ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕರ ಟೀಕೆ ಸಲ್ಲದು: ಎಂ.ಪಿ. ಕುಮಾರಸ್ವಾಮಿ

Last Updated 21 ಆಗಸ್ಟ್ 2021, 1:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷಗಳು ಹೇಗಿರಬೇಕು ಎಂದು ಹಿಂದಿನ ನಾಯಕರು ಮಾದರಿ ಹಾಕಿಕೊಟ್ಟಿದ್ದಾರೆ. ನಾಯಕರನ್ನು ಟೀಕಿಸುವುದು ಸರಿಯಲ್ಲ’ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ‘ನೆಹರೂ ಹುಕ್ಕಾ ಬಾರ್‌ ತೆರೆಯಲಿ’ ಎಂದು ಹೇಳಿದ್ದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ‘ಬೆಳೆಯುವ ಹಾದಿಯಲ್ಲಿರುವವರು ಇಂಥ ಟೀಕೆಗಳನ್ನು ಮಾಡಬಾರದು. ಈಚೆಗೆ, ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ಹೀಗಾಗಿ, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ನೆಹರೂ ಪ್ರಧಾನಿಯಾಗಿದ್ದಾಗ ಸಂಸತ್‌ನಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹೆಚ್ಚು ಮಾತನಾಡುತ್ತಿದ್ದರು. ಸ್ಪೀಕರ್‌ ಅವರು ಸಾಕು ನಿಲ್ಲಿಸಿ ಎಂದಾಗ, ನೆಹರೂ ಅವರೇ ವಾಜಪೇಯಿ ಅವರು ಮಾತು ಮುಂದುವರಿಸಲು ಅವಕಾಶ ನೀಡಿ ಎಂದು ಹೇಳಿ ಅವರನ್ನು ಹುರಿದುಂಬಿಸಿದ್ದ ನಿದರ್ಶನಗಳು ಇವೆ. ಮುಂದೊಂದು ದಿನ ದೇಶದ ಪ್ರಧಾನಿ ಆಗುತ್ತೀರಿ ಎಂದು ನೆಹರೂ ಅವರು ವಾಜಪೇಯಿಗೆ ಹೇಳಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.

‘ನೆಹರೂ ಅವರು ನಿಧನರಾದಾಗ ದೇಶದ ಶ್ರೇಷ್ಠ ನಾಯಕರೊಬ್ಬರನ್ನು ಕಳೆದುಕೊಂಡೆವು ಎಂದು ವಾಜಪೇಯಿ ಕಂಬನಿ ಮಿಡಿದಿದ್ದರು’ ಎಂದು ಸ್ಮರಿಸಿದ್ದಾರೆ.

‘ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ನೆಹರೂ ಭಾವಚಿತ್ರವನ್ನು ಸಿಬ್ಬಂದಿ ತೆಗೆದುಹಾಕಿರುತ್ತಾರೆ. ಫೋಟೊ ತೆಗೆದಿರುವುದು ಗೊತ್ತಾದ ತಕ್ಷಣ ವಾಜಪೇಯಿ ಅವರು ವಾಪಸ್‌ ತರಿಸಿ ಕಚೇರಿಯಲ್ಲಿ ಇರಿಸಿಕೊಂಡಿದ್ದರು’ ಎಂದು ತಿಳಿಸಿದ್ದಾರೆ.

‘ಚೀನಾ ಮತ್ತು ಭಾರತ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ದುರ್ಗಿಯಂತೆ ಹೋರಾಟ ಮಾಡಿ ಎಂದು ವಾಜಪೇಯಿ ಹುರಿದುಂಬಿಸಿದ್ದರು. ಆಡಳಿತ, ವಿರೋಧ ಪಕ್ಷ ಯಾವುದು ಇಲ್ಲ ಈಗ ದೇಶದಲ್ಲಿ ಎಲ್ಲ ಒಂದೇ ಪಕ್ಷ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಅವರಿಗೆ ಹೇಳಿದ್ದರು’ ಎಂದು ಕುಮಾರಸ್ವಾಮಿ ಅವರು ಇತಿಹಾಸ ಮೆಲುಕು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT