ಬುಧವಾರ, ಮೇ 18, 2022
24 °C
ತ್ಯಾಜ್ಯ ಎಸೆಯುವವರ ವಿರುದ್ಧ ಸ್ಥಳೀಯರ ಆಕ್ರೋಶ– ಕ್ರಮದ ಎಚ್ಚರಿಕೆ

ರಾಜ್ಯ ಹೆದ್ದಾರಿ ಬದಿಯಲ್ಲಿ ಕಸದ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ಪಟ್ಟಣದ ಗೆಂಡೆಹಳ್ಳಿ – ಬೇಲೂರು ರಸ್ತೆಯ ಪಂಪ್ ಹೌಸ್ ಬಳಿ ರಸ್ತೆ ಬದಿಗೆ ಕಸ ಎಸೆಯುವ ಪ್ರವೃತ್ತಿ ಮುಂದುವರಿದಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹೊರವಲಯದ ಪಂಪ್ ಹೌಸ್ ಸಮೀಪದಲ್ಲಿ ರಸ್ತೆ ಬದಿಯಲ್ಲಿ ಖಾಲಿಯಿರುವ ಪ್ರದೇಶದಲ್ಲಿ ಪ್ಲಾಸ್ಟಿಕ್ ಗಂಟುಗಳು, ಹಳೆಯ ವಸ್ತುಗಳು, ತಲೆಕೂದಲು, ಮೀನು, ಕೋಳಿ ತ್ಯಾಜ್ಯ ಸೇರಿದಂತೆ ವಾಸನೆಯುಕ್ತ ತ್ಯಾಜ್ಯಗಳನ್ನು ಎಸೆದಿದ್ದು, ಕಸದ ರಾಶಿ ಯಿರುವ ಪ್ರದೇಶದಲ್ಲಿ ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.

ಕಸದ ರಾಶಿಯಿರುವ ಪ್ರದೇಶದಲ್ಲಿಯೇ ವಾಸದ ಮನೆಗಳಿದ್ದು, ಕೋಳಿ, ಮೀನಿನ ತ್ಯಾಜ್ಯದ ದುರ್ವಾಸನೆಯ ನಡುವೆಯೇ ಜನರು ದಿನ ಕಳೆಯುವಂತಾಗಿದೆ. ಖಾಲಿ ಜಾಗದಲ್ಲಿ ಕಸ ಎಸೆಯುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸ್ಥಳೀಯರು, ಕಸ ಎಸೆಯುವವರಿಂದ ಬೇಸತ್ತು, ಖಾಲಿ ಪ್ರದೇಶದಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಕಸ ಎಸೆಯುವವರ ವಿರುದ್ಧ ಕೆಟ್ಟದಾಗಿ ಬರೆದಿದ್ದರೂ ಸಹ ಮುಲಾಜಿಲ್ಲದೇ ಕಸ ಎಸೆದು ಹೋಗುತ್ತಿದ್ದಾರೆ ಎಂಬುದು ಸ್ಥಳೀಯರ ದೂರಾಗಿದೆ.

‘ಕಸ ರಾಶಿಯಾಗಿರುವ ಬಗ್ಗೆ ದೂರು ನೀಡುತ್ತಿದ್ದಂತೆ ಪಟ್ಟಣ ಪಂಚಾಯಿತಿಯಿಂದ ಕಸವನ್ನು ತೆರವು ಗೊಳಿಸುತ್ತಾರೆ. ಆದರೆ, ಪದೇ ಪದೇ ಕದ್ದು ಕಸವನ್ನು ತಂದು ಹಾಕಲಾಗುತ್ತದೆ. ಕೊಳೆಯುವ ವಸ್ತುಗಳನ್ನು ಎಸೆದು ಹೋಗುವುದರಿಂದ ಸ್ಥಳೀಯರು ವಾರಗಟ್ಟಲೇ ಕೆಟ್ಟ ವಾಸನೆಯ ನಡುವೆಯೇ ಬದುಕುವಂತಾಗುತ್ತದೆ. ಅಲ್ಲದೇ ಖಾಲಿ ಪ್ರದೇಶದಿಂದ ಕೂಗಳತೆ ದೂರದಲ್ಲಿ ಪಟ್ಟಣಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಪಂಪ್‌ಹೌಸ್‌ಯಿದ್ದು, ಒಣಗಿದ ತ್ಯಾಜ್ಯ, ಕೂದಲು ಗಾಳಿಯಲ್ಲಿ ನೀರಿನ ಮೂಲಕ್ಕೆ ಸೇರಿ ಕಲುಷಿತವಾಗುತ್ತಿದೆ. ತಡರಾತ್ರಿ, ನಸುಕಿನಲ್ಲಿ ಕಸವನ್ನು ಎಸೆಯಲಾಗುತ್ತಿದೆ. ಇದರಿಂದ ಕಸ ಎಸೆಯುವವರ ಪತ್ತೆ ಹಚ್ಚುವುದು ಕೂಡ ಕಷ್ಟವಾಗಿದೆ. ಪಟ್ಟಣ ಪಂಚಾಯಿತಿಯು ಸ್ಥಳೀಯರ ಸಹಕಾರದೊಂದಿಗೆ ಕಸ ಎಸೆಯುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ನಾಗರಿಕರು ಕೂಡ ಕಸ ವಿಲೇವಾರಿಯ ಬಗ್ಗೆ
ಸೂಕ್ತ ಜಾಗೃತರಾಗಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಲ್ಬರ್ಟ್ ಪಿಂಟೊ.

‘ಪಟ್ಟಣದಾದ್ಯಂತ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲೂ ಮನೆ ಬಾಗಿಲಿಗೆ ತೆರಳಿ ಹಸಿಕಸ, ಒಣಕಸವನ್ನು ಸಂಗ್ರಹಿಸಲಾಗುತ್ತಿದೆ. ರಸ್ತೆ ಬದಿಯಲ್ಲಿ ಕಸ ಎಸೆಯುವುದು ಕಾನೂನಿಗೆ ವಿರುದ್ಧವಾಗಿದೆ. ಕಸ ಎಸೆಯುವವರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಜನತೆ ಕೂಡ ಕಸ ವಿಲೇವಾರಿಗೆ ಕೈ ಜೋಡಿಸಿ, ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿಡಲು ನೆರವಾಗಬೇಕು’ ಎನ್ನುತ್ತಾರೆ ಮೂಡಿಗೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣೇಗೌಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು