ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಭತ್ತ ಜೊಳ್ಳಿಗೆ ಬೆಂಕಿ ರೋಗ ಕಾರಣ, ಶೇ 90ರಷ್ಟು ಬೆಳೆ ಹಾನಿ

ಗದ್ದೆಗೆ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಭೇಟಿ
Last Updated 1 ಡಿಸೆಂಬರ್ 2021, 6:40 IST
ಅಕ್ಷರ ಗಾತ್ರ

ಮೂಡಿಗೆರೆ: ‘ತಾಲ್ಲೂಕಿನ ಬಡವನದಿಣ್ಣೆಯ ರೈತ ಲಕ್ಷ್ಮಣಗೌಡ ಅವರ ಗದ್ದೆಯಲ್ಲಿ ಭತ್ತದ ಬೆಳೆ ಜೊಳ್ಳಾಗಿರುವುದಕ್ಕೆ ಬೆಂಕಿ ರೋಗ ಕಾರಣವಾಗಿದ್ದು, ಶೇ 90ರಷ್ಟು ಬೆಳೆ ಹಾನಿಯಾಗಿದೆ’ ಎಂದು ಕೃಷಿ ವಿಜ್ಞಾನಿ ಗಿರೀಶ್ ತಿಳಿಸಿದರು.

‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ‘ಜೊಳ್ಳಾದ ಭತ್ತ: ಕಂಗಾ ಲಾದ ಬೆಳೆಗಾರ’ ಎಂಬ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ಮಂಗಳವಾರ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ಜಂಟಿಯಾಗಿ ಗದ್ದೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ಕೆಲವು ಭತ್ತದ ತಳಿಗಳು ಬೆಂಕಿ ರೋಗದ ನಿರೋಧಕ ಶಕ್ತಿ ಕಡಿಮೆಯಿದ್ದು, ಅಂತಹ ತಳಿಗಳಿಗೆ ರೋಗ ಕಾಣಿಸಿಕೊಂಡಿದೆ. ಬಡವನದಿಣ್ಣೆಯಲ್ಲೂ ಭತ್ತ ಜೊಳ್ಳಾಗಿರುವುದಕ್ಕೆ ಭತ್ತದ ತೆನೆಗಳು ಕಾಣಿಸಿಕೊಳ್ಳುವ ತೆನೆಯ ಕುತ್ತಿಗೆ ಭಾಗಕ್ಕೆ ಬೆಂಕಿ ರೋಗ ತಗುಲಿರುವುದು ಕಾರಣವಾಗಿದೆ. ರೋಗಕ್ಕೆ ತುತ್ತಾಗಿರುವ ಗದ್ದೆಯಲ್ಲಿ ಶೇ 90ರಷ್ಟು ಬೆಳೆ ಹಾನಿಯಾಗಿದೆ’ ಎಂದರು.

‘ಗದ್ದೆಯ ಮಾಲೀಕರೊಂದಿಗೆ ಬೀಜೋಪಚಾರದಿಂದ ಕೃಷಿಯಲ್ಲಿ ಬಳಸಿರುವ ಗೊಬ್ಬರ, ರಾಸಾಯನಿಕಗಳ ಬಗ್ಗೆ ಮಾಹಿತಿ ಪಡೆದಿ ದ್ದೇವೆ. ಅವರು ಔಷಧಿ, ಗೊಬ್ಬರಗಳನ್ನು ಸಮರ್ಪಕ ವಾಗಿ ನೀಡಿದ್ದಾರೆ. ತೆನೆ ಹೊರಡುವ ಸಮಯದಲ್ಲಿ ಮೋಡ ಕವಿದ ವಾತಾ ವರಣ ಉಂಟಾದ ಪರಿಣಾಮ ಬೆಂಕಿ ರೋಗ ಉಲ್ಬಣಿಸಲು ಕಾರಣವಾಗಿದೆ. ತಾಲ್ಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದು, ಬೆಂಕಿರೋಗ ನಿರೋಧಕವಿರುವ ತಳಿಗಳಲ್ಲಿ ಶೇ 10ಕ್ಕಿಂತಲೂ ಕಡಿಮೆ ಜೊಳ್ಳಾಗಿದ್ದು, ರೈತರು ಬೆಂಕಿ ರೋಗ ನಿರೋಧಕವಾಗಿರುವ ತಳಿಗಳನ್ನು ಬಳಸುವುದರಿಂದ ಇಂತಹ ಸಮಸ್ಯೆ ಗಳನ್ನು ತಡೆಯಬಹುದು’ ಎಂದರು.

ಕೃಷಿ ಅಧಿಕಾರಿ ಸುಮಾ ಮಾತನಾಡಿ, ‘ಕಡೆಮಾಡ್ಕಲ್, ಮೇಕನಗದ್ದೆ ಸೇರಿದಂತೆ ವಿವಿಧ ಭಾಗಗಳಿಗೆ ಕೃಷಿ ವಿಜ್ಞಾನಿಗಳೊಂದಿಗೆ ಭೇಟಿ ನೀಡಲಾಯಿತು. ಬೆಂಕಿ ರೋಗದಿಂದ ಬಡವನದಿಣ್ಣೆಯಲ್ಲಿ ಭತ್ತ ಜೊಳ್ಳಾಗಿದ್ದು, ಬೇರೆ ಭಾಗಗಳಲ್ಲಿ ಇಂತಹ ಸಮಸ್ಯೆಯಾಗಿಲ್ಲ’ ಎಂದರು.

ವಿಶೇಷ ಪರಿಹಾರಕ್ಕೆ ಮನವಿ: ಭತ್ತ ಜೊಳ್ಳಾಗಿರುವುದರಿಂದ ಬೆಳೆಯನ್ನು ಕಟಾವುಗೊಳಿಸಿ, ಒಕ್ಕಣೆ ಮಾಡಿದರೂ ಅದರ ಖರ್ಚು ಸಹ ಬರುವುದಿಲ್ಲ. ಕೃಷಿ ವಿಜ್ಞಾನ ಕೇಂದ್ರದಿಂದಲೇ ಬೀಜದ ಭತ್ತವನ್ನು ಖರೀದಿಸಿ ತಂದು ನಾಟಿ ಮಾಡಲಾಗಿತ್ತು. ಸಾಲ ಮಾಡಿ ಅಗಡಿ ನಿರ್ಮಾಣ, ನಾಟಿ, ಕಳೆ ಸೇರಿದಂತೆ ಗೊಬ್ಬರ, ಔಷಧಿಗೆ ಖರ್ಚು ಮಾಡಲಾಗಿತ್ತು. ಈಗ ನೋಡಿದರೆ ಗದ್ದೆಗೆ ಗದ್ದೆಯೇ ಜೊಳ್ಳು ಬಿದ್ದಿದೆ. ಜೊಳ್ಳಾಗಿರುವ ಗದ್ದೆಗಳನ್ನು ಸಮೀಕ್ಷೆ ನಡೆಸಿ, ವಿಶೇಷ ಪರಿಹಾರ ನೀಡಬೇಕು’ ಎಂದು ರೈತ ಬಡವನದಿಣ್ಣೆ ಲಕ್ಷ್ಮಣ ಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT