ಸೋಮವಾರ, ಡಿಸೆಂಬರ್ 9, 2019
25 °C
ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

‘ರಾಜಕೀಯ ಒತ್ತಡಕ್ಕೆ ಮಣಿಯದಿರಿ, ಸವಾಲು ಎದುರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಪೊಲೀಸರು ರಾಜಕೀಯ, ಸಾಮಾಜಿಕ ಒತ್ತಡಗಳಿಗೆ ಮಣಿಯಬಾರದು. ಸವಾಲುಗಳು ಎದುರಾದಾಗ ಧೃತಿಗೆಡದೆ ಧೈರ್ಯದಿಂದ ಎದುರಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಕಿವಿಮಾತು ಹೇಳಿದರು.

ಕಡೂರಿನ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಒಂದನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಪೊಲೀಸರಿಗೆ ಕೆಲಸದ ಒತ್ತಡ ಇರುತ್ತದೆ. ಧ್ಯಾನ, ವ್ಯಾಯಾಮ, ಆಟೋಟಗಳನ್ನು ರೂಢಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗಬಾರದು ಎಂದು ಸಲಹೆ ನೀಡಿದರು.

ಕಾನ್‌ಸ್ಟೆಬಲ್‌ಗಳು ಕೀಳರಿಮೆ ಬೆಳೆಸಿಕೊಳ್ಳಬಾರದು. ತನಗೂ ಮೇಲಧಿಕಾರಿಯಷ್ಟೇ ಜವಾಬ್ದಾರಿ ಇದೆ ಎಂಬ ಸಕಾರಾತ್ಮಕ ಭಾವನೆಯಿಂದ ಕೆಲಸ ಮಾಡಬೇಕಕು. ಇಲಾಖೆಯಲ್ಲಿ ಹೊಸದಾಗಿ ಶುರುವಾಗುವ ರಕ್ಷಣಾ ಘಟಕಗಳಲ್ಲೂ ಕಾರ್ಯನಿರ್ವಹಿಸಲು ಮಾನಸಿಕವಾಗಿ ಸದೃಢರಾಗಿರಬೇಕು ಎಂದು ಹೇಳಿದರು.

ಪೊಲೀಸ್ ಇಲಾಖೆ ರಾಜ್ಯದ ಸೇನೆಯಿದ್ದಂತೆ. ಪ್ರಪಂಚದಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿದೆ. ದೇಶದ್ರೋಹಿಗಳು ದೇಶವನ್ನು ಪ್ರವೇಶಿಸದಂತೆ ಯೋಧರು ಗಡಿಯಲ್ಲಿ ಕಾಯುತ್ತಾರೆ. ಪೊಲೀಸರು ದೇಶದೊಳಗೆ ಅಹಿತಕರ, ಹಿಂಸಾತ್ಮಕ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಭದ್ರತೆ ಮತ್ತು ರಕ್ಷಣೆ ಒದಗಿಸುವ ಕಾರ್ಯ ನಿರ್ವಹಿಸಬೇಕು ಎಂದರು.

ಬೆಂಗಳೂರಿನಲ್ಲಿ ಕೊಲೆ, ಅತ್ಯಾಚಾರ, ಗೂಂಡಾಗಿರಿಯಂಥ ಪ್ರಕರಣಗಳು ಹೆಚ್ಚುತ್ತಿವೆ. ಈ ಮಹಾನಗರದಲ್ಲಿ 1.44 ಕೋಟಿ ಜನಸಂಖ್ಯೆ ಇದೆ. ಎಲ್ಲರಿಗೂ ರಕ್ಷಣೆ ನೀಡುವ ಜವಾಬ್ದಾರಿ ಪೊಲೀಸರದ್ದು ಎಂದರು.

ಕಡೂರು ಪೊಲೀಸ್ ತರಬೇತಿ ಶಾಲೆಪ್ರಾಂಶುಪಾಲ ಎನ್. ಶ್ರೀನಿವಾಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಸಿವಿಲ್ ನ್ಯಾಯಾಧೀಶರಾದ ವೀರಪ್ಪ ಧವಳೇಶ್ವರ್, ಎಂ.ಟಿ.ದೀಪು ಇದ್ದರು.

ಬಾಕ್ಸ್‌

ವಿವಿಧ ವಿಭಾಗಗಳಲ್ಲಿ ಬಹುಮಾನಿತರು

ಒಳಾಂಗಣ ಪ್ರಶಸ್ತಿ ವಿಭಾಗ: ಬೆಂಗಳೂರು ನಗರ ಜಿಲ್ಲೆಯ ಸಿಎಆರ್‌ ಕೇಂದ್ರ ಘಟಕದ ಬಿ. ಸುರೇಶ್–1, ಸಿಎಆರ್ ಪಶ್ಚಿಮ ಘಟಕದ ಎಚ್.ವಿ.ಕಿರಣ್‌ಕುಮಾರ್–2, ಸಿಎಆರ್ ಕೇಂದ್ರ ಘಟಕದ ವಿ.ರಘು– 3ನೇ ಬಹುಮಾನ ಪಡೆದರು.

ಹೊರಾಂಗಣ ಪ್ರಶಸ್ತಿ ವಿಭಾಗ: ಬೆಂಗಳೂರು ನಗರ ಜಿಲ್ಲೆಯ ಸಿಎಆರ್‌ ಕೇಂದ್ರ ಘಟಕದ ಟಿ.ಸಿ.ಅಜಯ್ ಕುಮಾರ್–1 , ದಕ್ಷಿಣ ಸಿಎಆರ್‌ ಘಟಕದ ಪುಟ್ನಂಜ ತಳವಾರ–2, ಪಶ್ಚಿಮ ಸಿಎಆರ್‌ ಘಟಕದ ಎಸ್.ಎಂ.ಶಿವು–3ನೇ ಬಹುಮಾನ ಪಡೆದರು.

7.62 ಎಸ್‌ಎಲ್‌ಆರ್ ರೈಫಲ್ ಶೂಟಿಂಗ್ ವಿಭಾಗ:

ಬೆಂಗಳೂರು ನಗರ ಜಿಲ್ಲೆಯ ಸಿಎಆರ್‌ ಪಶ್ಚಿಮ ಘಟಕದ ಸೋಮಪ್ಪಕೋರಿಕಪ್ಪ–1, ಸಿಎಆರ್‌ ದಕ್ಷಿಣ ಘಟಕದ ಕಿರಣ್ ಬಸಪ್ಪ ಪೂಜಾರ್–2, ಸಿಎಆರ್‌ ಪಶ್ಚಿಮ ಘಟಕದ ಸುನೀಲ್‌ಕುಮಾರ್–3ನೇ ಬಹುಮಾನ ಪಡೆದರು.

ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ನಗರ ಜಿಲ್ಲೆಯ ಸಿಎಆರ್‌ ಪಶ್ಚಿಮ ಘಟಕದ ಟಿ.ಸಿ.ಅಜಯ್ ಕುಮಾರ್ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದರು.

ಡಿಸಿಪಿ ಮತ್ತು ಸಿಎಆರ್ ಕೇಂದ್ರ ಘಟಕ ಪ್ರಶಸ್ತಿ ವಿಭಾಗ: ಬಿ.ಸುರೇಶ್–1, ಡಿಸಿಪಿಸಿಎಆರ್ ದಕ್ಷಿಣ ಘಟಕ ಪ್ರಶಸ್ತಿ ವಿಭಾಗ: ಟಿ.ಸಿ.ಅಜಯ್ ಕುಮಾರ್ –1

ಡಿಸಿಪಿ ಮತ್ತು ಸಿಎಆರ್ ಪಶ್ಚಿಮ ಘಟಕ ಪ್ರಶಸ್ತಿ ವಿಭಾಗ: ಕಿರಣ್ ಬಸಪ್ಪ ಪೂಜಾರ್ ದ್ವಿತೀಯ ಸ್ಥಾನ ಪಡೆದು ವಿಶೇಷ ಬಹುಮಾನಕ್ಕೆ ಪಾತ್ರರಾದರು.

ಸಿಎಆರ್ ಪಶ್ಚಿಮ ಘಟಕದ ಸೋಮಪ್ಪ ಕೋರಿಕಪ್ಪ– ಪ್ರಥಮ ಸ್ಥಾನ ಪಡೆದು ಜಂಟಿ ಆಯುಕ್ತರು ನೀಡುವ ವಿಶೇಷ ಪ್ರಶಸ್ತಿ ಪಡೆದರು. ಪೊಲೀಸ್ ಆಯುಕ್ತರು ನೀಡುವ ಪ್ರಶಸ್ತಿಗೆ ಟಿ.ಸಿ.ಅಜಯ್ ಕುಮಾರ್ ಭಾಜನರಾದರು.

 

ಪ್ರತಿಕ್ರಿಯಿಸಿ (+)