ಮರ್ಲೆತಿಮ್ಮನಹಳ್ಳಿ: ಒಬ್ಬರಿಗೆ ಡೆಂಗಿಜ್ವರ ಪತ್ತೆ

ಸೋಮವಾರ, ಜೂನ್ 17, 2019
31 °C

ಮರ್ಲೆತಿಮ್ಮನಹಳ್ಳಿ: ಒಬ್ಬರಿಗೆ ಡೆಂಗಿಜ್ವರ ಪತ್ತೆ

Published:
Updated:

ಚಿಕ್ಕಮಗಳೂರು: ‘ತಾಲ್ಲೂಕಿನ ಮರ್ಲೆತಿಮ್ಮನಹಳ್ಳಿಯಲ್ಲಿ ವೈರಲ್‌ ಜ್ವರ, ಮೈಕೈ ನೋವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರಿಗೆ ಮಾತ್ರ ಡೆಂಗಿ ಜ್ವರ ಪತ್ತೆಯಾಗಿದೆ. ಚಿಕಿತ್ಸೆ ನೀಡಿದ್ದು, ಚೇತರಿಸಿಕೊಂಡಿದ್ದಾರೆ’ ಎಂದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಲ್ಲಿಕಾರ್ಜುನಪ್ಪ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಸೋಮವಾರ ಮಾತನಾಡಿದ ಅವರು, ‘ಗ್ರಾಮದಲ್ಲಿ ರಾಮಮ್ಮ ಎಂಬುವರಿಗೆ ಡೆಂಗಿ ಜ್ವರ ಇರುವುದು ಪರೀಕ್ಷೆಯಲ್ಲಿ ದೃಢ ಪಟ್ಟಿತ್ತು. ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಗ್ರಾಮದ ಶಾಲೆಯಲ್ಲಿ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ಕ್ಲಿನಿಕ್‌ ಅನ್ನು ಇನ್ನು ಮೂರ್ನಾಲ್ಕು ದಿನ ಮುಂದುವರಿಸಲಾಗುವುದು. ವೈರಲ್‌ ಜ್ವರ, ಮೈಕೈ ನೋವು, ತಲೆ ಭಾರ ಬಾಧಿತರಿಗೆ ಚಿಕಿತ್ಸೆ ನೀಡಲಾಗಿದೆ. ಹೊಸ ಪ್ರಕರಣಗಳು ಕಂಡುಬಂದಿಲ್ಲ’ ಎಂದು ತಿಳಿಸಿದರು.

‘ಶುರುವಿನಲ್ಲಿ 80ಕ್ಕೂ ಹೆಚ್ಚು ಮಂದಿಗೆ ಜ್ವರ ಕಂಡುಬಂದಿತ್ತು. ಎಲ್ಲರಿಗೆ ಚಿಕಿತ್ಸೆ ನೀಡಲಾಗಿದೆ. ಬಾಧಿತರು ಪೂರ್ಣವಾಗಿ ಚೇತರಿಸಿಕೊಳ್ಳಲು ಒಂದರೆಡು ವಾರ ಹಿಡಿಯಬಹುದು’ ಎಂದು ತಿಳಿಸಿದರು.

‘ಗ್ರಾಮದಲ್ಲಿ ಇಂಥದ್ದೇ ಕಾರಣಕ್ಕೆ ವೈರಲ್‌ ಜ್ವರ ಹರಡಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಎಲ್ಲ ರೀತಿಯ ನಿಗಾ ವಹಿಸಲಾಗಿದೆ. ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಚ್.ಗಂಗಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ನನಗೆ ಜ್ವರ ಬಿಟ್ಟಿದೆ. ಮೈಕೈ ನೋವು ಸ್ವಲ್ಪ ಇದೆ. ಪೂರ್ಣವಾಗಿ ಹುಷಾರಾಗಲು ಇನ್ನು ಒಂದು ವಾರ ಬೇಕಾಗಬಹುದು. ಗ್ರಾಮದಲ್ಲಿ ಹೊಸದಾಗಿ ಯಾರಿಗೂ ಜ್ವರ ಕಂಡುಬಂದಿಲ್ಲ’ ಎಂದು ತಿಳಿಸಿದರು.

ಕಳಾಸಪುರ ಆರೋಗ್ಯ ಕೇಂದ್ರದ ಡಾ.ಕಾರ್ತಿಕ್‌, ಆರೋಗ್ಯ ಸಿಬ್ಬಂದಿ ಗ್ರಾಮದಲ್ಲಿ ಆರೋಗ್ಯ ನಿಗಾ ವಹಿಸಿದ್ದಾರೆ.

***

ಕ್ರಷರ್‌ ಲೈಸೆನ್ಸ್‌ ರದ್ದತಿಗೆ ಜಿಲ್ಲಾಧಿಕಾರಿಗೆ ರೈತಸಂಘ ಮನವಿ

ಮರ್ಲೆ ತಿಮ್ಮನಹಳ್ಳಿ ಸುತ್ತಮುತ್ತ ಜಲ್ಲಿ ಕ್ರಷರ್‌ ಘಟಕಗಳಿದ್ದು, ಈ ಘಟಕಗಳ ದೂಳು ಸುತ್ತಮುತ್ತಲಿನ ಗ್ರಾಮಗಳಿಗೆ ವ್ಯಾಪಿಸುತ್ತದೆ. ದೂಳು ಗ್ರಾಮಸ್ಥರಿಗೆ ಅನಾರೋಗ್ಯಕ್ಕೆ ಎಡೆಮಾಡಿದೆ. ಕ್ರಷರ್‌ ಲೈಸೆನ್ಸ್‌ ರದ್ದುಪಡಿಸಬೇಕು ಎಂದು ರಾಜ್ಯ ರೈತಸಂಘ– ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಮರ್ಲೆತಿಮ್ಮನಹಳ್ಳಿಯಲ್ಲಿ ವೈರಲ್‌ ಜ್ವರ ಕಾಡುತ್ತಿದೆ. ಜಲ್ಲಿ ಕ್ರಷರ್‌ಗಳ ಗಣಿಗಾರಿಕೆಗೆ ರಾಸಾಯನಿಕ ಬಳಸಿ ಸ್ಫೋಟಿಸುವುದರಿಂದ ಎದ್ದ ದೂಳು ಸುತ್ತಮುತ್ತ ವ್ಯಾಪಿಸುತ್ತದೆ. ತಿಮ್ಮನಹಳ್ಳಿ, ಮರ್ಲೆ, ನಾಗರಹಳ್ಳಿ, ಕಳಾರಹಳ್ಳಿ, ಮಣೇನಹಳ್ಳಿ, ಕುರುಬರಹಳ್ಳಿ, ರಾಮನಹಳ್ಳಿ, ದೇಗಲಾಪುರ ಗ್ರಾಮಗಳಿಗೆ ದೂಳು ವ್ಯಾಪಿಸುತ್ತದೆ. ಕ್ರಷರ್‌ಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಕ್ರಷರ್‌ಗಳಲ್ಲಿ ಸ್ಫೋಟ ನಡೆಸದಂತೆ ಸೂಚನೆ ನೀಡಬೇಕು. ಕ್ರಷರ್‌ ಲೈಸೆನ್ಸ್‌ ರದ್ದುಪಡಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಬಸವರಾಜು, ಕೆ.ಕೆ.ಕೃಷ್ಣೇಗೌಡ, ಚಂದ್ರೇಗೌಡ, ಎಂ.ಎನ್‌. ರಮೇಶ್‌ ಅವರು ಮನವಿಪತ್ರದಲ್ಲಿ ಎಚ್ಚರಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !