ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು: ಸೋರುತ್ತಿದೆ ಚಾವಣಿ, ಬೇಕಿದೆ ತುರ್ತು ದುರಸ್ತಿ

ಆರು ದಶಕಗಳನ್ನು ಪೂರೈಸಿರುವ ಆಲ್ದೂರು ಸರ್ಕಾರಿ ಪ್ರೌಢಶಾಲೆ
Last Updated 17 ಜೂನ್ 2022, 19:30 IST
ಅಕ್ಷರ ಗಾತ್ರ

ಆಲ್ದೂರು: ಆರು ದಶಕಗಳನ್ನು ಪೂರೈಸಿರುವ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಚಾವಣಿ ಸಂಪೂರ್ಣ ಹಾಳಾಗಿದ್ದು, ಮಳೆಗಾಲದಲ್ಲಿ ನೀರು ಕಟ್ಟಡದೊಳಗೆ ಸೋರುತ್ತದೆ. ತುರ್ತು ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಶಾಲೆಯ ಮಕ್ಕಳು ಮಳೆಗಾಲದಲ್ಲಿ ನೆನೆದುಕೊಂಡೇ ಪಾಠ ಆಲಿಸಬೇಕಾದ ಸ್ಥಿತಿ ಇದೆ.

ಶಾಲೆಯಲ್ಲಿ ಮೂಲಸೌಕರ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಶುದ್ಧ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊರೆದಿರುವ ಕೊಳವೆಬಾವಿಗೆ ಪೈಪ್ ಲೈನ್ ವ್ಯವಸ್ಥೆ ಮತ್ತು ಮೋಟಾರ್ ಅಳವಡಿಕೆ ಆಗಿಲ್ಲ. ಹಾಗಾಗಿ ಸದ್ಯ ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯವಿಲ್ಲ. ಶಾಲೆಯ ರಂಗಮಂದಿರ, ಕಾಂಪೌಂಡ್‌ ಬಣ್ಣ ಕಾಣದೆ ವರ್ಷಗಳೇ ಕಳೆದಿವೆ. ಮೈದಾನದ ಅಂಚಿನಲ್ಲಿ ತಡೆಗೋಡೆ ಮತ್ತು ಮೆಟ್ಟಿಲು ನಿರ್ಮಾಣ ಆಗಬೇಕಿದೆ. ಅಕ್ಷರ ದಾಸೋಹದ ಅಡುಗೆಮನೆಗೆ ಸೌಕರ್ಯ ಕಲ್ಪಿಸಬೇಕಿದೆ.

ಆಲ್ದೂರು ಹೋಬಳಿಯಲ್ಲಿ ಇರುವ ಏಕೈಕ ಸರ್ಕಾರಿ ಪ್ರೌಢಶಾಲೆ ಇದಾಗಿದ್ದು, ಪ್ರತಿ ವರ್ಷವೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದೆ. ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಇದೇ ಶಾಲೆಯನ್ನು ಅವಲಂಬಿಸಿದ್ದಾರೆ. ಶಾಲೆಯಲ್ಲಿ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ಸೇರಿ 181 ವಿದ್ಯಾರ್ಥಿಗಳಿದ್ದಾರೆ. ಚಾವಣಿ ಹಾಳಾಗಿರುವುದರಿಂದ ಶಾಲೆಯ 9 ಕೊಠಡಿಗಳಲ್ಲೂ ನೀರು ಸೋರುತ್ತದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಸಚಿವ ಸುನಿಲ್ ಕುಮಾರ್ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಈ ಮುಖಂಡರು ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

‘ಮಳೆಗಾಲದಲ್ಲಿ ಅನಾಹುತ ಸಂಭವಿಸುವ ಮುನ್ನವೇ ಶಾಲೆಯ ದುರಸ್ತಿ ಕಾರ್ಯ ಮಾಡಬೇಕಾಗಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ₹40ರಿಂದ ₹50 ಲಕ್ಷದಷ್ಟು ಅನುದಾನದ ಅವಶ್ಯಕತೆ ಇದೆ’ ಎನ್ನುತ್ತಾರೆ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಎಚ್‌.ಎಸ್‌. ಗಿರೀಶ್‌. ವಿಧಾನಪರಿಷತ್ ಸದಸ್ಯ ಎಸ್. ಎಲ್ ಬೋಜೇಗೌಡ ಅವರು ಶಾಲೆಯ ಅಭಿವೃದ್ಧಿಗಾಗಿ ₹3 ಲಕ್ಷ ಅನುದಾನ ನೀಡಿದ್ದು ಒಂದು ಕೊಠಡಿಗೆ ನೆಲಹಾಸು, ಪೇಂಟಿಂಗ್ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ಮಳೆ ಬಿರುಸು ಪಡೆಯುವ ಮುನ್ನವೇ ಶಾಲೆಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದು ಪೋಷಕರಾದ ವೀಣಾ ಗಂಗಾಧರ್, ಶೈಲಾ ಸೋಮಶೇಖರ್, ಚಂದ್ರಶೇಖರ್, ಚಂದು, ರಂಜಿನಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT