ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಮೂರ್ತಿಗೆ ನ್ಯಾಯಾಂಗ ಬಂಧನ

ಶೃಂಗೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು
Last Updated 20 ಮಾರ್ಚ್ 2022, 3:56 IST
ಅಕ್ಷರ ಗಾತ್ರ

ಶೃಂಗೇರಿ: ಸಿಪಿಐ ಮಾವೋವಾದಿ ಮುಖಂಡ ಬಿ.ಜಿ ಕೃಷ್ಣಮೂರ್ತಿ ಅವರನ್ನು ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಶನಿವಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಪೊಲೀಸ್ ಬಿಗಿ ಭದ್ರತೆಯಲ್ಲಿ ಮಧ್ಯಾಹ್ನ 12.30ರ ವೇಳೆಗೆ ಕೋರ್ಟ್ ಆವರಣಕ್ಕೆ ಕರೆತಂದು, ಮಧ್ಯಾಹ್ನ 4ರ ವೇಳೆಗೆ ನ್ಯಾಯಾಧೀಶ ಸಚಿನ್ ಡಿ. ಅವರ ಎದುರು ವಿಚಾರಣೆಗೆ ಹಾಜರು ಪಡಿಸಲಾಯಿತು.

ವಿಚಾರಣೆ ವೇಳೆ ಕಸ್ಟಡಿಯಲ್ಲಿದ್ದಾಗ ಪೊಲೀಸರು ಏನಾದರು ತೊಂದರೆ ಮಾಡಿದ್ದಾರೆಯೇ? ಎಂದು ಬಿ.ಜಿ. ಕೃಷ್ಣಮೂರ್ತಿಯವರನ್ನು ನ್ಯಾಯಾಧೀಶರು ಪ್ರಶ್ನಿಸಿದರು. ಆಗ ಏನು ತೊಂದರೆ ಮಾಡಿಲ್ಲ ಎಂದು ಹೇಳಿದರು.

ಬಿ.ಜಿ ಕೃಷ್ಣಮೂರ್ತಿಯವರ ಇನ್ನೊಂದು ಪ್ರಕರಣವಾದ, ಹಾದಿ ಕಿರೂರುನಿಂದ ಹಾವುಕಡ್ಕಲ್ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಪೊಲೀಸರಿಗೆ ಬಾಂಬ್ ಇಟ್ಟಿದ್ದು ಸ್ಫೋಟಗೊಂಡು ತಾರೇಶ್ ಎಂಬ ಪೊಲೀಸ್‍ಗೆ ತೀವ್ರ ಗಾಯ ಉಂಟಾಗಿರುವ ಆರೋಪದ ಹೆಚ್ಚಿನ ವಿಚಾರಣೆಗಾಗಿ ಇನ್ನೂ 15 ದಿನದವರೆಗೆ ಕಾನೂನು ಬಾಹಿರ ಚಟುವಟಿಕೆ ಕಾಯ್ದೆಯಡಿಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಣಾಕ್ಷಿ ಮನವಿ ಮಾಡಿದರು.

ಮಧ್ಯಾಹ್ನ ನ್ಯಾಯಾಲಯದ ಕಲಾಪ ಆರಂಭವಾದ ಮೇಲೆ ನ್ಯಾಯಾಧೀಶ ಸಚಿನ್.ಡಿ ಅವರು ಪೊಲೀಸ್ ಕಸ್ಟಡಿಗೆ ಕೇಳಿರುವ ಅರ್ಜಿಯನ್ನು ವಜಾಗೊಳಿಸಿ, 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಮಾಡಿದರು.

ಸಿಸಿ21/17 ಪ್ರಕರಣದಲ್ಲಿ ಇನ್ನು ಅನೇಕ ಆರೋಪಿಗಳಿದ್ದು ಅವರು ನಾಪತ್ತೆಯಾಗಿರುವುದರಿಂದ ಬಿ.ಜಿ ಕೃಷ್ಣಮೂರ್ತಿಯ ಮೇಲೆ ಪ್ರತ್ಯೇಕ ದೋಷಾರೋಪಣಾ ಪಟ್ಟಿಯನ್ನು ಕೂಡಲೇ ಸಲ್ಲಿಸಲು ಪೊಲೀಸರಿಗೆ ನ್ಯಾಯಾಧೀಶರು ಆದೇಶಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಣಾಕ್ಷಿ, ಬಿ.ಜಿ ಕೃಷ್ಣಮೂರ್ತಿ ಪರ ವಕೀಲ ನಟಶೇಖರ್ ವಾದ, ಪ್ರತಿವಾದ ಮಂಡಿಸಿದರು.

ಕೊಪ್ಪ ಡಿವೈಎಸ್‍ಪಿ ಅನಿಲ್ ಕುಮಾರ್, ಶೃಂಗೇರಿ ಸರ್ಕಲ್ ಇನ್‍ಸ್ಪೆಕ್ಟರ್ ರವಿ ಬಿ.ಎಸ್. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT