ಮೋದಿ ಅಲೆ; ಬಿಜೆಪಿಗೆ ಬಲ: ಬಿಎಸ್‌ವೈ

ಸೋಮವಾರ, ಏಪ್ರಿಲ್ 22, 2019
31 °C

 ಮೋದಿ ಅಲೆ; ಬಿಜೆಪಿಗೆ ಬಲ: ಬಿಎಸ್‌ವೈ

Published:
Updated:
Prajavani

ಚಿಕ್ಕಮಗಳೂರು: ‘ಬಿಜೆಪಿಯವರು ಮೋದಿ ಹೆಸರಲ್ಲಿ ಮತಯಾಚನೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಟೀಕಿಸುತ್ತಾರೆ. 10 ವರ್ಷ ಪ್ರಧಾನಿಯಾಗಿದ್ದ ಮನಮೋಹನಸಿಂಗ್‌ ಹೆಸರನ್ನು ಅವರು ಯಾಕೆ ಹೇಳುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇಲ್ಲಿ ಗುರುವಾರ ಪ್ರಶ್ನಿಸಿದರು.

‘2014ರ ಲೋಕಸಭೆ ಚುನಾವಣೆ ಸಂದರ್ಭಕ್ಕೆ ಹೋಲಿಸಿದರೆ ಮೋದಿ ಅಲೆ ಹೆಚ್ಚಾಗಿದೆ. ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಬಿಜೆಪಿಗೆ ಶೇ 15ರಷ್ಟು ಹೆಚ್ಚು ಮತ ಬರಬಹುದೆಂಬ ನಿರೀಕ್ಷೆ ಇದೆ. ದೇಶದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರ, ರಾಜ್ಯದಲ್ಲಿ ಕನಿಷ್ಠ 22 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪುಲ್ವಾಮಾ ದಾಳಿಯಲ್ಲಿ 44 ಯೋಧರು ಹುತಾತ್ಮರಾದರು. ಎರಡು ವರ್ಷ ಮುಂಚೆಯೇ ಎಲ್ಲವೂ ಗೊತ್ತಿತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಮೊದಲೆ ಗೊತ್ತಿದ್ದರೆ ವಿಷಯನ್ನು ರಾಷ್ಟ್ರಪತಿ ಅಥವಾ ಸಂಬಂಧಪಟ್ಟ ಉನ್ನತ ಅಧಿಕಾರಿ ಗಮನಕ್ಕೆ ತರಬೇಕಾಗಿತ್ತು. ಗಮನಕ್ಕೆ ತರದಿರುವುದು ವಿಶ್ವಾಸದ್ರೋಹದ ಕೆಲಸ’ ಎಂದು ದೂಷಿಸಿದರು.

‘ಐಟಿ ಅಧಿಕಾರಿಗಳು ಅನೇಕ ಕಡೆ ದಾಳಿ ಮಾಡಿದ್ದಾರೆ. ಗುತ್ತಿಗೆದಾರರ ಮೇಲೆ ದಾಳಿ ಮಾಡಿದ್ದಾರೆ. ಐಟಿ ದಾಳಿ ಬಗ್ಗೆ ಕುಮಾರಸ್ವಾಮಿ ಮಾಹಿತಿ ನೀಡಿ, ತನ್ನ ಶಿಷ್ಯಂದಿರಿಗೆ ಹಣ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಕರಾವಳಿ ಮತ್ತು ಈ ಭಾಗದವರು ಬುದ್ಧಿ ಇಲ್ಲದವರು ಎಂದು ಕುಮಾರಸ್ವಾಮಿ ಒಮ್ಮೆ ಹೇಳುತ್ತಾರೆ. ತನಗೆ ಅಧಿಕಾರ ಕರುಣಿಸಿದ್ದು ರಾಹುಲ್‌ ಗಾಂಧಿ ಎಂದು ಮತ್ತೊಮ್ಮೆ ಹೇಳುತ್ತಾರೆ. ಅಪ್ಪ, ಮಕ್ಕಳ ಚಿಂತೆ ಕುಟುಂಬದವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಬಗ್ಗೆ ಇದೆಯೇ ಹೊರತು, ರಾಜ್ಯದ ಅಭಿವೃದ್ಧಿ ಬಗ್ಗೆ ಅಲ್ಲ’ ಎಂದು ವ್ಯಂಗ್ಯವಾಡಿದರು.

‘ಮಂಡ್ಯಕ್ಕೆ ಅಂಬರೀಷ್ ಕೊಡುಗೆ ಏನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸುಮಲತಾ, ಅವರ ಪರ ಪ್ರಚಾರದಲ್ಲಿ ತೊಡಗಿರುವ ನಟರ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ’ ಎಂದರು.

‘ಕುಮಾರಸ್ವಾಮಿ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ರೈತರ ಸಾಲಮನ್ನಾ ಅವರೇ ನೀಡಿರುವ ಅಂಕಿಅಂಶಗಳ ಪ್ರಕಾರ ₹ 4.5 ಸಾವಿರ ಕೋಟಿ ದಾಟಿಲ್ಲ. ವಾಸ್ತವ ಸತ್ಯಸಂಗತಿ ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಪ್ರಧಾನಿ ಅವರನ್ನು ಟೀಕಿಸುವ ಮಟ್ಟಿಗೆ ಅವರು ತಲುಪಿದ್ದಾರೆ’ ಎಂದು ಲೇವಡಿ ಮಾಡಿದರು.

ಸಮರ್ಥ ನಾಯಕತ್ವ ಬೆಂಬಲಿಸಿ: ಸಿ.ಟಿ.ರವಿ
‘ಹರಿದು ಹಂಚಿ ತಿನ್ನುವ ನಾಯಕತ್ವಕ್ಕಿಂತ ಸಮರ್ಥವಾಗಿ ನಿಭಾಯಿಸುವ ನಾಯಕತ್ವವನ್ನು ಮತದಾರರು ಬೆಂಬಲಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದರು.

‘ಈ ಸರ್ಕಾರದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ಕಂಬಾಲಪಲ್ಲಿಯಲ್ಲಿ ದಲಿತರ ಜೀವಂತ ದಹನ, ಬದನವಾಳುವಿನಲ್ಲಿ ದೌರ್ಜನ್ಯ ಘಟನೆಗಳು ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಡೆದಿದ್ದವು. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಂಬಾಲಪಲ್ಲಿಯಂಥ ಯಾವುದೇ ಘಟನೆ ನಡೆದಿಲ್ಲ’ ಎಂದರು.

ಬಿಜೆಪಿ ಮುಖಂಡರಾದ ಬೆಳ್ಳಿ ಪ್ರಕಾಶ್‌, ಬಿ.ಜೆ.ಪುಟ್ಟಸ್ವಾಮಿ,ಬಿ.ಜಿ.ಸೋಮಶೇಖರಪ್ಪ, ಎಂ.ಕೆ.ಪ್ರಾಣೇಶ್‌ ಇದ್ದರು.

**

ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಸಜ್ಜು: ಬಿಎಸ್‌ವೈ
‘ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅಪಮಾನ ಅನುಭವಿಸಿದ್ದರು. ಬಾದಾಮಿಯಲ್ಲೂ ಸೋತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದು ಅವರಿಗೂ ಗೊತ್ತು. ಈಗ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಉತ್ತರಿಸಿದರು.

‘ಚುನಾವಣೆ ಪ್ರಚಾರಕ್ಕೆ ಸಿದ್ದರಾಮಯ್ಯ, ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಹೆಲಿಕಾಪ್ಟರ್‌ನಲ್ಲಿ ಒಟ್ಟಾಗಿ ಹೋದರೆ ಒಗ್ಗಟ್ಟಿನ ಮಂತ್ರ ಎಂದು ಹೇಳಲಾಗದು. ಅದೆಲ್ಲ ಹೆಲಿಕಾಪ್ಟರ್‌ನಲ್ಲಿ ಕುಳಿತಿರುವವರೆಗೆ ಮಾತ್ರ. ಮಂಡ್ಯದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಯಾಕೆ ನಡೆಯುತ್ತಿದೆ? ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಮುಂದುವರಿಯುವ ಸಾಧ್ಯತೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಮಾಧ್ಯಮದವರ ಮೇಲೆ ದಾಳಿಯಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಮಂಡ್ಯದ ಕೆಆರ್‌ಎಸ್‌ನಲ್ಲಿ ರೋಡ್‌ ಷೊ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಮಾಧ್ಯಮದವರಿಗೆ ಹಗುರವಾಗಿ ಮಾತಾಡಿರುವುದು ಮತ್ತು ತಾನು ಹೇಳಿದಂತೆ ಮಾಧ್ಯಮದವರು ನಡೆದುಕೊಳ್ಳಬೇಕೆಂಬ ಅಪೇಕ್ಷೆ ಖಂಡನೀಯ. ಕುಮಾರಸ್ವಾಮಿ ಕ್ಷಮೆಯಾಚಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !