ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ, ಸಿರಿಧಾನ್ಯ ಮೇಳ ನಾಳೆಯಿಂದ

ಐಡಿಎಸ್‌ಎಜಿ ಕಾಲೇಜು ಮೈದಾನದಲ್ಲಿ ಮೇಳ ಆಯೋಜನೆ
Last Updated 27 ಡಿಸೆಂಬರ್ 2018, 11:12 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಷಿ ಇಲಾಖೆ ವತಿಯಿಂದ ಇದೇ 29 ಮತ್ತು 30ರಂದು ಐಡಿಎಸ್‌ಎಜಿ ಕಾಲೇಜು ಮೈದಾನದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮಶೇಖರ್‌ ಇಲ್ಲಿ ಗುರುವಾರ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್‌ ಅವರು 29ರಂದು ಮೇಳದ ಉದ್ಘಾಟನೆ ನೆರವೇರಿಸುವರು. ಕೃಷಿ ಸಚಿವ ಶಿವಶಂಕರರೆಡ್ಡಿ ಅವರು ವಸ್ತುಪ್ರದರ್ಶನದ ಉದ್ಘಾಟನೆ ನೆರವೇರಿಸುವರು. ವಿಧಾನ ಪರಿಷತ್ತಿನ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ ಅವರು ಹಸ್ತಪ್ರತಿ ಬಿಡುಗಡೆ ಮಾಡುವರು. ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ ಅವರು ‘ಸಿರಿಧಾನ್ಯಗಳ ಮಹತ್ವ ಹಾಗು ಕೃಷಿರಂಗದ ಸವಾಲುಗಳು’ ಕುರಿತು ದಿಕ್ಸೂಚಿ ಉಪನ್ಯಾಸ ನೀಡುವರು. ‘ಏಮ್ಸ್‌’ ಪ್ರಾಧ್ಯಾಪಕ ವಸಂತಕುಮಾರ್‌ ಅವರು ‘ಔಷಧಿರಹಿತ ಜೀವನಕ್ಕೆ ಆಹಾರವೇ ಮದ್ದು’ ಕುರಿತು, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಾರಾಯಣ ಎಸ್‌.ಮಾವರ್ಕರ್‌ ಅವರು ‘ ಸಿರಿಧಾನ್ಯಗಳಲ್ಲಿ ಉತ್ಪಾದನಾ ತಾಂತ್ರಿಕತೆಗಳು’ ಕುರಿತು ಮಾತನಾಡುವರು ಎಂದರು.

30ರಂದು ಮೈಸೂರು ಜಿಲ್ಲೆಯ ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಗೋವಿಂದರಾಜು ಅವರು ‘ಸಿರಿಧಾನ್ಯಗಳಲ್ಲಿ ಉತ್ಪಾದನಾ ತಾಂತ್ರಿಕತೆಗಳು’, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹಸಂಶೋಧಕ ಎಂ.ವೈ.ಉಲ್ಲಾಸ್‌ ಅವರು ‘ದೇಸಿ ತಳಿಗಳ ಸಂರಕ್ಷಣೆ’ ಕುರಿತು ಉಪನ್ಯಾಸ ನೀಡುವರು. ‘ಸಾವಯವ ಕೃಷಿಯ ಅನಿವಾರ್ಯ ಮತ್ತು ಅಗತ್ಯ’ ಕುರಿತು ರೈತರೊಂದಿಗೆ ಸಂವಾದ ಇದ್ದು ಜಿಲ್ಲೆಯ ಸಾವಯವ ಕೃಷಿಕರಾದ ಅರವಿಂದ್‌ ಭೂತನಕಾಡು, ಚಂದ್ರಶೇಖರ್‌ ನಾರಣಾಪುರ, ಈಶ್ವರಪ್ಪ ಗರ್ಜೆ, ವೀರಣ್ಣ ವಿಠಲಾಪುರ ಪಾಲ್ಗೊಳ್ಳುವರು ಎಂದರು.

ಸಾವಯವ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ, ಸಿರಿಧಾನ್ಯಗಳಾದ ಹಾರಕ, ನವಣೆ, ಸಜ್ಜೆ, ಬರಗು, ಕೊರಲೆ, ಸಾಮೆ, ಊದಲು ಮೊದಲಾದವನ್ನು ಉತ್ಪಾದಿಸುವ ಉತ್ಪಾದಕರು ಮತ್ತು ಉದ್ದಿಮೆದಾರರೊಂದಿಗೆ ಸಂಪರ್ಕ ಕಲ್ಪಿಸಿ ಮಾರುಕಟ್ಟೆ ಜಾಲವನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ. ಸಾವಯವ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯಕ್ಕೆ ಪೂರಕವಾಗಿದವೆ. ಸಿರಿಧಾನ್ಯಗಳಲ್ಲಿ ನಾರಿನಂಶ, ಪೋಷಕಾಂಶ ಹೆಚ್ಚು ಇರುತ್ತದೆ. ಕಡಿಮೆ ನೀರಿನಲ್ಲಿ ಈ ಧಾನ್ಯಗಳನ್ನು ಬೆಳೆಯಬಹುದು ಎಂದು ಹೇಳಿದರು.

ವಸ್ತು‌ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದಕರು, ಮಾರಾಟಗಾರರು ಭಾಗವಹಿಸುವರು. ಗ್ರಾಹಕರು ಉತ್ಪನ್ನಗಳನ್ನು ಖರೀದಿಸಲು ಅವಕಾಶ ಇದೆ. ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳ ಮಾಹಿತಿ ದೊರೆಯಲಿದೆ. ಸಂಘ ಸಂಸ್ಥೆಗಳು ರೈತರೊಂದಿಗೆ ಮಾತುಕತೆ ನಡೆಸಿ, ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆ ಮತ್ತು ಮಾರಾಟದ ಕುರಿತಂತೆ ಚರ್ಚಿಸಬಹುದು ಎಂದರು.

ಸಿರಿಧಾನ್ಯಗಳನ್ನು ಬಳಸಿ ತಯಾರಿಸಬಹುದಾದ ಖಾದ್ಯಗಳ ಕುರಿತು ಮಹಿಳೆಯರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿದೆ. ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಜಿಲ್ಲೆಯ ಕಡೂರು, ತರೀಕೆರೆ ಭಾಗದಲ್ಲಿ ಸಿರಿಧಾನ್ಯಗಳನ್ನು ಸ್ವಲ್ಪಮಟ್ಟಿಗೆ ಬೆಳೆಯುತ್ತಾರೆ. ಸಿರಿಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಬೇಕು. ಸಿರಿಧಾನ್ಯ ಬೆಳೆಯವುದಕ್ಕೆ ಸರ್ಕಾರದಿಂದ ಎಕರೆಗೆ ₹ 6 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಪರಿಕರಗಳನ್ನು ಒದಗಿಸಲು ಅವಕಾಶ ಇದೆ. ಜಿಲ್ಲೆಯಲ್ಲಿ 880 ಎಕರೆಯಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಉಪನಿರ್ದೇಶಕರಾದ ಕೃಷ್ಣಮೂರ್ತಿ, ಲೋಕೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT