ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಚೌಕಿದಾರ್‌ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿದಾರ್‌: ಸಿದ್ದರಾಮಯ್ಯ

ಉಡುಪಿ–ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಪರ ಪ್ರಚಾರ ಸಭೆ
Last Updated 15 ಏಪ್ರಿಲ್ 2019, 14:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಚೌಕಿದಾರ್‌ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿದಾರ್‌ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ ಮೈತ್ರಿ ಪಕ್ಷಗಳ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದರು. ‘ವಿಜಯ್‌ ಮಲ್ಯ, ನೀರವ್‌ ಮೋದಿ, ಲಲಿತ್‌ ಮೋದಿ ಮೊದಲಾದ ಉದ್ಯಮಿಗಳು ಬ್ಯಾಂಕುಗಳಿಗೆ ಕ್ಯೋಟಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಹೋಗಿದ್ದಾರೆ. ಅವರೆಲ್ಲ ಮೋದಿಗೆ ಗೊತ್ತಿಲ್ಲದೆ ಹೋಗಿದ್ದಾರೆಯೇ? ಮೂರು ಸಾವಿರ ಕೋಟಿ ರೂಪಾಯಿ ರಫೇಲ್‌ ಹಗರಣ ನಡೆದಿದೆ. ಹಾಗಾದರೆ, ಮೋದಿ ಯಾವ ಚೌಕಿದಾರ್‌ (ಕಾವಲುಗಾರ) ಕೆಲಸ ಮಾಡಿದರು. ಅವರು ನಕಲಿ ಚೌಕಿದಾರ್. ಅವರದ್ದು ಶೇ 100 ಭ್ರಷ್ಟ ಸರ್ಕಾರ’ ಎಂದು ಆರೋಪಿಸಿದರು.

‘ರಾಹುಲ್‌ ಗಾಂಧಿ ಅವರು ಬಹುಸಂಖ್ಯಾತರು ಇರುವ ಪ್ರದೇಶದಲ್ಲಿ ಕಣಕ್ಕಿಳಿಯಲು ಹೆದರಿ ಅಲ್ಪಸಂಖ್ಯಾತರು ಇರುವ ಕಡೆಗೆ ಹೋಗಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇದನ್ನೇ ಕೋಮುವಾದ ಎಂದು ಹೇಳುವುದು. ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂದು ಪ್ರಧಾನಿ ಹೇಳುವುದು ನಾಚಿಕೆಗೇಡಿನ ಸಂಗತಿ’ ಎಂದು ಲೇವಡಿ ಮಾಡಿದರು.

‘ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ ಅವರೆಲ್ಲ ಯಾವ ಸಂಸ್ಕಾರ ಕಲಿತಿದ್ದಾರೋ ಗೊತ್ತಿಲ್ಲ. ಮೋದಿ ಅವರನ್ನು ವಿರೋಧಿಸಿದ್ರೆ ತಾಯಿಗಂಡ್ರು ಎಂದು ರವಿ ಹೇಳಿಕೆ ನೀಡಿದ್ದಾರೆ. ಜನಪ್ರತಿನಿಧಿಯಾಗಿ ನಾಲಗೆ ಮೇಲೆ ಹಿಡಿತ ಇಲ್ಲ. ಈ ರೀತಿ ಹೇಳಿಕೆ ನೀಡುವುದು ಅಪರಾಧ. ರವಿಗೆ ಸಂವಿಧಾನ, ಕಾನೂನಿನ ಅರಿವಿದೆಯೋ, ಇಲ್ಲವೋ ಗೊತ್ತಿಲ್ಲ’ ಎಂದು ಕಟಕಿಯಾಡಿದರು.

‘ಬಿಜೆಪಿ ಕಾರ್ಯಕರ್ತರಿಂದ ‘ಗೋ ಬ್ಯಾಕ್‌ ಶೋಭಾ’ ಎಂದು ಹೇಳಿಸಿದ್ದೆ ಸಿ.ಟಿ.ರವಿ. ನನಗೆ ಗೊತ್ತಿರುವ ಮಟ್ಟಿಗೆ ಈ ಗಿರಾಕಿ ಶೋಭಾ ಕರಂದ್ಲಾಜೆಗೆ ಸಿ.ಟಿ.ರವಿಯೇ ವೋಟು ಹಾಕಲ್ಲ’ ಎಂದು ಹೇಳಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.

‘ಕೆ.ಎಸ್‌.ಈಶ್ವರಪ್ಪಗೆ ಮಿದುಳು ಮತ್ತು ನಾಲಿಗೆಯ ನಡುವಿನ ಲಿಂಕ್ ತಪ್ಪಿದೆ. ಬಾಯಿಗೆ ಬಂದಂತೆ ಮಾತಾಡುತ್ತಾರೆ’ ಎಂದು ಕುಟುಕಿದರು.

‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ನಾಲಾಯಕ್ಕು. ನಾನು ಲಘುವಾಗಿ ಮಾತನಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕೆ ಎಂದು ಸಚಿವ ಅನಂತಕುಮಾರ ಹೆಗಡೆ ಹೇಳಿದ್ದರು. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅನುಮತಿ ಇಲ್ಲದೆ ಹೆಗಡೆ ಈ ಹೇಳಿಕೆ ನೀಡಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

‘ಅಂಬೇಡ್ಕರ್‌ ಪ್ರತಿಮೆಗಳನ್ನು ಧ್ವಂಸ ಮಾಡಬೇಕು, ಸಂವಿಧಾನ ಸುಟ್ಟು ಹಾಕಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ನೀನು ಸೂರ್ಯ ಅಲ್ಲ, ಅಮವಾಸ್ಯೆ ಇರಬೇಕು ಎಂದು ನಾನು ಹೇಳಿದೆ. ಸೂರ್ಯ ಎಂದರೆ ಬೆಳಕು ಕೊಡುವುದು ಅಷ್ಟೆ. ಬೆಂಕಿ ಹಚ್ಚುವವರೆಲ್ಲ ಸೂರ್ಯ ಹೇಗಾಗುತ್ತಾರೆ’ ಎಂದು ಪ್ರಶ್ನಿಸಿದರು.

‘ಮೀಸಲಾತಿ ಯಾಕೆ ಕೊಡಬೇಕು ಸಾಕು ನಿಲ್ಲಿಸಿ ಎಂದು ಆರ್‌ಎಸ್‌ಎಸ್‌ನ ಮೋಹನ್‌ ಭಾಗವತ್‌ ಹೇಳಿದ್ದಾರೆ. ಸಂವಿಧಾನದಲ್ಲಿ ಹಿಂದುಗಳ ಆಚಾರವಿಚಾರಗಳಿಗೆ ಅವಕಾಶ ಇಲ್ಲ, ಹಾಗಾಗಿ ಬದಲಾವಣೆ ಆಗಬೇಕು ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಸತೀಶ್‌ ಹೇಳಿದ್ದಾರೆ. ನಮಗೆ ಸಂವಿಧಾನವೇ ಧರ್ಮಗ್ರಂಥ, ಕುರಾನ್‌, ಬೈಬಲ್‌, ಭಗವದ್ಗೀತೆ ಎಲ್ಲ. ಅದನ್ನು ಬದಲಾಯಿಸುವುದನ್ನು ಒಪ್ಪಲು ಸಾಧ್ಯವೇ? ಸಂವಿಧಾನಕ್ಕೆ ವಿರೋಧ ಇರುವವರಿಗೆ ಮತ ಹಾಕಬೇಕೆ ಎಂದು ಪ್ರಶ್ನಿಸಿದರು.

‘ಪ್ರಜಾವಾಣಿ’ ಸಂಪಾದಕೀಯ ಪ್ರಸ್ತಾಪಿಸಿದ ಸಿದ್ದರಾಮಯ್ಯ

‘ಪ್ರಜಾವಾಣಿ’ಯ ಇವತ್ತಿನ (ಏ.15) ಸಂಪಾದಕೀಯ ಓದಿದೆ, ತುಂಬಾ ಚೆನ್ನಾಗಿದೆ. ವಸ್ತುಸ್ಥಿತಿಯನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಬಹಳ ಚೆನ್ನಾಗಿ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಸಭೆಯಲ್ಲಿ ಪ್ರಸ್ತಾಪಿಸಿದರು

‘ಚುನಾವಣೆಗೆ ಡಬ್ಬಗಳಲ್ಲಿ ಹಣ– ಚಿದಂಬರ ರಹಸ್ಯ’

‘ಐದು ವರ್ಷ ಭ್ರಷ್ಟಾಚಾರಮುಕ್ತ ಆಡಳಿತ ನೀಡಿದ್ದೇನೆ ಎಂದು ಮೋದಿ ಹೇಳುತ್ತಾರೆ. ಆದರೆ, ಚುನಾವಣೆಗೆ ಡಬ್ಬಡಬ್ಬ ಹಣ ಬೆಂಗಳೂರಿಗೆ ಬಂದಿಳಿಯುತ್ತಿದೆ. ಎಷ್ಟು ಡಬ್ಬ ಬಂದವು, ಹೇಗೆ ಸಾಗಿಸಿದರು ಎಂಬುದೇ ಚಿದಂಬರ ರಹಸ್ಯವಾಗಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

‘ಈ ಚುನಾವಣೆಗೆ ಹಣ ನೀರಿನ ಹೊಳೆಯಂತೆ ಹರಿಯುತ್ತಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಅದನ್ನು ಎದುರಿಸುವ ಶಕ್ತಿ ಸಿದ್ದರಾಮಯ್ಯಗೂ ಇಲ್ಲ, ದೇವೇಗೌಡರಿಗೂ ಇಲ್ಲ. ದೇಶದ ಆಡಳಿತ ವ್ಯವಸ್ಥೆಯನ್ನು ಕುಲಗೆಡಿಸಿದ್ದಾರೆ’ ಎಂದು ದೂಷಿಸಿದರು.

ಮೋದಿ ಚೌಕಿದಾರ್‌ ಅಲ್ಲ ಷೋಕಿದಾರ್‌: ದಿನೇಶ್‌ ಗುಂಡೂರಾವ್‌

‘ಪ್ರಧಾನಿ ಮೋದಿ ಅವರು ಚೌಕಿದಾರ್‌ ಅಲ್ಲ ಷೋಕಿದಾರ್‌, ಅವರು ಪ್ರಧಾನಮಂತ್ರಿ ಅಲ್ಲ ಪ್ರಚಾರ ಮಂತ್ರಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕಟಕಿಯಾಡಿದರು.

ಮೋದಿ ಅವರು ಬರಿ ಷೋ ಮಾಡಿಕೊಂಡು ತಿರುಗಾಡುತ್ತಾರೆ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಒಂದೊಂದು ಡ್ರೆಸ್‌ ಧರಿಸುತ್ತಾರೆ. ಪ್ರಚಾರ ಮಾಡುತ್ತಾರೆ, ಕೆಲಸ ಮಾಡಲ್ಲ ಎಂದು ಮೂದಲಿಸಿದರು.

‘ಬಿಜೆಪಿಯವರು ರಾಮಮಂದಿರದ ಕಟ್ಟುವುದಾಗಿ 30 ವರ್ಷದಿಂದ ಹೇಳಿದರು. ಯಾಕೆ ಕಟ್ಟಲಿಲ್ಲ? ರಾಮಮಂದಿರ ಕಟ್ಟಬೇಕಾದರೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವೇ ಬರಬೇಕು. ಸುಪ್ರೀಂಕೋರ್ಟ್‌ ಆದೇಶ ಪಾಲಿಸಿಕೊಂಡು ಎಲ್ಲರನ್ನು ಭಾತೃತ್ವದಲ್ಲಿ ತೆಗೆದುಕೊಂಡು ಮಂದಿರ ನಿರ್ಮಿಸುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

‘ದೇಶದಲ್ಲಿ ‘ಮಾಫಿಯಾ ರಾಜ್‌’ ಸೃಷ್ಟಿಸಿಕೊಂಡಿದ್ದಾರೆ. ಮೋದಿ ಮತ್ತು ಅಮಿತ್‌ ಶಾ ಎಲ್ಲ ವ್ಯವಸ್ಥೆ ನಿಯಂತ್ರಿಸುವಂತೆ ಮಾಡಿಕೊಂಡಿದ್ದಾರೆ. ಸಿಬಿಐ, ಐಟಿ ಮೊದಲಾದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT