ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ ಬಂದ್: ಉತ್ತಮ ಪ್ರತಿಕ್ರಿಯೆ

ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲ: ಪ್ರತಿಭಟನಾ ಮೆರವಣಿಗೆ
Last Updated 2 ಜುಲೈ 2022, 4:32 IST
ಅಕ್ಷರ ಗಾತ್ರ

ಮೂಡಿಗೆರೆ: ರಾಜಸ್ಥಾನದ ಉದಯ ಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮೂಡಿಗೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರಿಗೆ ವ್ಯವಸ್ಥೆ ಎಂದಿನಂತೆ ಕಾರ್ಯನಿರ್ವಹಿಸಿದವು.

ಪಟ್ಟಣದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಟೈಲರ್ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರವಾಸಿ ಮಂದಿರದ ಬಳಿ ಸಮಾವೇಶಗೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಳೆಯ ನಡುವೆಯೇ ನಡೆದ ಮೆರವಣಿಗೆಯ ಬಳಿಕ ಅಡ್ಯಂತಾಯ ರಂಗಮಂದಿರದ ಬಳಿ ಬಹಿರಂಗ ಸಭೆಯನ್ನು ನಡೆಸಲಾಯಿತು.

ಬಿಜೆಪಿ ಮುಖಂಡ ಜಗದೀಶ್ ಹಳೆ ಮೂಡಿಗೆರೆ ಮಾತನಾಡಿ, ‘ಹಿಂದೂಗಳು ಜಾಗೃತರಾಗದಿದ್ದರೆ ದೇಶ ಉಳಿಯಲು ಸಾಧ್ಯವಿಲ್ಲ. ಕೆಲವು ಮುಸ್ಲಿಮರಿಗೆ ಈ ದೇಶ ಹಾಗೂ ಭಾರತೀಯ ಸಂವಿಧಾನ ಬೇಕಾಗಿಲ್ಲ. ಸಂವಿಧಾನದ ಮೇಲೆ ಗೌರವವಿದಿದ್ದರೆ ಹಿಜಾಬ್ ವಿಷಯದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುತ್ತಿರಲಿಲ್ಲ’ ಎಂದರು.

ಗ್ಯಾರೇಜ್ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಮಾತನಾಡಿ, ‘ಟೈಲರ್ ಹತ್ಯೆ ವಿಡಿಯೊವನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಒಂದು ವರ್ಗದ ಜನರನ್ನು ಹತ್ಯೆ ಮಾಡಿದಾಗ ಅವರ ಸಮುದಾಯದವರು ಮಾತ್ರ ಪ್ರತಿಭಟನೆ ನಡೆಸುವುದು ದುರಂತ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳೆಯಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಅನು ಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್, ವಿಶ್ವ ಹಿಂದೂ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಾಲುಮರ ಮಹೇಶ್, ಟೈಲರ್ ಸಂಘದ ಅಧ್ಯಕ್ಷ ಪೂರ್ಣೇಶ್, ರೈತ ಸಂಘದ ದಯಾಕರ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾದ ಹಳಸೆ ಶಿವಣ್ಣ, ಧನಿಕ್ ಕೋಡದಿಣ್ಣೆ, ವಿನೋದ್ ಕಣಚೂರು, ರಘುಸಕಲೇಶಪುರ, ಜಯಪಾಲ್, ಸಂಜಯ್ ಕೊಟ್ಟಿಗೆಹಾರ, ಆದರ್ಶ ತರುವೆ, ಕನ್ನಳ್ಳಿ ಭರತ್, ಶಿವಣ್ಣ ಬಿಳಗುಳ ಇದ್ದರು.

ಮಾತಿನ ಚಕಮಕಿ: ಬಂದ್ ಅಂಗವಾಗಿ ನಡೆದ ಪ್ರತಿಭಟನಾ ಮೆರವಣಿಗೆಯು ಎಂ.ಜಿ ರಸ್ತೆಯಲ್ಲಿ ಸಾಗುವುದನ್ನು ಪೊಲೀಸರು ಬೇಲೂರು ರಸ್ತೆಯಲ್ಲಿ ತಡೆದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಕಾರರು, ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡ್‌ ಗಳನ್ನು ತೆರವುಗೊಳಿಸಿ ಎಂ.ಜಿ ರಸ್ತೆಯಲ್ಲಿ ಮೆರವಣಿಗೆ ಸಾಗಿದರು.

4ರಂದು ಬಂದ್‌: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಜುಲೈ 4ರಂದು ಬಣಕಲ್ ಬಂದ್ ಮಾಡಲು ಟೈಲರ್‌ಗಳು, ವರ್ತಕರು, ಎಲ್ಲಾ ಮಾದರಿಯ ಅಂಗಡಿ ಮುಂಗಟ್ಟುಗಳ ಮಾಲೀಕರು ಹಾಗೂ ಆಟೊ ಚಾಲಕರ ಹಾಗೂ ಮಾಲೀಕರ ಸಂಘದವರು ತೀರ್ಮಾನಿಸಿದ್ದಾರೆ. ತುರ್ತು ಅಗತ್ಯವಿರುವ ಮಳಿಗೆ ಹೊರತು ಪಡಿಸಿ ಉಳಿದ ಅಂಗಡಿಗಳ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಬೇಕೆಂದು ಶ್ರಮಜೀವಿ ಆಟೊ ಸಂಘದ ಅಧ್ಯಕ್ಷ ರೊನಾಲ್ಡ್ ಡಿಸೋಜ ಮನವಿ ಮಾಡಿದ್ದಾರೆ.

ವಾರದ ಸಂತೆ ರದ್ದು: ಬಂದ್‌ನಿಂದಾಗಿ ವಾರದ ಸಂತೆಯೂ ರದ್ದಾಯಿತು. ಬಂದ್‌ನ ಮಾಹಿತಿ ತಿಳಿಯದೇ ಸಂತೆಗೆ ಬಂದ ವರ್ತಕರು ಬಂದ್ ಜಾರಿಯಲ್ಲಿರುವುದರಿಂದ ಬಹುತೇಕರು ಸ್ವಯಂಪ್ರೇರಿತರಾಗಿ ಹಿಂತಿರುಗಿದರು. ಸಂತೆಗಾಗಿ ಬಂದ ಗ್ರಾಹಕರು ಕೂಡ ಸಂತೆಯಿಲ್ಲದೇ ದಿನಸಿ, ತರಕಾರಿಗಳನ್ನು ಕೊಳ್ಳಲು ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು. ಸಂಜೆ 6ರ ಬಳಿಕ ಕೆಲವು ಅಂಗಡಿ ಮುಂಗಟ್ಟುಗಳು ತೆರೆದು ವಹಿವಾಟು ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT