ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ಮಹಾಸಭೆ

ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ
Last Updated 22 ಡಿಸೆಂಬರ್ 2020, 4:48 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ರೈತಭವನದಲ್ಲಿ ಸೋಮವಾರ ನಡೆದ ಟಿಎಪಿಸಿಎಂಎಸ್ ಮಹಾಸಭೆಯು ಗೊಂದಲದ ಗೂಡಾಯಿತು.

ಟಿಎಪಿಎಇಎಂಎಸ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬ ಲಿತ ಅಭ್ಯರ್ಥಿಗಳು ಆಡಳಿತದ ಚುಕ್ಕಾಣಿ ಯನ್ನು ಹಿಡಿದಿದ್ದು, ಸೋಮವಾರ ಮಹಾಸಭೆಯನ್ನು ಕರೆಯಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಬಿ.ಎನ್. ಜಯಂತ್ ವರದಿಯನ್ನು ಮಂಡಿಸುವ ವೇಳೆ, ‘ಕಳೆದ ಬಾರಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು’ ಎನ್ನುತ್ತಿದ್ದಂತೆ ಮಾತಿನ ಚಕಮಕಿ ಪ್ರಾರಂಭವಾಯಿತು.ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಮಾಜಿ ಅಧ್ಯಕ್ಷ ಮಗ್ಗಲಮಕ್ಕಿ ಲಕ್ಷ್ಮಣ ಗೌಡ ಮಾತನಾಡಿ, ‘20 ವರ್ಷಗಳಿಂದ ಟಿಎಪಿಸಿಎಂಎಸ್ ಸದಸ್ಯ ಹಾಗೂ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಂದ ಅನುದಾನಗಳನ್ನು ತಂದು, ಸಾರ್ವಜನಿಕರಿಂದ ದೇಣಿಗೆ ಪಡೆದು, ಅಷ್ಟೇ ಅಲ್ಲದೆ ತನ್ನ ಸಹೋದರಿಯಿಂದಲೂ ₹ 10 ಲಕ್ಷ ಹಣ ಪಡೆದು ಟಿಎಪಿಸಿಎಂಎಸ್‍ನ ರೈತಭವನ ಸೇರಿದಂತೆ ಹಲವು ಕಟ್ಟಡಗಳನ್ನು ನಿರ್ಮಿಸಿದ್ದೇನೆ. ಈಗ ಮೊದಲ ಬಾರಿಗೆ ಬಿಜೆಪಿಯವರು ಅಧಿಕಾರ ಹಿಡಿದು ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಹಿಂದೆ ಸಹಕಾರಿ ತಜ್ಞರು ಸಂಸ್ಥೆಯ ಅಭಿವೃದ್ಧಿ ಬಗ್ಗೆ ತನಿಖೆ ನಡೆಸಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ವರದಿ ನೀಡಿದ್ದಾರೆ. ಆದರೂ ಸೇಡಿನ ಭಾವನೆ ಹೊಂದಿರುವ ಈಗಿನ ಆಡಳಿತ ಮಂಡಳಿಯವರು ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದು ತನಗೆ ನೋವಾಗಿದೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟಡವನ್ನೇರಬೇಕಾಯಿತು’ ಎಂದರು.

ಬಿ.ಎನ್.ಜಯಂತ್‍ ಮಾತನಾಡಿ, ‘2019ರಲ್ಲಿ ನಡೆದಿದ್ದ ಮಹಾಸಭೆಯಲ್ಲಿ ಹಿಂದಿನ ಅವ್ಯವಹಾರದ ತನಿಖೆ ನಡೆಸಬೇಕೆಂದು ನಿರ್ಣಯ ಕೈಗೊಳ್ಳ ಲಾಗಿತ್ತು. ಅದನ್ನು ಇಂದಿನ ಸಭೆಯಲ್ಲಿ ಓದಿ ಹೇಳುವಾಗ ಮಾಜಿ ಅಧ್ಯಕ್ಷ ರೊಬ್ಬರು ಏಕಾಏಕಿ ಸಭೆಯಿಂದ ಹೊರ ಹೋಗಿ ಆತ್ಮಹತ್ಯೆಯ ನಾಟಕವಾಡಿ, ದಾರಿ ತಪ್ಪಿಸಲು ಮುಂದಾಗಿದ್ದಾರೆ. ಮಹಾಸಭೆಯ ತೀರ್ಮಾನವನ್ನು ಇನ್ನೊಂದು ಮಹಾಸಭೆಯಲ್ಲಿಯೇ ಮತ್ತೆ ನಿರ್ಣಯ ಕೈಗೊಂಡು ತೀರ್ಮಾನ ಮಾಡಬೇಕಿದೆ’ ಎಂದರು.

ಟಿಎಪಿಸಿಎಂಎಸ್ ಉಪಾಧ್ಯಕ್ಷ ಎಂ.ಎಲ್. ಕಲ್ಲೇಶ್, ನಿರ್ದೇಶಕರಾದ ರಂಜನ್ ಅಜಿತ್ ಕುಮಾರ್, ಎಂ.ವಿ. ಜಗದೀಶ್, ಒ.ಜಿ.ರವಿ, ಕೆ.ಪಿ. ಭಾರತಿ, ವಿ.ಕೆ.ಶಿವೇಗೌಡ, ಉತ್ತಮ್‍ಕುಮಾರ್, ಎಂ.ಎಲ್. ಅಭಿಜಿತ್, ಎಚ್.ಜಿ. ಸಂದರ್ಶ, ರೇಣುಕಾಉಪೇಂದ್ರ, ಡಿ. ಜಗನ್ನಾಥ್, ಸುರೇಶ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಗೌಡ, ಕೆ. ವೆಂಕಟೇಶ್ ಇದ್ದರು.

ಕಟ್ಟಡವೇರಿ ಆತ್ಮಹತ್ಯೆ ಬೆದರಿಕೆ

ಮೂಡಿಗೆರೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವ್ಯವಹಾರದ ಆರೋಪ ಬಂದ ಕಾರಣ ಮಾಜಿ ಅಧ್ಯಕ್ಷ ಮಗ್ಗಲಮಕ್ಕಿ ಲಕ್ಷ್ಮಣ ಗೌಡ ರೈತಭವನದ ಕಟ್ಟಡವೇರಿ ಆತ್ಮಹತ್ಯೆ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ.

ರೈತಭವನದಲ್ಲಿ ಸೋಮವಾರ ಮಹಾಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯ ಪ್ರಾರಂಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎನ್. ಜಯಂತ್ ಹಿಂದಿನ ವರ್ಷದ ವರದಿ ಮಂಡನೆ ಮಾಡುತ್ತಾ, ‘ಹಿಂದಿನ ಆಡಳಿತದ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿತ್ತು’ ಎಂದು ಸಭೆಗೆ ಓದಿ ಹೇಳಿದರು.

ಈ ವೇಳೆ ಆಡಳಿತ ಹಾಗೂ ವಿರೋಧ ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಸಭೆಯು ಗೊಂದಲದ ಗೂಡಾಯಿತು. ಸಭೆಯಲ್ಲಿದ್ದ ಮಾಜಿ ಅಧ್ಯಕ್ಷ ಮಗ್ಗಲಮಕ್ಕಿ ಲಕ್ಷ್ಮಣ ಗೌಡ ಹೊರ ನಡೆದು, ಸುಮಾರು 52 ಅಡಿ ಎತ್ತರವಿರುವ ರೈತ ಭವನದ ಭೋಜನಾ ಶಾಲೆಯ ಕಟ್ಟಡವನ್ನೇರಿದ್ದರು. ಅವರು ಕಟ್ಟಡ ಏರಿದ ಸುದ್ದಿ ಹರಡುತ್ತಲೇ ಸಭೆಯಲ್ಲಿದ್ದವರೆಲ್ಲಾ ರೈತಭವನದ ಆವರಣಕ್ಕೆ ಓಡಿ ಬಂದರು.

‘ಆಡಳಿತ ಮಂಡಳಿಯವರು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ, ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ’ ಎಂದು ಲಕ್ಷ್ಮಣ ಗೌಡ ಆಕ್ರೋಶಿತರಾಗಿ ಕಟ್ಟಡದಿಂದ ಧುಮುಕುವುದಾಗಿ ಬೆದರಿಕೆ ಹಾಕಿದರು. ತಕ್ಷಣವೇ ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಸ್ಥಳದಲ್ಲಿದ್ದವರು ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಕೆಳಗಿಳಿಸುವ ಪ್ರಯತ್ನ ನಡೆಸಿದರೂ ಅವರು ಕೆಳಗಿಳಿಯಲಿಲ್ಲ. ಸುಮಾರು ಎರಡು ತಾಸು ಕಟ್ಟಡದ ಮೇಲೆಯೇ ಇದ್ದರು. ಹಿಂಬದಿಯಿಂದ ಕಟ್ಟಡದ ಮೇಲೇರಿದ ಮತ್ತೊಬ್ಬ ವ್ಯಕ್ತಿ ಸಿನಿಮಿಯ ರೀತಿಯಲ್ಲಿ ಮಗ್ಗಲಮಕ್ಕಿ ಲಕ್ಷ್ಮಣ್ ಅವರನ್ನು ಹಿಡಿದುಕೊಂಡರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಲ್ಲಿ ಅವರು ಕಟ್ಟಡದಿಂದ ಕೆಳಗಿಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT