ಗುರುವಾರ , ಜನವರಿ 23, 2020
21 °C
ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ಸಮಾವೇಶ

ಕಿರು ಹಣಕಾಸು ಸಂಸ್ಥೆಗಳ ಸಾಲಮನ್ನಾಕ್ಕೆ ಒತ್ತಾಯ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕಿರು ಹಣಕಾಸು ಸಂಸ್ಥೆಗಳಿಂದ (ಮೈಕ್ರೋ ಫೈನಾನ್ಸ್‌) ಬಡಕುಟುಂಬಗಳ ಮಹಿಳೆಯರು ಪಡೆದಿರುವ ಸಾಲಮನ್ನಾ ಮಾಡಬೇಕು ಎಂದು ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ‘ಸಾಲ ಸಂತ್ರಸ್ತ ಬಡಕುಟುಂಬಗಳ ಸಮಾವೇಶ’ ನಡೆಯಿತು.

ಕೇಂದ್ರ ಸರ್ಕಾರದ ನೀತಿಯಿಂದಾಗಿ ಕೈಗಾರಿಕೆಗಳು ಮುಚ್ಚುತ್ತಿವೆ. ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ನೆರೆಯಿಂದಾಗಿ ಕಾಫಿ ತೋಟಗಳು ಹಾನಿಗೀಡಾಗಿವೆ. ತೋಟ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಕೂಲಿ ಕಾರ್ಮಿಕರಿಗೆ ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿದೆ. ಇಂತಹ ಸ್ಥಿತಿಯಲ್ಲಿ ಸಾಲ ಮರುಪಾವತಿ ಸಾಧ್ಯವಾಗುತ್ತಿಲ್ಲ. ಸಾಲಮನ್ನಾಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಸಮಿತಿ ಸದಸ್ಯರು ಒತ್ತಾಯಿಸಿದರು.

ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಕಿರು ಹಣಕಾಸು ಸಂಸ್ಥೆಗಳು ಸಣ್ಣದಾಗಿ ವ್ಯವಹಾರ ನಡೆಸಲು ಅನುಮತಿ ಪಡೆದು ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಕಿರು ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿಗೆ ಸಾಲ ಪಡೆದು, ಬಡವರಿಗೆ ಹೆಚ್ಚು ಬಡ್ಡಿಗೆ ಸಾಲ ನೀಡುತ್ತಿವೆ. ಹಗಲುರಾತ್ರಿ ಎನ್ನದೆ ಸಾಲಗಾರರಿಗೆ ಕಿರುಕುಳ ನೀಡುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

‘ಕಿರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಬಡಕುಟುಂಬಗಳ ಮಹಿಳೆಯರು ಹೆದರಬಾರದು. ಸಾಲ ವಸೂಲಿಗಾರರ ದೌರ್ಜನ್ಯವನ್ನು ಒಗ್ಗೂಡಿ ಖಂಡಿಸಬೇಕು’ ಎಂದರು.

ಬಿಎಸ್‌ಪಿ ವಲಯ ಉಸ್ತುವಾರಿ ಪರಮೇಶ್ ಮಾತನಾಡಿ, ಬಡವರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಕಿರು ಹಣಕಾಸು ಸಂಸ್ಥೆಗಳು ಸ್ಥಾಪನೆಯಾದವು. ಆದರೆ ಅದು ಈಗ ಉದ್ಯಮವಾಗಿ ಪರಿವರ್ತನೆಯಾಗಿದೆ. ಈ ಸಂಸ್ಥೆಗಳು ಕಾನೂನು ಮಾರ್ಗದಲ್ಲಿ ಸಾಲ ವಸೂಲಿ ಮಾಡುತ್ತಿಲ್ಲ. ಸಾಲಗಾರರ ಆತ್ಮಗೌರವ, ಸ್ವಾಭಿಮಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವಸೂಲಾತಿಗೆ ನಡೆಸುತ್ತಿವೆ ಎಂದು ಆಪಾದಿಸಿದರು.

‘ರಾಜ್ಯದ ಎಲ್ಲ ಶಾಸಕರು ಮೈಕ್ರೋ ಫೈನಾನ್ಸ್‌ಗಳ ಮುಖ್ಯಸ್ಥರ ಸಭೆ ನಡೆಸಬೇಕು. ಬಲವಂತಾಗಿ ಸಾಲ ವಸೂಲಾತಿ ಮಾಡದಂತೆ ತಾಕೀತು ಮಾಡಬೇಕು. ಇಲ್ಲವಾದಲ್ಲಿ ಶಾಸಕರ ಮನೆ ಎದುರು ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ದಕ್ಷಿಣಕನ್ನಡ ಜಿಲ್ಲೆಯ ಸಿಪಿಐ ಮುಖಂಡ ಬಿ.ಎಂ.ಭಟ್ ಮಾತನಾಡಿ, ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಕಿರು ಹಣಕಾಸು ಸಂಸ್ಥೆಗಳು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನಿಂದ (ನಬಾರ್ಡ್‌) ಶೇ 2 ಬಡ್ಡಿ ದರದಲ್ಲಿ ಸಾಲ ಪಡೆಯುತ್ತವೆ. ಜನರಿಗೆ ಅಧಿಕ ಬಡ್ಡಿ ದರದಲ್ಲಿ ಸಾಲ ನಿಡುತ್ತಿವೆ’ ಎಂದು ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಚಿಕ್ಕಮಗಳೂರಿನ ಕಲ್ದೊಡ್ಡಿ, ಇಂದಿರಾಗಾಂಧಿ ಬಡಾವಣೆ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ, ಸಿಪಿಐ ಮುಖಂಡರಾದ ರೇಣುಕಾರಾಧ್ಯ, ರಾಧಾಸುಂದರೇಶ್, ದಕ್ಷಿಣ ಕನ್ನಡ ಕಾರ್ಮಿಕ ಮುಖಂಡ ಎಲ್.ಮಂಜುನಾಥ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು