆಗಳು ತುಂಬಿದರೆ ಮಾತ್ರ ನಮ್ಮ ತೋಟಗಳ ಉಳಿವು. ಇಲ್ಲವಾದರೆ ಕುಡಿಯುವ ನೀರಿಗೂ ಪರದಾಟ ತಪ್ಪಿದ್ದಲ್ಲ. ಕೂಡಲೇ ಭದ್ರಾ ಯೋಜನೆಯಿಂದ ತೊಂದರೆಗೆ ಒಳಗಾದ ಭಾಗದ 16 ಕೆರೆಗಳಿಗೆ ನೀರು ಹರಿಸಬೇಕು ಎಂದು ಕಲ್ಲುಶೆಟ್ಟಿಹಳ್ಳಿಯ ರೈತ ಮುಖಂಡ ಶಿವಣ್ಣ ಒತ್ತಾಯಿಸಿದ್ದಾರೆ.

‘ಕಲ್ಲುಶೆಟ್ಟಿ ಹಳ್ಳಿ ಬಳಿಯ ಹೊಸಕೆರೆ 21 ಎಕರೆ ವಿಸ್ತಾರದಲ್ಲಿದೆ. ಸುಮಾರು 10.54 ಎಂಸಿಎಫ್‌ಟಿ (ಮಿಲಿಯನ್ ಕ್ಯೂಬಿಕ್ ಫೀಟ್‌) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಗೊಂಡಿ ದ್ದು, ನೀರು ಹರಿಸಲು ಯಾವುದೇ ಅಡ ಚಣೆ ಇಲ್ಲ’ ಎಂದು ಕೆರೆ ಕಾಮಗಾರಿ ಉಸ್ತುವಾರಿ ವಹಿಸಿದ್ದ ಎಂಜಿನಿಯರ್ ವಿಕಾಸ್ ತಿಳಿಸಿದ್ದಾರೆ.

‘ಕೆರೆಗೆ ನೀರು ಪೂರೈಸುವಂತೆ ಆಗ್ರಹಿಸಿ ಕಲ್ಲುಶೆಟ್ಟಿ ಹಳ್ಳಿ ಬಳಿ ಹಿಂದೆ ರೈತರು ಪ್ರತಿಭಟಿಸಿದಾಗ, ರೈತರೊಂ ದಿಗೆ ನಾನು ಅಂದಿನ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಯಾಗಿ, ವಾಸ್ತವಿಕ ಸ್ಥಿತಿ ತಿಳಿಸಿದ್ದೆ. ಬಳಿಕ ಏತ ನೀರಾವರಿಯಿಂದ ನೀರು ಹರಿಸಲು ಸಚಿವರು ಆದೇಶ ಹೊರಡಿಸಿದ್ದರು. ಸರ್ಕಾರ ಯಾವುದೇ ಇದ್ದರೂ, ತಮ್ಮ ಕ್ಷೇತ್ರದ ಜನರ ಹಿತ ಕಾಯುವ ಕೆಲಸವನ್ನು ಶಾಸಕರು ಮಾಡಬೇಕು. ಈ ನಿಟ್ಟಿನಲ್ಲಿ ಕೆರೆಗೆ ನೀರು ಹರಿಸಲು ಇಲಾಖೆ ಮತ್ತು ಸರ್ಕಾರದ ಮೇಲೆ ಶಾಸಕರು ಒತ್ತಡ ಹಾಕಬೇಕಿದೆ’ ಎಂದು ಮಾಜಿ ಶಾಸಕ ಎಸ್.ಎಂ.ನಾಗರಾಜ್ ಆಗ್ರಹಿಸಿದ್ದಾರೆ.

‘ಭದ್ರಾ ಸಂತ್ರಸ್ತ16 ಕೆರೆಗಳಿಗೆ ನೀರು ಪೂರೈಸಲು ಉಬ್ರಾಣಿ-ಅಮೃತಾಪುರ ಏತ ನೀರಾವರಿಯಲ್ಲಿ ಸರ್ಕಾರ 0.084 ಟಿಎಂಸಿ ನೀರು ಮೀಸಲಿರಿಸಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕಿದೆ’ ಎಂದು ರೈತ ಪರ ಹೋರಾಟಗಾರ ಹಾಗೂ ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್ ರಾಜ್ ಕುಮಾರ್ ತಿಳಿಸಿದ್ದಾರೆ.

ಕೆರೆ ನಿರ್ಮಾಣ ಹಾಗೂ 16 ಕೆರೆಗೆ ನೀರು ಪೂರೈಸಲು ಸರ್ಕಾರದ ಮಂಜೂರಾತಿಗಾಗಿ, ಕೆರೆ ನೀರು ಹರಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಕಳೆದ ಫೆಬ್ರುವರಿಯಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಧರಣಿ ನಡೆಸಿದ್ದೇವೆ. ಪ್ರಸ್ತುತ ಸರ್ಕಾರ ನಮ್ಮ ಕೆರೆಗಳಿಗೆ ನೀರು ಮೀಸಲಿಟ್ಟು, ಆದೇಶ ಹೊರಡಿಸಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ನೀರು ಹರಿಸಲು ಮೀನಾಮೇಶ ಎಣಿಸುತ್ತಿರುವುದು ದುರದೃಷ್ಟಕರ. ಈಗಲೂ ಕೆರೆಗೆ ನೀರು ಹರಿಸಲು ಅಧಿಕಾರಿಗಳು ವಿಫಲವಾದರೆ ಮತ್ತೊಮ್ಮೆ ಪ್ರತಿಭಟನೆಗೂ ಸಿದ್ಧ ಎಂಬ ಎಚ್ಚರಿಕೆಯನ್ನೂ 16 ಕೆರೆಗಳ ಭಾಗದ ರೈತರಾದ ಈರಣ್ಣಯ್ಯ, ವಸಂತ್, ಸೋಮಶೇಖರ್, ಕಲ್ಲೇಶ್, ಗಿರೀಶ್, ಕುಮಾರಪ್ಪ ನೀಡಿದ್ದಾರೆ.

ಅನ್ಯ ಜಿಲ್ಲೆಗಳ ಕುಡಿಯುವ ನೀರು ಪೂರೈಕೆಗಾಗಿ ಭೂಮಿ ಕಳೆದು ಕೊಂಡಿರುವ ಸಂತ್ರಸ್ಥರ ನೆರವಿಗೆ ಶಾಸಕರು ಧಾವಿಸಬೇಕು. ಇನ್ನು ಸರ್ಕಾರವೇ ಮೀಸಲಿರಿಸಿರುವ ಪ್ರಮಾಣದ ನೀರನ್ನು ಕೆರೆಗಳಿಗೆ ಹರಿಸುವ ಕೆಲಸವನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ಕುಡಿಯುವ ನೀರಿಗೂ ಪರದಾಡುವ ಸ್ಥಿತಿ– ಭಯದಲ್ಲಿ ರೈತರು
‘ತಾವು ಶಾಸಕರಾಗಿದ್ದಾಗ, ಭದ್ರಾ ಮೇಲ್ದಂಡೆ ಯೋಜನೆಯಿಂದ ರೈತರಿಗೆ ಆಗಬಹುದಾದದ ಗಂಭೀರ ಪರಿಣಾಮ ಅವಲೋಕಿಸಿ ಕಲ್ಲುಶೆಟ್ಟಿ ಹಳ್ಳಿಯಲ್ಲಿ ₹3 ಕೋಟಿ ವೆಚ್ಚದಲ್ಲಿ ಹೊಸಕೆರೆ ಹಾಗೂ ₹16 ಕೋಟಿ ವೆಚ್ಚದಲ್ಲಿ 16 ಕೆರೆಗಳಿಗೆ ಉಬ್ರಾಣಿ-ಅಮೃತಾಪುರ ಏತ ನೀರಾವರಿಯಿಂದ ನೀರು ಪೂರೈಸಲು ಪೈಪ್ ಲೈನ್ ಪೂರ್ಣಗೊಳಿಸಲಾಗಿತ್ತು. ಅಲ್ಲದೇ ಕಳೆದ ಫೆಬ್ರುವರಿಯಲ್ಲಿ ಪ್ರಾಯೋಗಿಕವಾಗಿ 16 ಕೆರೆಗಳಿಗೆ ನೀರು ಹರಿಸಲಾಗಿತ್ತು. ಕೆರೆಗಳು ತುಂಬದಿದ್ದರೆ ಬೇಸಿಗೆಯಲ್ಲಿ ಸುರಂಗ ಮಾರ್ಗ ಮೇಲ್ಭಾಗದ ಗ್ರಾಮಸ್ಥರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಲಿದೆ. ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇದನ್ನು ಶಾಸಕರು ಅರ್ಥಮಾಡಿಕೊಂಡು, ಸಂಬಂಧಪಟ್ಟ ಸಚಿವರು, ಇಲಾಖೆ, ಅಧಿಕಾರಿಗಳೊಂದಿಗೆ ಚರ್ಚಿಸಿ, 16 ಕೆರೆಗಳಿಗೆ ನೀರು ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಸಲಹೆ ನೀಡಿದ್ದಾರೆ.

‘ಆತಂಕ ಪಡದಿರಿ’
ರೈತರು ಆತಂಕ ಪಡಬೇಕಿಲ್ಲ. ಸದ್ಯ ಹುಣಸಘಟ್ಟ-ಅಮೃತಾಪುರ-ಆದಿಕೆರೆ ಭಾಗದ ಕೆರೆಗಳಿಗೆ ಉಬ್ರಾಣಿ-ಅಮೃತಾಪುರ ಏತ ನೀರಾವರಿಯಿಂದ ನೀರು ಪೂರೈಸಲಾಗುತ್ತಿದೆ. ಸರದಿ ಪ್ರಕಾರ ಹುಲ್ಲುಶೆಟ್ಟಿಹಳ್ಳಿ ಭಾಗದ 16 ಕೆರೆಗಳಿಗೂ ನೀರು ಹರಿಯಲಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !