ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪೂ ಜೀವನಗಾಥೆ ದರ್ಶನ ಗ್ಯಾಲರಿ | ರಾಷ್ಟ್ರಪಿತ ನೆನಪಿನ ಅಂಗಳ, ಅಮೃತ ಅಂಗಳ

Last Updated 13 ಆಗಸ್ಟ್ 2022, 23:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಜಿಲ್ಲೆಯ ಹಲವರು ಸೆಣಸಿದ್ದಾರೆ. ಉಪವಾಸ, ಸೆರೆವಾಸ, ಬ್ರಿಟಿಷರ ಕಿರುಕುಳ ಅನುಭವಿಸಿದ ಚಿತ್ರಣಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

1927ರಲ್ಲಿ ಜಿಲ್ಲೆಗೆ ಗಾಂಧೀಜಿ ಅವರು ಭೇಟಿ ನೀಡಿದ್ದು ಐತಿಹಾಸಿಕ ಸಂದರ್ಭ. ಗಾಂಧೀಜಿ ಅವರು ಕಡೂರು ಮತ್ತು ಚಿಕ್ಕಮಗಳೂರಿನಲ್ಲಿ ಸಭೆಯಲ್ಲಿ ಭಾಷಣ ಮಾಡಿದ್ದರು. ಅವರನ್ನು ನೋಡಿ, ಭಾಷಣ ಕೇಳಿ ಪ್ರೇರಿತರಾಗಿ ಬದುಕಿನುದ್ದಕ್ಕೂ ಗಾಂಧೀಜಿ ಮಾರ್ಗ ಅನುಸರಿಸಿದವರೂ ಇದ್ದಾರೆ.

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಮದ್ಯಪಾನ ನಿರೋಧ, ಉಪ್ಪಿನ ಸತ್ಯಾಗ್ರಹ, ಅಸ್ಪಶ್ಯತೆ ನಿವಾರಣೆ ಮೊದಲಾದ ಚಳವಳಿಗಳಲ್ಲಿ ತೊಡಗಿಸಿಕೊಂಡು ಹೆಜ್ಜೆ ಗುರುತು ಮೂಡಿಸಿದ್ದಾರೆ. ಮಹಿಳೆಯರೂ ಸಕ್ರಿಯವಾಗಿ ಭಾಗವಹಿಸಿದ ಉದಾಹರಣೆಗಳು ಇವೆ.

ಖಾದಿ ಪ್ರಚಾರದಲ್ಲೂ ಭಾಗವಹಿಸಿ ಜೀವನಪೂರ್ತಿ ಖಾದಿಯನ್ನೇ ಧರಿಸಿದವರೂ ಇದ್ದಾರೆ. ಅನೇಕ ವಿದ್ಯಾರ್ಥಿಗಳು ಶಾಲೆ–ಕಾಲೇಜು ಬಹಿಷ್ಕರಿಸಿ ಹೋರಾಟ ಮಾಡಿದ್ದಾರೆ.

ಗಾಂಧೀಜಿ ವ್ಯಕ್ತಿತ್ವಕ್ಕೆ ಜನರನ್ನು ಸೆಳೆಯುವ ಅದ್ಭುತ ಶಕ್ತಿ ಇತ್ತು. ಅವರು ‘ನನ್ನ ಜೀವನವೇ, ನನ್ನ ಸಂದೇಶ’ ಎಂದು ಹೇಳಿದ ಮಹನೀಯ. ಜಿಲ್ಲೆಯಲ್ಲಿ ಬಾಪೂಜಿ ಅನುಯಾಯಿಗಳಾಗಿ ಅವರ ಆದರ್ಶಗಳನ್ನು ಪಾಲಿಸಿ ಗಾಂಧೀವಾದಿಗಳು ಎಂದು ಹೆಸರು ಪಡೆದಿದ್ದಾರೆ.

ಅಜ್ಜಂಪುರ, ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಎಲ್ಲ ಕಡೆಗಳವರು ಸ್ವಾತಂತ್ರ್ಯ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸಿದ ಕುರುಹುಗಳು ಇವೆ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ದೊಡ್ಡಪಟ್ಟಿಯೇ ಇದೆ.

ದೇಶಕ್ಕೆ ಸ್ವಾತಂತ್ರ್ಯ ಸಂದ ಅಮೃತ ವರ್ಷದ ಸ್ಮರಣಾರ್ಥ ಚಿಕ್ಕಮಗಳೂರಿನಲ್ಲಿ ‘ಅಮೃತ ಅಂಗಳ’, ‘ರಾಷ್ಟ್ರಪಿತ ನೆನಪಿನಂಗಳ’ಗಳನ್ನು ನಿರ್ಮಿಸಲಾಗಿದೆ. ಬಾಪೂಜಿ ಅವರು ಭಾಷಣ ಮಾಡಿದ್ದ ಪ್ರದೇಶದಲ್ಲೇ (ಈಗಿನ ಜಿಲ್ಲಾಧಿಕಾರಿ ಕಚೇರಿ ಮೊಗಸಾಲೆ) ‘ಮಹಾತ್ಮ ಗಾಂಧಿ ಪ್ರತಿಮೆ’ ಮತ್ತು ‘ಗಾಂಧೀಜಿ ಜೀವನದ ಮೈಲುಗಲ್ಲುಗಳ ಯಾನದ ಅಪರೂಪದ ಫೋಟೊಗಳ ಗ್ಯಾಲರಿ’ ಸಜ್ಜುಗೊಳಿಸಲಾಗಿದೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಬೆಂಗಳೂರಿನ ಚಿತ್ರಕಲಾ ಪರಿಷತ್‌ ನೆರವಿನಿಂದ ಅಂಗಳಗಳು ಸಜ್ಜುಗೊಂಡಿವೆ.

ಗಾಂಧೀಜಿ ಅವರ ಬಾಲ್ಯದಿಂದ ಮರಣದವರೆಗಿನ ಸುಮಾರು 40 ಛಾಯಾಚಿತ್ರಗಳು ಈ ಗ್ಯಾಲರಿಯಲ್ಲಿವೆ. ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್‌ ಕೆ.ಚಂದ್ರಶೇಖರ್‌ ಅವರ ಪರಿಕಲ್ಪನೆ, ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಅವರ ವಿನ್ಯಾಸದಲ್ಲಿ ಗ್ಯಾಲರಿ ನಿರ್ಮಾಣವಾಗಿದೆ.

ಗಾಂಧೀಜಿ ಅವರು 1927ರ ಆ.18ರಂದು ಕಡೂರಿನಲ್ಲಿ ಮತ್ತು 19ರಂದು ಚಿಕ್ಕಮಗಳೂರಿನಲ್ಲಿ ನಡೆಸಿದ ಛಾಯಾಚಿತ್ರಗಳು ಇವೆ. ‘ಗಾಂಧೀಜಿ ಬಾಲ್ಯದ ಚಿತ್ರಗಳು’, ‘ಗಾಂಧೀಜಿ ಹುಟ್ಟಿದ್ದ ಮನೆ (ಪೋರಬಂದರು), ‘ಗಾಂಧೀಜಿ ತಂದೆ ಕರಮಚಂದ್‌ ಗಾಂಧೀ’, ‘ತಾಯಿ ಪುತಲೀಬಾಯಿ’, ‘ಪತ್ನಿ ಕಸ್ತೂರಬಾ’,‘ದಂಡಿ ಸತ್ಯಾಗ್ರಹ’, ‘ಗಾಂಧೀಜಿ ಸೈಕಲ್‌ ಸವಾರಿ, ‘ಕೈಬರಹದ ಪತ್ರ’, ಬೆಂಗಳೂರು, ಕೋಲಾರ, ಮಂಗಳೂರು, ಮೈಸೂರು, ಮಂಡ್ಯ, ಬೆಳಗಾವಿ ಭೇಟಿ, ಗಾಂಧೀಜಿ ಅವರ ಸಮಾಧಿ ಸ್ಥಳ ದೆಹಲಿಯ ರಾಜ್‌ಘಾಟ್‌ ಮೊದಲಾದ ಅಪರೂಪದ ಫೋಟೊಗಳು ಇವೆ.

ಅಂಗಳದಲ್ಲಿನ ಫೋಟೊಗಳು ಬಾಪೂವಿನ ಜೀವನಗಾಥೆಯ ದರ್ಶನದ ಜತೆಗೆ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ಅನೇಕ ಚಿತ್ರಣವನ್ನು ಕಟ್ಟಿಕೊಡುತ್ತವೆ. ಈ ಅಂಗಳವು ಗಾಂಧೀಜಿ ಸ್ಪರ್ಶದ ತಾಣ ಇದು.

‘ಮ್ಯೂಸಿಯಂ ನಿರ್ಮಾಣ ಚಿಂತನೆ’

ದಂಟರಮಕ್ಕಿ ಕೆರೆ ಪಕ್ಕ ತೋಟಗಾರಿಕೆ ಇಲಾಖೆ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಈಗಿರುವ ಜಿಲ್ಲಾಧಿಕಾರಿ ಕಚೇರಿಯು ಪಾರಂಪರಿಕ ಕಟ್ಟಡ. ಹೊಸ ಕಟ್ಟಡ ನಿರ್ಮಾಣವಾದ ನಂತರ ಈ ಕಟ್ಟಡವನ್ನು ಮುಂದಿನ ದಿನಗಳಲ್ಲಿ ವಸ್ತು ಸಂಗ್ರಹಾಲಯವಾಗಿ (ಮ್ಯೂಸಿಯಂ) ಪರಿವರ್ತಿಸುವ ಚಿಂತನೆ ಇದೆ’ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

‘ಗಾಂಧೀಜಿ ಭೇಟಿ ಸ್ಮರಣಾರ್ಥ ನೆನಪಿನಂಗಳ ನಿರ್ಮಾಣ’

‘ಗಾಂಧೀಜಿ ಜಿಲ್ಲೆಗೆ ಭೇಟಿ ನೀಡಿದ್ದ ಸ್ಮರಣಾರ್ಥ ಗ್ಯಾಲರಿ ಸಜ್ಜುಗೊಳಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೊಗಸಾಲೆ ಗ್ಯಾಲರಿಗೆ ಪೂರಕವಾಗಿತ್ತು. ಚಿತ್ರಗಳನ್ನು ದೆಹಲಿಯಿಂದ ತರಿಸಿದೆವು. ಒಂದೇ ಸೂರಿನಡಿ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಈಗ ಅವಕಾಶವಾಗಿದೆ’ ಎಂದು ಗ್ಯಾಲರಿ ಪರಿಕಲ್ಪನೆ ರೂಪಿಸಿದ ಶಿರಸ್ತೇದಾರ್‌ ಕೆ.ಚಂದ್ರಶೇಖರ್‌ ಎಂದು ‘ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT