ಸೋಮವಾರ, ಸೆಪ್ಟೆಂಬರ್ 26, 2022
20 °C
ಮ್ಯಾಮ್ಕೋಸ್ ಷೇರುದಾರರ ಸಭೆಯಲ್ಲಿ ಉಪಾಧ್ಯಕ್ಷ ಎಚ್.ಎಸ್.ಮಹೇಶ್

ಅಡಿಕೆ ಬೆಳೆಗಾರರ ಹಿತಕಾಯಲು ಬದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾದ ದೇಶದ ಮೊದಲ ಸಹಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆಯೊಂದಿಗೆ ಮುನ್ನಡೆದಿರುವ ಮ್ಯಾಮ್ಕೋಸ್ ತನ್ನ ಸದಸ್ಯರು ಮತ್ತು ಅಡಿಕೆ ಬೆಳೆಗಾರರ ಹಿತ ಕಾಯಲು ಸದಾ ಬದ್ಧವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಮ್ಯಾಮ್ಕೋಸ್ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ಷೇರುದಾರರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಕುಟುಂಬ ವಿಮೆ, ಗುಂಪುವಿಮೆ, ಮರಣ ಹೊಂದಿದವರಿಗೆ ಧನಸಹಾಯ, ಚಿಕಿತ್ಸೆಗೆ ನೆರವು ಹೀಗೆ ಹಲವು ಯೋಜನೆಗಳ ಮೂಲಕ ಕೆರೆಯ ನೀರನ್ನು ಕೆರೆಗೇ ಚೆಲ್ಲುವಂತೆ ಲಾಭಾಂಶದ ಸದ್ಬಳಕೆ ಆಗುತ್ತಿದೆ. ಅಲ್ಲದೆ, ಸಕಾಲದಲ್ಲಿ ಲಾಭಾಂಶವನ್ನೂ ವಿತರಿಸುತ್ತಿದ್ದೇವೆ. ಷೇರುದಾರರ ಸಹಾಯ, ಸಹಕಾರ ಮಾರ್ಗದರ್ಶನ ನಿರಂತರವಾಗಿದ್ದರೆ ಇನ್ನೂ ಎತ್ತರಕ್ಕೆ ಮ್ಯಾಮ್ಕೋಸ್‍ ಅನ್ನು ಒಯ್ಯುವ ಸದಾಶಯ ಸಾಕಾರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಖರಾಯಪಟ್ಟಣದ ಕೃಷಿಕ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಕೆ.ಕಲ್ಮರುಡಪ್ಪ ಷೇರುದಾರರ ಪರವಾಗಿ ಮಾತನಾಡಿ, ಬಯಲುಸೀಮೆಯ ಪ್ರತಿನಿಧಿಯಾಗಿ ಕಡೂರು ತಾಲ್ಲೂಕಿನ ಒಬ್ಬರಿಗೆ ಆಡಳಿತ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿದರೆ ಮ್ಯಾಮ್ಕೋಸ್ ಬೆಳವಣಿಗೆಗೆ ಮತ್ತು ಸ್ಥಳೀಯ ಅಡಿಕೆ ಬೆಳೆಗಾರರಿಗೆ ನೆರವಾಗಲಿದೆ. ಸಖರಾಯಪಟ್ಟಣ ಭಾಗಕ್ಕೆ ಒಂದು ಶಾಖೆಯ ಅಗತ್ಯವಿದೆ ಎಂದು ಕೋರಿದರು. ಅಡಿಕೆ ಬೆಳೆಗಾರ ಕೆ.ಎಚ್.ನಾರಾಯಣ, ಷೇರುದಾರರು ಕನಿಷ್ಠ ಅಡಿಕೆಯನ್ನಾದರೂ ಬಿಡುವಂತೆ ಚೇಣಿದಾರರೊಂದಿಗೆ ಒಪ್ಪಂದ ಮಾಡಿಕೊಂಡರೆ ಸಂಸ್ಥೆಯ ಉಳಿವಿಗೆ ನೆರವಾಗಲಿದೆ ಎಂದರು.

ಹೊಗರೇಹಳ್ಳಿಯ ಪ್ರದೀಪ್, ಸಾಂಪ್ರದಾಯಿಕ ಕೃಷಿ ಮರೆತು ಎಲ್ಲ ಭೂಮಿಯಲ್ಲಿಯೂ ಅಡಿಕೆ ಬೆಳೆಯಲು ರೈತರು ಮುಂದಾಗುತ್ತಿದ್ದಾರೆ. ಇದು ಅಪಾಯಕಾರಿಯಲ್ಲವೇ? ಪರ್ಯಾಯ ವ್ಯವಸ್ಥೆ ಹೇಗೆ ಎಂದು ಮ್ಯಾಮ್ಕೋಸ್ ತನ್ನ ಸದಸ್ಯರಿಗೆ ಮಾರ್ಗದರ್ಶನ ಮಾಡಬೇಕು ಎಂದು ಕೋರಿದರು.

ಬೀರೂರಿನ ಪಿ.ನಿಂಗಪ್ಪ, ಇರುವ ಸದಸ್ಯರಲ್ಲಿ ಬಹಳಷ್ಟು ಮಂದಿ ಇಲ್ಲಿಗೆ ಬರುತ್ತಿಲ್ಲ, ಅವರನ್ನು ಮನವೊಲಿಸಿ ಇಲ್ಲಿ ದೊರೆಯುವ ಸೌಲಭ್ಯಗಳ ಮನದಟ್ಟು ಮಾಡಿಸಿ ಇಲ್ಲಿಯೇ ವ್ಯವಹರಿಸುವಂತೆ ಮಾಡಿದರೆ ಒಳಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಸದಸ್ಯ ಟಿ.ಹನುಮಂತಪ್ಪ, ಸಂಸ್ಥೆಯು ತಾನೇ ಮೌಲ್ಯವರ್ಧಿತ ಅಡಿಕೆ ಉತ್ಪಾದಿಸಿ ಉತ್ತರ ಭಾರತಕ್ಕೆ ರವಾನೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಮಹೇಶ್, ಸಖರಾಯಪಟ್ಟಣದಲ್ಲಿ ತಕ್ಷಣ ನೇರ ಖರೀದಿ ಕೇಂದ್ರ ಆರಂಭಿಸಲು ಕ್ರಮ ವಹಿಸಲಾಗುವುದು. ಬಯಲುಸೀಮೆಯ ಭಾಗದ ನಿರ್ದೇಶಕ ಸ್ಥಾನದ ವಿಚಾರವಾಗಿ ಚುನಾವಣಾ ಸಂದರ್ಭದಲ್ಲಿ ಖಂಡಿತವಾಗಿ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಮೌಲ್ಯವರ್ಧಿತ ಅಡಿಕೆ ಉತ್ಪಾದನೆ ಬಗ್ಗೆ ಚಿಂತನೆ ನಡೆಸಲಾಗುವುದು. ಸಾಂಪ್ರದಾಯಿಕ ಬೆಳೆ ಮರೆಯಾಗುತ್ತಿರುವ ಬಗ್ಗೆ ನಾವು ಹಣದ ಬೆನ್ನತ್ತಿ ಹೋರೆ ನೆಮ್ಮದಿ ಕಳೆದುಕೊಳ್ಳುತ್ತೇವೆ, ಇದರಿಂದ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.

ಚಿಕಿತ್ಸಾ ವೆಚ್ಚದ ಸಲುವಾಗಿ ಅಶೋಕ್ ಎಂಬುವರಿಗೆ ₹ 1.17 ಲಕ್ಷದ ಚೆಕ್ ವಿತರಿಸಲಾಯಿತು. ಅಡಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ, ಹಿರಿಯ ನಿರ್ದೇಶಕ ಆರ್.ದೇವಾನಂದ್, ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಕೃಷ್ಣಮೂರ್ತಿ, ಪರಾಶರ, ಸುರೇಶ್ಚಂದ್ರ, ಜಯಶ್ರೀ, ನರೇಂದ್ರ, ದಿನೇಶ್, ಕೀರ್ತಿರಾಜ್, ಷೇರುದಾರರಾದ ಶ್ಯಾಮಸುಂದರ್, ಎಂ.ಆರ್.ಸೋಮಶೇಖರ್, ಅರೆಕಲ್ ಕಾಂತರಾಜ್, ಸಿ.ಎಸ್.ಗಿರೀಶ್, ಪರ್ವತಪ್ಪ, ಜಿಯಾವುಲ್ಲಾ, ಅರೆಕಲ್ ಪ್ರಕಾಶ್, ಬೀರೂರು ಶಾಖಾ ವ್ಯವಸ್ಥಾಪಕ ಸುರೇಶ್ ಮತ್ತು ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು