ಮೋದಿ ಅಲೆಗೆ ಮಣೆ; ಮೈತ್ರಿಗೆ ನಿರಾಕರಣೆ

ಬುಧವಾರ, ಜೂನ್ 19, 2019
28 °C
ಮತ್ತೊಮ್ಮೆ ಅರಳಿದ ಕಮಲ; 2ನೇ ಬಾರಿ ಶೋಭಾ ಗೆಲುವು

ಮೋದಿ ಅಲೆಗೆ ಮಣೆ; ಮೈತ್ರಿಗೆ ನಿರಾಕರಣೆ

Published:
Updated:
Prajavani

ಚಿಕ್ಕಮಗಳೂರು: ಬಯಲು ಸೀಮೆ, ಮಲೆನಾಡು, ಕರಾವಳಿ ಭೌಗೋಳಿಕ ವೈಶಿಷ್ಟ್ಯದ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಮಲ ಮತ್ತೊಮ್ಮೆ ಅರಳಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಎರಡನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.

ಮೋದಿ ಹವಾ ಬಿಜೆಪಿ ಅಭ್ಯರ್ಥಿ ಗೆಲುವಿನ ಶ್ರೀರಕ್ಷೆಯಾಗಿದೆ. ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜ್‌ ‘ಕಸರತ್ತು’ ಫಲ ನೀಡಿಲ್ಲ. ಕ್ಷೇತ್ರದ ಮತದಾರರು ಮೈತ್ರಿ ಸೂತ್ರವನ್ನು ನಿರಾಕರಿಸಿದ್ದಾರೆ. ಕಣದಲ್ಲಿ ಒಟ್ಟು 12 ಮಂದಿ ಇದ್ದರು. ಬಿಜೆಪಿ, ಮೈತ್ರಿ ಅಭ್ಯರ್ಥಿ ಬಿಟ್ಟು ಉಳಿದವರು ‘ಮತ ಬೇಟೆ’ ತಂತ್ರಗಾರಿಕೆ ರೂಪಿಸಲು ರಣೋತ್ಸಾಹ ತೋರಲಿಲ್ಲ.

ಟಿಕೆಟ್‌ ಘೋಷಣೆಗೂ ಮುನ್ನ ಬಿಜೆಪಿಯ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ‘ಗೋ ಬ್ಯಾಕ್‌ ಶೋಭಾಕ್ಕ’ ಅಭಿಯಾನ ನಡೆಸಿದರು. ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಒತ್ತಾಯಗಳಿದ್ದವು. ಆದರೆ, ಶೋಭಾ ಅವರಿಗೆ ಟಿಕೆಟ್‌ ಘೋಷಣೆಯಾದ ನಂತರ ಭಿನ್ನಾಭಿಪ್ರಾಯ ತಣ್ಣಗಾಯಿತು. ಒಗ್ಗೂಡಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದರು.

ಕರಾವಳಿಯಲ್ಲಿ ನೆಲೆ ಇಲ್ಲದ ಜೆಡಿಎಸ್‌ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಕಾಂಗ್ರೆಸ್‌ ಪಾಲಿಗೆ ‘ಬಿಸಿ ತುಪ್ಪ’ವಾಗಿತ್ತು. ಮೈತ್ರಿ ಸೂತ್ರಕ್ಕೆ ಕಟ್ಟುಬಿದ್ದು ಮೈತ್ರಿ ಪಕ್ಷಗಳವರು ಕಾರ್ಯನಿರ್ವಹಿಸಿದರೂ ಉಮೇದಿ, ಹುರುಪು ಇರಲಿಲ್ಲ.

ಮೈತ್ರಿ ಪಕ್ಷಗಳ ಮುಖಂಡರಲ್ಲಿ ಹೊಂದಾಣಿಕೆ ಇದ್ದಂತಿದ್ದರೂ, ಕಾರ್ಯಕರ್ತರಲ್ಲಿ ಸಮನ್ವಯ ಸಾಧಿಸುವಲ್ಲಿ ಸಫಲರಾಗಲಿಲ್ಲ. ಕೊನೆವರೆಗೂ ಒಳಬೇಗುದಿ ಶಮನಕ್ಕೆ ‘ಮುಲಾಮು’ ಹಚ್ಚಲೇ ಇಲ್ಲ. ಹೀಗಾಗಿ, ಕಾರ್ಯಕರ್ತರೂ ಕೈಚೆಲ್ಲಿದರು ಎಂದು ಮೈತ್ರಿ ಪಾಳಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್‌ ಪಾಳಯದಲ್ಲೇ ಅಭ್ಯರ್ಥಿಗಾಗಿ ತಲಾಶ್‌ ನಡೆಸಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ವ್ಯಕ್ತಿಯನ್ನು ಕರೆತಂದು ಜೆಡಿಎಸ್‌ ಚಿಹ್ನೆಯಡಿ ಕಣಕ್ಕಿಳಿಸಲಾಯಿತು. ಕ್ಷೇತ್ರದ ಬಯಲು ಸೀಮೆಯ ಬಹಳಷ್ಟು ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಪರಿಚಯ ಇರಲಿಲ್ಲ. ಇದು ಬಿಜೆಪಿಗೆ ಸಹಕಾರಿಯಾಯಿತು.

ಬ್ಯಾಲೆಟ್‌ನಲ್ಲಿ ಕಾಂಗ್ರೆಸ್‌ ಚಿಹ್ನೆ ಇಲ್ಲದಿದ್ದೂ ಹಾಗೂ ಕಾಂಗ್ರೆಸ್‌ ವ್ಯಕ್ತಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರಲ್ಲೂ ಗೊಂದಲ ಇತ್ತು. ಮೈತ್ರಿ ಸೂತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸಿರುವ ವಿಚಾರವನ್ನು ಮೈತ್ರಿ ಪಕ್ಷಗಳು ಮತದಾರರಿಗೆ ತಿಳಿಸುವಲ್ಲಿ ಯಶಸ್ವಿಯಾಗಿಲ್ಲ.

ಶೋಭಾ ಸ್ಪರ್ಧೆಗೆ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ಇದೆ. ಇದು ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿಗೆ ಅನುಕೂಲವಾಗಲಿದೆ. ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ ಪಕ್ಷಗಳ ಮತಗಳು ಒಟ್ಟಾದರೆ ಗೆಲ್ಲಿಸಬಹುದು ಎಂಬ ಮೈತ್ರಿ ಪಕ್ಷದವರ ಲೆಕ್ಕಾಚಾರ ಫಲಿಸಿಲ್ಲ.

ಶೋಭಾ ಕ್ಷೇತ್ರಕ್ಕೆ ಬರುವುದು ಕಡಿಮೆ, ಜನರ ಸಮಸ್ಯೆಗಳನ್ನು ಆಲಿಸಲ್ಲ ಎಂಬ ಮಾತುಗಳು ಆರಂಭದಲ್ಲಿ ಕೇಳಿಬಂದವು. ವಿರೋಧ ಪಕ್ಷಗಳವರು ಕಟಕಿಯಾಡಿದರು. ಮೋದಿ ಅಲೆಯಲ್ಲಿ ಈ ಮಾತುಗಳೂ ‘ಮೌನ’ವಾದವು. ಶೋಭಾ ವಿರುದ್ಧ ಮತವಾಗಿ ಪರಿವರ್ತನೆಯಾಗಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ‘ನೆಟ್‌ವರ್ಕ್‌’ ಚೆನ್ನಾಗಿರುವುದು ಮತ್ತೊಂದು ‘ಪ್ಲಸ್‌ ಪಾಯಿಂಟ್‌’ ಆಗಿದೆ.

ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಹೆಚ್ಚು ಪ್ರಸ್ತಾಪಗಲಿಲ್ಲ. ಅಭ್ಯರ್ಥಿಗಳ ಸಾಮರ್ಥ್ಯ, ದೌರ್ಬಲ್ಯ ಕ್ಷೇತ್ರದ ಸಮಸ್ಯೆಗಳಿಗಿಂತ ಸೇನೆ, ದೇಶ ರಕ್ಷಣೆ, ದೇಶ ಪ್ರೇಮದಂಥ, ಬಾಲಕೋಟ್‌ ಮೇಲಿನ ವಾಯುದಾಳಿ ವಿಚಾರಗಳೇ ಮುಂಚೂಣಿಯಲ್ಲಿದ್ದವು. ಕ್ಷೇತ್ರದಲ್ಲಿಯೂ ಈ ಅಂಶಗಳು ಹೆಚ್ಚು ‘ಚಲಾವಣೆ’ಯಾದವು.

ಚಿಕ್ಕಮಗಳೂರು ಜಿಲ್ಲೆಯ ಕಡೂರು, ಕೊಪ್ಪ, ಶೃಂಗೇರಿ, ಮೂಡಿಗೆರೆ , ಎನ್‌.ಆರ್‌.ಪುರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಗದಿಯಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶವು ಸ್ಥಳೀಯ ಸಂಸ್ಥೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ ಎಂಬುವುದನ್ನು ಕಾದು ನೋಡಬೇಕಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !