ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದೂರು | ಕಾಡಾನೆ ಹಾವಳಿ: ವಿವಾಹಕ್ಕೆ ಹೆಣ್ಣು ಕೊಡುತ್ತಿಲ್ಲ!

ಕುಂದೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಳಲು
Last Updated 17 ಸೆಪ್ಟೆಂಬರ್ 2022, 5:41 IST
ಅಕ್ಷರ ಗಾತ್ರ

ಮೂಡಿಗೆರೆ: ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಡಾನೆ ದಾಳಿಯಿಂದ ಸ್ಥಳೀಯ ಯುವಕರಿಗೆ ಹೆಣ್ಣು ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಳಲು ತೋಡಿಕೊಂಡರು.

ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿಯ ಎಸ್ಟೇಟ್ ಕುಂದೂರು ಗ್ರಾಮದ ಸಮುದಾಯ ಭವನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಹುಲ್ಲೇಮನೆ ಗಣೇಶ್, ‘ಕಾಡಾನೆ ದಾಳಿಯಿಂದ ಜೀವಹಾನಿ, ಬೆಳೆ ನಾಶವಾಗುತ್ತಿರುವುದು ಮಾತ್ರವಲ್ಲದೆ ವಿವಾಹ ಕಾರ್ಯಗಳಿಗೂ ಅಡ್ಡಿಯಾಗಿದೆ. ಯಾವುದೇ ಗ್ರಾಮದಲ್ಲಿ ಸಂಬಂಧ ನೋಡಿದರೂ, ಕುಂದೂರು ಭಾಗಕ್ಕೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಾರೆ. ಕಾಡಾನೆ ದಾಳಿಗೆ ಹೆದರಿ ಗ್ರಾಮಕ್ಕೆ ಸಂಬಂಧ ಬೆಳೆಸಲು ಸಹ ಬರುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಧ್ವನಿಗೂಡಿಸಿದ ಗ್ರಾಮದ ಯುವಕ ರವಿ, ‘ಇದರ ಅನುಭವ ನನಗೂ ತಟ್ಟಿದ್ದು, ಸಂಬಂಧಕ್ಕಾಗಿ ಬಂದ ಒಂದು ಪ್ರಸ್ತಾವ, ಈ ಭಾಗದಲ್ಲಿ ಕಾಡಾನೆ ದಾಳಿಯಿದೆ ಎಂಬ ಕಾರಣ ನೀಡಿ ತಿರಸ್ಕಾರಗೊಂಡಿತು’ ಎಂದರು. ಕೂಡಲೇ ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

‘ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಸಮರ್ಪಕ ವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸದೆ, ಪೊಲೀಸ್ ದೂರು ನೀಡಿ, ರೌಡಿ ಪ್ರಕರಣ ದಾಖಲಿಸುವುದಾಗಿ ಗ್ರಾಮಸ್ಥರಿಗೆ ಬೆದರಿಕೆವೊಡ್ಡುತ್ತಾರೆ. ಮೂರು ಗ್ರಾಮ ಸಭೆಗಳಿಗೂ ನಿರಂತರವಾಗಿ ಗೈರು ಹಾಜರಿಯಾಗಿದ್ದಾರೆ. ಅವರು ಗ್ರಾಮ ಸಭೆಗೆ ಬರಬೇಕು. ಇಲ್ಲದಿದ್ದರೆ ಆಸ್ಪತ್ರೆಗೆ ಬೀಗ ಹಾಕಿ
ಪ್ರತಿಭಟಿಸುತ್ತೇವೆ’ ಎಂದು ಸಭೆಯಲ್ಲಿದ್ದ ಗ್ರಾಮಸ್ಥರು ಆರೋಪಿಸಿದರು.

ಗ್ರಾಮದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ದನಗಳನ್ನು ಜಮೀನಿಗೆ, ಬೀದಿ ಬದಿಯಲ್ಲಿ ಬಿಡದೇ ಸಾಕುವಂತೆ ಗ್ರಾಮ ಪಂಚಾಯಿತಿಯಿಂದ ಜಾಗೃತಿ ಮೂಡಿಸಬೇಕು. ನಿಯಂತ್ರಿಸದಿದ್ದರೆ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಬೇಕು ಎಂದು ಜನರು ಒತ್ತಾಯಿಸಿದರು. ಸಾಕು ನಾಯಿಗಳಿಗೆ ಪಶುಪಾಲನಾ ಇಲಾಖೆಯಿಂದ ಉಚಿತ ಲಸಿಕೆ ಹಾಕಲಾಗುತ್ತಿದ್ದು, ಗ್ರಾಮದಲ್ಲಿ ಶಿಬಿರ ನಡೆಸಲಾಗುವುದು ಎಂದು ಜಾನುವಾರು ಅಭಿವೃದ್ಧಿ ಅಧಿಕಾರಿ ಸುದೀಶ್ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ ವಿಜೇಂದ್ರ, ಉಪಾಧ್ಯಕ್ಷೆ ರತಿನವೀನ್, ಸದಸ್ಯರಾದ ಸಂತೋಷ್, ಜಯಂತಿ, ಸುನೀತ, ನೋಡೆಲ್ ಅಧಿಕಾರಿ ಸುದೀಶ್, ಪಿಡಿಒ ವಾಸುದೇವ್, ಕಾರ್ಯದರ್ಶಿ ಪ್ರೇಮಕುಮಾರ್, ಉಮೇಶ್, ಪ್ರವೀಣ್, ಪ್ರಭಾಕರ, ಮೋಹನ್, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT