ಬುಧವಾರ, ನವೆಂಬರ್ 20, 2019
27 °C

ಅಪರಿಚಿತ ವಾಹನ ಡಿಕ್ಕಿ– ಚಿರತೆ ಸಾವು

Published:
Updated:
Prajavani

ಅಜ್ಜಂಪುರ: ಪಟ್ಟಣ ಸಮೀಪ ಬುಕ್ಕಾಂಬುಧಿ- ಮಸಣೀಕೆರೆ ಮಾರ್ಗದಲ್ಲಿ ಶನಿವಾರ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಮೃತಪಟ್ಟಿದೆ.

ಸಂಜೆ 6ರಿಂದ 6.30ರ ನಡುವೆ ಅಪಘಾತ ನಡೆದಿದೆ. ಚಿರತೆಗೆ ಡಿಕ್ಕಿ ಹೊಡೆದ ವಾಹನವನ್ನು ಯಾರೂ ನೋಡಿಲ್ಲದ ಕಾರಣ ವಾಹನ ಪತ್ತೆ ಆಗಿಲ್ಲ. ಈ ಸಂಬಂಧ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಸ್ಥಳೀಯ ಅರಣ್ಯಾಧಿಕಾರಿ ಸಿದ್ದಪ್ಪ ಕೆ. ಮಲ್ನಾಡ್ ತಿಳಿಸಿದ್ದಾರೆ.

ಚಿರತೆ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ವರದಿ ಬಳಿಕ ಚಿರತೆ ಲಿಂಗ, ವಯಸ್ಸು, ಡಿಕ್ಕಿಯಿಂದ ಯಾವ ಭಾಗಕ್ಕೆ ಏಟು ಬಿದ್ದು ಮೃತಪಟ್ಟಿದೆ ಎಂಬ ವಿವರಗಳನ್ನು ತಿಳಿಸಲಾಗುವುದು ಎಂದು ಸ್ಥಳದಲ್ಲಿದ್ದ ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

‘ಚಿರತೆಯು ಗ್ರಾಮದ ಸಿದ್ದಲಿಂಗೇಶ್ವರ ಬೆಟ್ಟ ಹಾಗೂ ಸ್ಮಶಾನ ಭಾಗದಲ್ಲಿತ್ತು. ನಾನೂ ಸೇರಿದಂತೆ ಹತ್ತಾರು ಜನ ನೋಡಿದ್ದೇವೆ. ಒಂದೂವರೆ ವರ್ಷದಿಂದ ಇತ್ತಾದರೂ ಯಾರೊಬ್ಬರಿಗೂ ತೊಂದರೆ ಕೊಟ್ಟಿರಲಿಲ್ಲ. ಗ್ರಾಮದಿಂದ ಕೇವಲ 500 ಮೀ ಅಂತರದಲ್ಲಿ ಯಾವುದೋ ವಾಹನಕ್ಕೆ ಸಿಕ್ಕು ಸತ್ತಿದೆ’ ಎಂದು ಬುಕ್ಕಾಂಬುಧಿಯ ಮುಖಂಡ ವಿಕಾಸ್ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಪಟ್ಟಣದ ಪಿಎಸ್‍ಐ ರಫೀಕ್, ‘ಅಪಘಾತ ಹಾಗೂ ಇನ್ನಿತರ ಕಾನೂನು ಬಾಹಿರ ಕೃತ್ಯ ಎಸಗಿದ ವಾಹನ ಪತ್ತೆಗಾಗಿ ಬುಕ್ಕಾಂಬುಧಿ ವೃತ್ತದಲ್ಲಿ ನಾಲ್ಕು ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸಿದ್ಧತೆ ನಡೆಸಲಾದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು’ ಎಂದರು.

ಆರ್‌ಎಫ್‌ಒ ಮಹೇಶ್ ನಾಯ್ಕ, ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದರು.

ಪ್ರತಿಕ್ರಿಯಿಸಿ (+)