ಮಳೆ ಹಾನಿ; ಸಮಗ್ರ ವರದಿಗೆ ಸಲ್ಲಿಕೆಗೆ ಸೂಚನೆ

7
ಮಳೆ–ಬೆಳೆ ಪರಿಸ್ಥಿತಿ, ಮಳೆ ಹಾನಿ; ಪ್ರಗತಿ ಪರಿಶೀಲನಾ ಸಭೆ

ಮಳೆ ಹಾನಿ; ಸಮಗ್ರ ವರದಿಗೆ ಸಲ್ಲಿಕೆಗೆ ಸೂಚನೆ

Published:
Updated:
ಪ್ರಗತಿ ಪರಿಶೀಲನಾಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮಾ, ಉಪಾಧ್ಯಕ್ಷ ಕೆ.ಆರ್‌.ಆನಂದಪ್ಪ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಕಂದಾಯ ಇಲಾಖೆ ಉನ್ನತಾಧಿಕಾರಿ ಶ್ರೀನಿವಾಸ ರೆಡ್ಡಿ ಇದ್ದಾರೆ.

 ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಿಂದಾಗಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮಳೆ–ಬೆಳೆ ಪರಿಸ್ಥಿತಿ, ಮಳೆ ಹಾನಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಸ್ತೆ, ಸೇತುವೆ, ಸಾರ್ವಜನಿಕ ಆಸ್ತಿ ನಷ್ಟ, ಬೆಳೆ ಹಾನಿಗೆ ಸಂಬಂಧಿಸಿದಂತೆ ನಷ್ಟದ ಅಂದಾಜು ಲೆಕ್ಕ ಹಾಕಿ ವರದಿ ನೀಡಬೇಕು. ಹಾನಿ ಪರಿಹಾರ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 761 ಮಿ.ಮೀ (ಶೇ 158) ಮಳೆಯಾಗಿದೆ. ವಾಡಿಕೆ ಮಳೆ ಪ್ರಮಾಣ 482 ಮಿ.ಮೀ ಇದೆ. ಮಲೆನಾಡು ಭಾಗದ ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ ತಾಲ್ಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. ಮಳೆಯಿಂದಾಗಿ ವಿವಿಧೆಡೆ ಹಾನಿಯಾಗಿದೆ. ಹಾನಿ ನಿಟ್ಟಿನಲ್ಲಿ ₹ 24.19 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಮಳೆಯಿಂದಾಗಿ ಜಿಲ್ಲೆಯಲ್ಲಿ 26 ಪಕ್ಕಾ ಮನೆಗಳು, 40 ಕಚ್ಚಾ ಮನೆಗಳು ಹಾನಿಯಾಗಿದ್ದವು. ಮನೆಯವರಿಗೆ ಪರಿಹಾರ ನೀಡಲಾಗಿದೆ. 8 ಜಾನುವಾರುಗಳು ಮೃತಪಟ್ಟಿದ್ದು, ಪರಿಹಾರ ನೀಡಲಾಗಿದೆ. 11.32 ಎಕರೆಯಲ್ಲಿ ಬೆಳೆ ನಾಶವಾಗಿದೆ. ಪರಿಹಾರ ಒದಗಿಸಲು ಕ್ರಮ ವಹಿಸಲಾಗಿದೆ. ಕಡೂರು ತಾಲ್ಲೂಕಿನಲ್ಲಿ 19 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ’ ಎಂದು ತಿಳಿಸಿದರು.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅಡ್ಡಗದ್ದೆ ಗ್ರಾಮದ ಬಳಿ ಹೆದ್ದಾರಿ ಕಾಮಗಾರಿಗೆ ಬಗೆದು ರಸ್ತೆ ಬದಿಗೆ ಹಾಕಿದ್ದ ಮಣ್ಣು ಮಳೆಯಲ್ಲಿ ಕೊಚ್ಚಿಕೊಂಡು ಜಮೀನಿನೊಳಕ್ಕೆ ಬಿದ್ದಿದೆ. ಜಮೀನಿನಲ್ಲಿ ಈಗ ಬಿತ್ತನೆ ಮಾಡಲು ಆಗುತ್ತಿಲ್ಲ ಎಂದು ಜಮೀನಿನವರು ಅಳಲು ತೋಡಿಕೊಂಡಿದ್ದಾರೆ. ಅವರಿಗೆ ಪರಿಹಾರ ಕೊಡಿಸಲು ಕ್ರಮ ವಹಿಸಬೇಕು’ ಎಂದರು.

ಈ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.

ಕೃಷಿ ಜಂಟಿ ನಿರ್ದೇಶಕಿ ಸೀತಾ ಮಾತನಾಡಿ, ಮುಂಗಾರು ಅವಧಿಯಲ್ಲಿ ಒಟ್ಟು 1.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ. ಈವರೆಗೆ 34 ಸಾವಿರ ಹೆಕ್ಟೇರ್‌ನಲ್ಲಿ (ಶೇ 23) ಬಿತ್ತನೆಯಾಗಿದೆ. ಈವರೆಗೆ 4,110 ಕ್ವಿಂಟಲ್‌ ವಿತರಿಸಲಾಗಿದೆ. ಬಿತ್ತನೆ ಬೀಜ ದಾಸ್ತಾನು ಸಾಕಷ್ಟು ಇದೆ. ಹೆಸರು, ಹಲಸಂದೆ, ಉದ್ದು, ಅರಳು ಬಿತ್ತನೆ ಹೆಚ್ಚು ನಡೆದಿದೆ. ಭತ್ತ, ರಾಗಿ ಇವೆಲ್ಲವಗೂ ಆಗಸ್ಟ್‌ವರೆಗೂ ಬಿತ್ತನೆ ನಡೆಯುತ್ತದೆ’ ಎಂದು ಮಾಹಿತಿ ನೀಡಿದರು.

ಬಿತ್ತನೆ ಬೀಜ ವಿತರಣೆ ಬಗ್ಗೆ ಸರಿಯಾಗಿ ರೈತರಿಗೆ ಮಾಹಿತಿ ನೀಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ಎಲ್‌.ಭೋಜೇಗೌಡ ಆಕ್ಷೇಪಿಸಿದರು.

‘ಮುಂಗಾರಿನಲ್ಲಿ 17 ಸಾವಿರ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬಿತ್ತನೆ ಗುರಿ ಇದೆ. ಈವರೆಗೆ 6,955 ಹೆಕ್ಟೇರ್‌ನಲ್ಲಿ (ಶೇ 40.7) ಬಿತ್ತನೆಯಾಗಿದೆ. ಆಲೂಗಡ್ಡೆ, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬಿತ್ತನೆಯಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಪೂರ್ಣಿಮಾ ಮಾಹಿತಿ ನೀಡಿದರು.

 ‘ಕಾಮಗಾರಿ ಕಳಪೆ; ನಿರ್ಮಿತಿ ಕೇಂದ್ರ ಅಧಿಕಾರಿಗೆ ನೋಟಿಸ್‌’

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕೊಪ್ಪ ತಾಲ್ಲೂಕಿನ ಬಸರೀಕಟ್ಟೆಯಲ್ಲಿ ಸರ್ಕಾರಿ ವಿದ್ಯಾರ್ಥಿನಿಲಯ ಕಾಂಪೌಂಡ್‌ ಪೂರ್ಣವಾಗಿ ಬಿದ್ದಿದೆ. ಕಟ್ಟಡ ಕಾಮಗಾರಿ ಕಳಪೆಯಾಗಿದೆ. ವಿದ್ಯಾರ್ಥಿಗಳನ್ನು ವಿದ್ಯಾರ್ಥಿನಿಲಯದಿಂದ ಸ್ಥಳಾಂತರಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ತಿಳಿಸಲಾಗಿದೆ’ ಎಂದರು.

‘ಕಾಮಗಾರಿ ನಿರ್ವಹಿಸಿದ ನಿರ್ಮಿತಿ ಕೇಂದ್ರದವರಿಂದ ಮಾಹಿತಿ ಪಡೆದಿದ್ದೇನೆ. ಸ್ವಂತ ಖರ್ಚಿನಲ್ಲಿ ಕಾಮಗಾರಿ ಮಾಡಿಸಿ ಲೋಪ ಸರಿಪಡಿಸುವುದಾಗಿ ಹೇಳಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸತ್ಯಭಾಮಾ ತಿಳಿಸಿದರು.

ಸಚಿವ ದೇಶಪಾಂಡೆ ಮಾತನಾಡಿ, ಸ್ವಂತ ಖರ್ಚಿನಲ್ಲಿ ಕಾಮಗಾರಿ ಮಾಡಿಸಿ ಸರಿಪಡಿಸುತ್ತೇನೆ ಎಂದು ಹೇಳಿದ್ದಾರೆಂದರೆ ಕಾಮಗಾರಿ ಕಳಪೆಯಾಗಿದೆ ಎಂದು ಒಪ್ಪಿಕೊಂಡಂತೆ. ಕಾಮಗಾರಿ ಅವರು ಮಾಡಿಸದೆ ಮತ್ತೊಬ್ಬರಿಗೆ ಗುತ್ತಿಗೆ ನೀಡಿರುತ್ತಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಗೆ ತಕ್ಷಣವೇ ನೋಟಿಸ್‌ ನೀಡಿ, ಕ್ರಮ ಜರುಗಿಸಬೇಕು. ಸ್ಥಳವನ್ನು ಪರಿಶೀಲಿಸಿ ವರದಿ ನೀಡಬೇಕು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ದ್ವಂದ್ವ ಮಾಹಿತಿ; ನೋಟಿಸ್‌ ನೀಡಲು ಸೂಚನೆ

‘ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಯಾವುದೇ ಗ್ರಾಮಕ್ಕೆ ಟ್ಯಾಂಕರ್‌ನಲ್ಲಿ ನೀರು ಪೂರೈಸುತ್ತಿಲ್ಲ’ ಎಂದು ಜಿಲ್ಲಾಧಿಕಾರಿಗೆ ಸಭೆಗೆ ತಿಳಿಸಿದರು. ‘ಹಿರೇಗೌಜ ಮತ್ತು ಮಲ್ಲೇನಹಳ್ಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸುತ್ತಿರುವುದಾಗಿ ಅಧಿಕಾರಿಗಳು ಜೂನ್‌ 26ರಂದು ಲಿಖಿತ ಮಾಹಿತಿ ನೀಡಿದ್ದಾರೆ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ದ್ವಂದ್ವ ಮಾಹಿತಿ ನೀಡಿರುವುದಕ್ಕೆ ಸಿಡಿಮಿಡಿಗೊಂಡ ಸಚಿವರು, ಸಂಬಂಧಪಟ್ಟ ಅಧಿಕಾರಿಗೆ ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !