ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು ಗಿಡ್ಡ ದೇಸಿ ತಳಿ ಸಂರಕ್ಷಣೆ

ನೂರಾರು ಗೋವುಗಳಿಗೆ ಆಶ್ರಯ ತಾಣ ಮೇಲುಬಿಲರೆಯ ‘ಗೋಲೋಕ’
Last Updated 26 ಸೆಪ್ಟೆಂಬರ್ 2021, 3:23 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಹರಿಹರಪುರ ಸಮೀಪದ ಮೇಲುಬಿಲರೆಯಲ್ಲಿ ‘ಮಲೆನಾಡು ಗಿಡ್ಡ ಗೋ ಸಂವರ್ಧನಾ ಕೇಂದ್ರ’ ಟ್ರಸ್ಟ್ ವತಿಯಿಂದ 2019ರಲ್ಲಿ ಕೇವಲ ನಾಲ್ಕೈದು ಗೋವುಗಳ ಮೂಲಕ ಪ್ರಾರಂಭಿಸಲಾದ ‘ಗೋಲೋಕ’ ಗೋಶಾಲೆಯಲ್ಲಿ ಪ್ರಸ್ತುತ 200ಕ್ಕೂ ಹೆಚ್ಚು ಜಾನುವಾರಿಗೆ ಆಶ್ರಯ ನೀಡಲಾಗಿದೆ.

ಮಲೆನಾಡಿನಲ್ಲಿ ಇತ್ತೀಚೆಗೆ ಗೋವುಗಳ ಸಾಕಣೆ ಕಡಿಮೆಯಾಗುತ್ತಿದೆ. ದೇಸಿ ತಳಿಯಂತೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಎಲ್ಲೋ ರಸ್ತೆಯಲ್ಲಿ ಮಲಗಿ ವಾಹನಕ್ಕೆ ಸಿಕ್ಕಿ ಸಾಯುವ ಗೋವುಗಳು ಒಂದೆಡೆಯಾದರೆ, ಹಂತಕರ ಕೈಗೆ ಸಿಕ್ಕಿ ನಲುಗುವ ಗೋವುಗಳು ಮತ್ತೊಂದೆಡೆ. ಹಾಲು ಕೊಡುವ ದನವನ್ನೇ ಸಾಕುವವರ ಸಂಖ್ಯೆ ಕಡಿಮೆ ಇರುವ ಇಂದಿನ ದಿನಗಳಲ್ಲಿ ಹೋರಿಯನ್ನು ಸಾಕುತ್ತಾರೆ ಎಂಬುದು ಒಪ್ಪದ ಮಾತು. ಇಂತಹ ನಿರ್ಲಕ್ಷ್ಯಕ್ಕೆ ಒಳಗಾದ ಅದೆಷ್ಟೋ ಗೋವುಗಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ. ಗಂಡು ಕರುಗಳೇ (ಹೋರಿಗಳು) ಇಲ್ಲಿ ಹೆಚ್ಚಿರುವುದು ವಿಶೇಷ.

ಇಲ್ಲಿನ ಗೋವುಗಳಿಗೆ ಪ್ರತಿದಿನ 5 ರಿಂದ 10 ಚೀಲಗಳಷ್ಟು ಹಿಂಡಿ, ತಿಂಗಳಿಗೆ 3 ಲಾರಿಯಷ್ಟು ಮೇವು ಬೇಕಾಗುತ್ತದೆ. ದಾನಿಗಳು, ಗೋ ಪ್ರೇಮಿಗಳೇ ಬಹುತೇಕ ಇವೆಲ್ಲವನ್ನೂ ಪೂರೈಸುತ್ತಿದ್ದಾರೆ. ಗೋಶಾಲೆ ಆವರಣದಲ್ಲಿನ 2 ಎಕರೆ ಜಾಗದಲ್ಲಿ ಹಸಿ ಹುಲ್ಲು ಬೆಳೆಯಲಾಗುತ್ತಿದೆ. ಗೋವುಗಳನ್ನು ಪ್ರತಿದಿನ ಮೇಯಲು ಬಿಡಲಾಗುತ್ತಿದೆ, ಅವುಗಳನ್ನು ನೋಡಿಕೊಳ್ಳಲು, ಆರೈಕೆಗಾಗಿ ಪ್ರತಿದಿನ 5 ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಕರು ಹಾಕಿದ ಗೋವುಗಳನ್ನೇ ಒಂದೆಡೆ, ಮತ್ತೊಂದೆಡೆ ಹೋರಿಗಳಿಗೆ ಶೆಡ್ ನಿರ್ಮಿಸಲಾಗಿದೆ. ಈಗ ಇರುವ 5 ಎಕರೆ ಜಾಗದಲ್ಲಿ 500 ಗೋವುಗಳಿಗೆ ಸಾಕಾಗುವಷ್ಟು ಸ್ಥಳಾವಕಾಶವಿದೆ. ಟ್ರಸ್ಟ್‌ನವರು 1 ಸಾವಿರ ಗೋವುಗಳನ್ನು ಸಾಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇದೀಗ ಲಭ್ಯವಿರುವ ಜಾಗ ಹುಲ್ಲು ಬೆಳೆಯಲು, ಗೋವುಗಳಿಗೆ ಶೆಡ್ ನಿರ್ಮಿಸಲು ಸಾಕಾಗುವುದಿಲ್ಲ. ಇದಕ್ಕಾಗಿ 12 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿಕೊಡುವಂತೆ ಬೇಡಿಕೆ ಇರಿಸಿದ್ದಾರೆ.

‘ಮಲೆನಾಡು ಗಿಡ್ಡ ಗೋವು ಸಂವರ್ಧನಾ ಕೇಂದ್ರ’ ಟ್ರಸ್ಟ್‌ನಲ್ಲಿ 9 ಟ್ರಸ್ಟಿಗಳಿದ್ದು, ಬಹುತೇಕ ಮಂದಿ ಬೆಂಗಳೂರಿನವರೇ ಆಗಿದ್ದಾರೆ. ದೇಸಿ ತಳಿ ಸಂರಕ್ಷಣೆಗೆ ವಿಶೇಷ ಆಸಕ್ತಿ ವಹಿಸಿದ ಕೆ.ಎನ್.ಶೈಲೇಶ್ ಹೊಳ್ಳ ಅವರ ಪರಿಶ್ರಮದ ಫಲವಾಗಿ ಎರಡು ವರ್ಷಗಳ ಹಿಂದೆ ಗೋಶಾಲೆ ಆರಂಭಗೊಂಡಿತು. ಪ್ರಸ್ತುತ ಟ್ರಸ್ಟ್‌ನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಹಾಗೂ ಕಾರ್ಯದರ್ಶಿಯಾಗಿ ಕೊಪ್ಪದ ರಮೇಶ್ ಶೆಟ್ಟಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಗೋ ಶಾಲೆಗೆ ಹೋಗುವ ಮಾರ್ಗ: ಕೊಪ್ಪ ತಾಲ್ಲೂಕು ಕೇಂದ್ರದಿಂದ ಆಗುಂಬೆ ಕಡೆಗೆ ಹೋಗುವ ರಸ್ತೆಯಲ್ಲಿ ಕಾಳನಾಯಕನಕಟ್ಟೆ ಎಂಬ ಗ್ರಾಮವಿದೆ. ಅಲ್ಲಿಂದ ಗೌರಿಗದ್ದೆಯ ದತ್ತಾಶ್ರಮಕ್ಕೆ ಹೋಗುವ ರಸ್ತೆಯಲ್ಲಿ ಕೆಲವೇ ಕಿ.ಮೀ.ದೂರ ಸಾಗಿದರೆ ಹತ್ತಿರದಲ್ಲಿ ಗೋಶಾಲೆಗೆ ಮಾರ್ಗವಿದೆ.

‘ದತ್ತು ಅವಕಾಶ’

ಆಸಕ್ತರಿಗೆ, ಗೋ ಪ್ರೇಮಿಗಳಿಗೆ ಇಲ್ಲಿನ ಗೋ ಶಾಲೆಯಲ್ಲಿ ಗೋವುಗಳನ್ನು ದತ್ತು ಪಡೆದು ಸಾಕಲು ಕೂಡ ಅವಕಾಶವಿದೆ. ಅವುಗಳ ಆರೈಕೆಗೆ ವಾರ್ಷಿಕವಾಗಿ ತಗಲುವ ಮೊತ್ತವನ್ನು ಪಾವತಿಸುವ ಮೂಲಕ ದೇಸಿ ತಳಿಯ ಗೋವುಗಳನ್ನು ಸಂರಕ್ಷಣೆ ಮಾಡಲು ಕೈ ಜೋಡಿಸಬಹುದು. ಪ್ರಸ್ತುತ ವಾರ್ಷಿಕ ₹ 12 ಸಾವಿರ ಮೊತ್ತವನ್ನು ಪಾವತಿಸಬೇಕು ಎಂಬುದು ಮಲೆನಾಡು ಗಿಡ್ಡ ಗೋ ಸಂವರ್ಧನಾ ಕೇಂದ್ರ ಟ್ರಸ್ಟ್‌ನ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT