ಚಿಕ್ಕಮಗಳೂರು: 16ರಂದು ಮೈತ್ರಿ ಪ್ರಚಾರಸಭೆ, ಮೆರವಣಿಗೆ

ಭಾನುವಾರ, ಏಪ್ರಿಲ್ 21, 2019
26 °C

ಚಿಕ್ಕಮಗಳೂರು: 16ರಂದು ಮೈತ್ರಿ ಪ್ರಚಾರಸಭೆ, ಮೆರವಣಿಗೆ

Published:
Updated:

ಚಿಕ್ಕಮಗಳೂರು: ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಪರ ಪ್ರಚಾರ ಸಭೆ, ಮೆರವಣಿಗೆಯನ್ನು ನಗರದಲ್ಲಿ ಇದೇ 16ರಂದು ಆಯೋಜಿಸಲಾಗಿದೆ ಎಂದು ಕಾಂಗ್ರೆಸ್‌–ಜೆಡಿಎಸ್‌ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಎಲ್‌.ವಿಜಯಕುಮಾರ್‌ ಇಲ್ಲಿ ಶುಕ್ರವಾರ ತಿಳಿಸಿದರು.

ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್‌ ವೃತ್ತದವರೆಗೆ ಮೆರವಣಿಗೆ, ಆಜಾದ್‌ ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ ಮೈತ್ರಿ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಒಗ್ಗಟ್ಟು ಅಭ್ಯರ್ಥಿಗೆ ಮತ್ತಷ್ಟು ಬಲ ತುಂಬಿದೆ. ಕ್ಷೇತ್ರದ ಎಲ್ಲ ಕಡೆ ಅವರಿಗೆ ಒಲವು ವ್ಯಕ್ತವಾಗುತ್ತಿದೆ’ ಎಂದು ಹೇಳಿದರು.

‘ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ. ಬಿಜೆಪಿಯವರೇ ಗೋ ಬ್ಯಾಕ್‌ ಶೋಭಾ ಅಭಿಯಾನ ಎದುರಿಸಿದ್ದರು. ಕ್ಷೇತ್ರಕ್ಕೆ ಯೋಜನೆಗಳನ್ನು ತರಲು ವಿಫಲರಾಗಿದ್ದಾರೆ’ ಎಂದು ದೂಷಿಸಿದರು.

‘ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳು, ಈಗಿನ ಸಮ್ಮಿಶ್ರ ಸರ್ಕಾರದ ಯೋಜನೆಗಳು, ಸಚಿವರಾಗಿದ್ದಾಗ ಮಾಡಿದ ಪ್ರಮೋದ್‌ ಮಾಡಿದ ಅಭಿವೃದ್ದಿ ಕೆಲಸಗಳು ಕೈಹಿಡಿಯಲಿವೆ. ಮತದಾರರು ಅವರನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಬೆಳೆಗಾರರ ಸಂಕಷ್ಟಗಳಿಗೆ ಶೋಭಾ ಅವರು ಸ್ಪಂದಿಸಿಲ್ಲ. ಒತ್ತುವರಿ, ಅರಣ್ಯವಾಸಿಗಳ ಸಮಸ್ಯೆ ನಿಟ್ಟಿನಲ್ಲಿ ಗಮನಹರಿಸಿಲ್ಲ ಎಂದು ದೂಷಿಸಿದರು.

‘ಮೈತ್ರಿ ಪಕ್ಷದವರೆಲ್ಲರೂ ಒಗ್ಗೂಡಿ ಪ್ರಮೋದ್‌ ಪರ ಪ್ರಚಾರದಲ್ಲಿ ತೊಡಗಿದ್ದೇವೆ. ಎಲ್ಲ ಕಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಎಂ.ರೇಣುಕಾರಾಧ್ಯ, ಜೆಡಿಎಸ್‌ನ ಹೊಲದಗದ್ದೆ ಗಿರೀಶ್, ಮಂಜೇಗೌಡ ಇದ್ದರು.

‘ಮಹೇಶ್‌ ಒಡೆಯರ್‌ ಬಿಜೆಪಿ ಸೇರ್ಪಡೆ; ನಾಯಕರೊಂದಿಗೆ ಚರ್ಚಿಸಿ ಕ್ರಮ’

‘ಜಿಲ್ಲಾ ಪಂಚಾಯಿತಿ ಸದಸ್ಯ (ಸಿಂಗಟಗೆರೆ ಕ್ಷೇತ್ರ) ಕಾಂಗ್ರೆಸ್‌ನ ಕೆ.ಆರ್‌.ಮಹೇಶ್‌ ಒಡೆಯರ್‌ ಅವರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿಲ್ಲ. ಪಕ್ಷದ ನಾಯಕರು, ಕಾನೂನು ಪರಿಣತರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌ ಉತ್ತರಿಸಿದರು.

‘ಮಹೇಶ್‌ ಅವರಿಗೆ ಈಚೆಗೆ ಬಿಜೆಪಿಯವರೊಂದಿಗೆ ಸಖ್ಯ ಇತ್ತು. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದೆವು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು

ಉಚ್ಛಾಟನೆಗೆ ನಿರ್ಧಾರ: ‘ಜಿಲ್ಲಾ ಪಂಚಾಯಿತಿ ಸದಸ್ಯೆ(ಯಳ್ಳಂಬೆಳಸೆ ಕ್ಷೇತ್ರ) ಜೆಡಿಎಸ್‌ನ ಕಾವೇರಿಲಕ್ಕಪ್ಪ ಅವರು ಬಿಜೆಪಿ ಸೇರಿರುವುದು ಗೊತ್ತಾಗಿದೆ. ಅವರನ್ನು ಪಕ್ಷದಿಂದ ಉಚ್ಛಾಟಿಸುತ್ತೇವೆ. ಶಿಸ್ತುಸಮಿತಿ ಕ್ರಮ ಕೈಗೊಳ್ಳಲಿದೆ’ ಎಂದು ಜೆಡಿಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !