ಚಿಕ್ಕಮಗಳೂರು: ನಗರದ ಹೊರ ವಲಯದ ಕದ್ರಿಮಿದ್ರಿ ಸಮೀಪದ ಕೆಸವಿನಮನೆ ರಸ್ತೆ ಬದಿಯ ತಂತಿಬೇಲಿಗೆ ಹಾಕಿದ್ದ ಉರುಳಿನಲ್ಲಿ ಸಿಲುಕಿದ್ದ ಚಿರತೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಗುರುವಾರ ರಾತ್ರಿ ರಸ್ತೆ ಬದಿಯ ಬೇಲಿಗೆ ಕಿಡಿಗೇಡಿಗಳು ಹಾಕಿರುವ ಉರುಳಿನಲ್ಲಿ ಸಿಲುಕಿಕೊಂಡಿತ್ತು. ಶುಕ್ರವಾರ ಬೆಳಿಗ್ಗೆ ರಸ್ತೆಯಲ್ಲಿ ತಿರುಗಾಡುವವರು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಬೆಳಿಗ್ಗೆ 6 ಗಂಟೆ ಸುಮಾರಿಗೆ ವಿಷಯ ತಿಳಿದಿದ್ದರೂ ಅರವಳಿಕೆ ತಜ್ಞರು ಶಿವಮೊಗ್ಗದಿಂದ ಬರುತ ತನಕ ಕಾಯಬೇಕಾಯಿತು. 10.45ರ ಸುಮಾರಿಗೆ ಅರವಳಿಕೆ ತಜ್ಞ ಮುರುಳಿ ಮನೋಹರ್ ಸ್ಥಳಕ್ಕೆ ಬಂದರು. ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಚಿರತೆಯನ್ನು ರಕ್ಷಣೆ ಮಾಡಲಾಯಿತು.
ಮೂರು ವರ್ಷದ ಹೆಣ್ಣು ಚಿರತೆ ಸಿಲುಕಿರುವ ಮಾಹಿತಿ ದೊರೆತ ಕೂಡಲೇ ರಕ್ಷಣೆ ಕಾರ್ಯಾಚರಣೆ ಆರಂಭಿಸಲಾಯಿತು. ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆ ನೀಡಿ ಬಳಿಕ ಕಾಡಿಗೆ ಬಿಡಲಾಗುವುದು. ಉರುಳು ಹಾಕಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಅಪರಾಧ. ಉರುಳು ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.