ಶುಕ್ರವಾರ, ಮಾರ್ಚ್ 5, 2021
30 °C
ಜೀವ ಕೈಯಲ್ಲಿಡಿದುಕೊಂಡು ಶಾಲೆಗೆ ಹೋಗುವ ಮಕ್ಕಳು

ಕೊಟ್ಟಿಗೆಹಾರ: ಕಾಯಕಲ್ಪಕ್ಕೆ ಕಾದಿರುವ ಮಕ್ಕಿಮನೆ ಗ್ರಾಮ

ಅನಿಲ್‍ ಮೊಂತೆರೊ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ: ಮಕ್ಕಿಮನೆ ಗ್ರಾಮ ತಲುಪಲು ಸೂಕ್ತ ರಸ್ತೆ ಇಲ್ಲದ ಕಾರಣ ಗ್ರಾಮದ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಹಲವು ವರ್ಷಗಳ ಹಿಂದೆ ಸ್ಥಳೀಯ ಪಂಚಾಯಿತಿ ವತಿಯಿಂದ ಆರಂಭಗೊಂಡಿದ್ದ ಗುಂಪು ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈಗ ಇಡೀ ಊರಿಗೆ ಊರೇ ಪಾಳುಬಿದ್ದಂತೆ ಕಾಣಿಸುತ್ತಿದೆ.

ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಿಮನೆ ಗ್ರಾಮಕ್ಕೆ ಸರಿಯಾದ ರಸ್ತೆ ಸೌಲಭ್ಯವಿಲ್ಲ. ನಿಡುವಾಳೆ ಪೇಟೆಯಿಂದ ಮಕ್ಕಿಮನೆ ಗ್ರಾಮಕ್ಕೆ ಹೋಗಲು ಒಂದು ಕಿ.ಮೀ.ನಷ್ಟು ಉದ್ದದ ಕಾಲುದಾರಿ ಇದೆ. ಆದರೆ, ಈ ಮಾರ್ಗ ಅಭಿವೃದ್ಧಿಯಾಗದ ಕಾರಣ ಮಕ್ಕಿಮನೆ ಗ್ರಾಮಸ್ಥರು ನಿಡುವಾಳೆ, ಬಾಳೂರು ಹ್ಯಾಂಡ್‍ಪೋಸ್ಟ್, ಜಾವಳಿ ಮೂಲಕ 13 ಕಿ.ಮೀ. ಬಳಸಿಕೊಂಡು ಊರಿಗೆ ಹೋಗಬೇಕಾದ ಸ್ಥಿತಿ ಇದೆ.

2005- 06ನೇ ಸಾಲಿನಲ್ಲಿ ಮಕ್ಕಿಮನೆ ಗ್ರಾಮದ ಕೆಲವರಿಗೆ ನಿಡುವಾಳೆ ಗ್ರಾಮ ಪಂಚಾಯಿತಿ ವತಿಯಿಂದ ಗುಂಪು ಮನೆಗಳನ್ನು ನಿರ್ಮಿಸಿ ಕೊಡಲು ಉದ್ದೇಶಿಸಿ, ಗುತ್ತಿಗೆದಾರರೊಬ್ಬರಿಗೆ ಆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಗ್ರಾಮಕ್ಕೆ ರಸ್ತೆ ಸೌಕರ್ಯವಿಲ್ಲದೇ ಮನೆ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಸಾಗಿಸಲು ಹೆಚ್ಚಿನ ವೆಚ್ಚವಾಗುವುದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತು. ಇದರಿಂದಾಗಿ ಮಕ್ಕಿಮನೆ ಗ್ರಾಮದಲ್ಲಿ ಅರ್ಧ ಕಟ್ಟಿದ ಗೋಡೆಗಳು, ಪಾಳುಬಿದ್ದ ಮನೆಗಳು ಎಲ್ಲೆಂದರಲ್ಲಿ ಕಂಡು ಬರುತ್ತಿವೆ.

ಮನೆ ಸಿಗುತ್ತಿದೆ ಎಂಬ ನಿರೀಕ್ಷೆಯಲ್ಲಿದ್ದ ಅನೇಕ ಫಲಾನುಭವಿಗಳು ಇದರಿಂದಾಗಿ ನಿರಾಶೆಗೊಂಡರು. ವರ್ಷಗಳೇ ಕಳೆದರೂ ಮನೆ ನಿರ್ಮಾಣ ಪೂರ್ಣಗೊಳ್ಳದಿದ್ದಾಗ ಅವರೆಲ್ಲಾ ಗ್ರಾಮವನ್ನು ತೊರೆದು ಪಕ್ಕದ ಕಾಫಿ ಎಸ್ಟೇಟ್‌ನ ಲೈನುಮನೆಗಳಲ್ಲಿ ವಾಸಿಸತೊಡಗಿದರು. ಈಗ ಕೆಲವು ಜನರು ಮಾತ್ರ ಗ್ರಾಮದಲ್ಲಿ ವಾಸವಿದ್ದಾರೆ.

ಮಕ್ಕಿಮನೆ ಗ್ರಾಮದ ಮಕ್ಕಳು ನಿಡುವಾಳೆಯಲ್ಲಿರುವ ಶಾಲೆಗೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಕಾಡಾನೆ, ಹಾವು, ಕಾಡೆಮ್ಮೆ ಮತ್ತಿತ್ತರ ವನ್ಯಮೃಗಗಳ ಕಾಟದಿಂದಾಗಿ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಬಹುತೇಕರು ತಮ್ಮ ಮಕ್ಕಳನ್ನು ಬೇರೆ ಊರಿನ ಸಂಬಂಧಿಕರ ಮನೆಗಳಲ್ಲಿ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಬಿಟ್ಟು ಶಿಕ್ಷಣ ಕೊಡಿಸುತ್ತಿದ್ದಾರೆ.

‘2005-06ನೇ ಸಾಲಿನಲ್ಲಿ ಪ್ರಾರಂಭಗೊಂಡಿದ್ದ ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತು ಹೋಯಿತು. ಮನೆ ಇಲ್ಲದೇ ಇರುವುದರಿಂದ ಈಗ ಕಾಫಿ ಎಸ್ಟೇಟ್‌ನ ಲೈನುಮನೆಯಲ್ಲಿ ವಾಸವಿದ್ದೇವೆ. ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿ, ನಮ್ಮೆಲ್ಲರ ಸ್ವಂತ ಮನೆಯ ಕನಸನ್ನು ಸರ್ಕಾರ ನನಸು ಮಾಡಬೇಕು’ ಎನ್ನುತ್ತಾರೆ ತೋಟದ ಕಾರ್ಮಿಕ ಸಂಜೀವ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು