ಲೋಕಸಭೆ ಚುನಾವಣೆ; ಬಿಗಿ ಭದ್ರತೆ, ನಿಗಾ

ಶನಿವಾರ, ಮಾರ್ಚ್ 23, 2019
34 °C

ಲೋಕಸಭೆ ಚುನಾವಣೆ; ಬಿಗಿ ಭದ್ರತೆ, ನಿಗಾ

Published:
Updated:
Prajavani

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಕ್ಸಲ್‌ ಪೀಡಿತ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ಇಲ್ಲಿ ಮಂಗಳವಾರ ತಿಳಿಸಿದರು.

ರೌಡಿ ಶೀಟರ್‌ ಪಟ್ಟಿಯಲ್ಲಿನ 1,008 ಮಂದಿ ಪೈಕಿ 638 ಮಂದಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಉಳಿದವರಿಗೆ ಮೂರ್ನಾಲ್ಕು ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಗೆ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು. ಸಶಸ್ತ್ರ ಪ್ಯಾರಾ ಮಿಲಿಟರಿ ತುಕಡಿಗಳು ಇರಲಿವೆ. ಸೂಕ್ಷ್ಮ ಪ್ರದೇಶಗಳಿಗೆ ವಿಶೇಷ ತಂಡಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಆಯೋಜಿಸಲಾಗುವುದು. ಸಾರ್ವಜನಿಕ ಸಭೆಗಳನ್ನು ನಡೆಸಲಾಗುವುದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಚುನಾವಣೆ ಎಷ್ಟು ಮುಖ್ಯ ಎಂಬ ಕುರಿತು ಅರಿವು ಮೂಡಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. 
ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಕೂಂಬಿಂಗ್‌ ಕಾರ್ಯಚರಣೆ ನಿಯಮಿತವಾಗಿ ನಡೆಯುತ್ತದೆ. ಕೆಲವೆಡೆ ಚೆಕ್‌ಪೋಸ್ಟ್‌, ನಿಗಾ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಎಲ್ಲ ಕಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಸ್ಟಾಟಿಕ್‌ ಚೆಕ್‌ಪೋಸ್ಟ್‌ಗಳು, ಅಗತ್ಯ ಇರುವ ಕಡೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಕಣ್ಗಾವಲು ಇರುತ್ತದೆ. ಒಟ್ಟಾರೆ ಚುನಾವಣೆಯನ್ನು ವ್ಯವಸ್ಥಿತವಾಗಿ, ಶಾಂತಿಯುತವಾಗಿ ನಡೆಸಲು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುವುದು. ಚುನಾವಣೆ ನಿಮಿತ್ತ ಗಣ್ಯರು, ಅತಿಗಣ್ಯರು ಜಿಲ್ಲೆಗೆ ಬರುತ್ತಾರೆ. ಭದ್ರತೆ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಉತ್ತರಿಸಿದರು.

‘ಕಳಸ ಬಳಿಯ ಬಸರಿಕಲ್ಲು ಚೆಕ್‌ಪೋಸ್ಟ್‌ ಮೇಲೆ ಎಸೆದಿದ್ದ ಸೀಮೆಎಣ್ಣೆ ತುಂಬಿದ ಬಾಟಲಿಗಳು ಎಂಎಸ್‌ಐಎಲ್‌ನಿಂದ ನಾಲ್ಕು ದಿನಗಳ ಹಿಂದಷ್ಟೆ ಪೂರೈಕೆಯಾಗಿದ್ದವು. ಅಲ್ಲದೇ ಅವು ಬೇರೆ ಜಿಲ್ಲೆಗೆ ಪೂರೈಕೆಯಾಗಿದ್ದವು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದು ತಿಳಿಸಿದರು.

‘ಇದು ನಕ್ಸಲರ ಕೃತ್ಯ ಅಲ್ಲ. ಕೃತ್ಯಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಶಂಕೆ ಇದೆ. ಪುರಾವೆಗಳನ್ನು ಕಲೆ ಹಾಕುತ್ತಿದ್ದೇವೆ. ಶೀಘ್ರದಲ್ಲಿ ಪತ್ತೆ ಮಾಡುತ್ತೇವೆ’ ಎಂದರು.

‘ಬೀರೂರು, ಕಡೂರು ಮತ್ತು ತರೀಕೆರೆಯಲ್ಲಿನ ಸರಗಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ. ಕಡೂರು ಮತ್ತು ಬೀರೂರಿನಲ್ಲಿ ಕಳವು ಮಾಡಿದ್ದವರು ಒಂದೇ ಗ್ಯಾಂಗ್‌ನವರು. ಚಿಕ್ಕಮಗಳೂರಿನ ಕಲ್ಯಾಣನಗರದ ಪ್ರಕರಣ ತನಿಖೆ ನಡೆಯುತ್ತಿದೆ’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಎಸ್‌.ಶ್ರುತಿ ಇದ್ದರು.

15 ಪ್ರಕರಣಗಳಲ್ಲಿ ಶಿಕ್ಷೆ: ಎಸ್ಪಿ

2013, 218 ವಿಧಾನಸಭೆ ಚುನಾವಣೆ, 2014 ಲೋಕಸಭೆ ಚುನಾವಣೆಗಳಲ್ಲಿ ಒಟ್ಟು 66 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 15 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ಎಸ್ಪಿ ಹರೀಶ್‌ ಪಾಂಡೆ ತಿಳಿಸಿದರು.

ಇನ್ನು 24 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ, ಬೇರೆಬೇರೆ ಕಾರಣಕ್ಕೆ 9 ಪ್ರಕರಣ ವಜಾ ಆಗಿವೆ, 18 ಪ್ರಕರಣ ಖುಲಾಸೆಯಾಗಿವೆ ಎಂದು ತಿಳಿಸಿದರು.

‘ತನಿಖೆ ಚುರುಕು, ಹಂತಕರ ಪತ್ತೆ ಶೀಘ್ರ’

ಬಿಜೆಪಿ ನಗರ ಘಟಕದ ಅನ್ವರ್‌ ಕಾರ್ಯದರ್ಶಿ ಮಹಮದ್‌ ಅನ್ವರ್‌ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಚುರುಕುಗೊಳಿಸಿದ್ದೇವೆ. ಸಾಕ್ಷ್ಯ,ಪುರಾವೆಗಳೊಂದಿಗೆ ಹಂತಕರನ್ನು ಶೀಘ್ರದಲ್ಲಿ ಪತ್ತೆ ಮಾಡುತ್ತೇವೆ ಎಂದು ಎಸ್ಪಿ ಹರೀಶ್‌ ಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಶೃಂಗೇರಿಯ ಅಭಿಷೇಕ್‌ ಪ್ರಕರಣದ ತನಿಖೆ ಬಹುತೇಕ ಮುಗಿದಿದೆ. ಇನ್ನೊಂದು ವಾರದಲ್ಲಿ ಅಂತಿಮ ವರದಿ ಕೈಸೇರಲಿದೆ. ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ತನಿಖೆ ಮುಗಿಯಲಿದೆ ಎಂದು ಪ್ರತಿಕ್ರಿಯಿಸಿದರು.

ಕೊಲೆ; ಆರೋಪಿಗಳ ಪತ್ತೆಗೆ ತಂಡ ರಚನೆ

‘ತರೀಕೆರೆಯಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಅರುಣ್‌ (23) ಎಂಬಾತನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ಎರಡು ತಂಡ ರಚನೆ ಮಾಡಲಾಗಿದೆ’ ಎಂದು ತಿಳಿಸಿದರು.

‘ತರೀಕೆರೆ ಮತ್ತು ಬೀರೂರು ಠಾಣೆಯಿಂದ ತಲಾ ಒಂದು ತಂಡ ರಚಿಸಲಾಗಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಶಂಕೆ ಇದೆ. ಜಾತ್ರೆ ಸಂದರ್ಭದ ಜಟಾಪಟಿ, ವೈಯುಕ್ತಿಕ ದ್ವೇಷ ಹಿನ್ನೆಲ್ಲೆಯಲ್ಲಿ ಕೃತ್ಯ ಎಸಗಿದ್ದಾರೆಂದು ಶಂಕಿಸಲಾಗಿದೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !