ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ಪರ್ಯಾಯ ಸರ್ಕಾರ!

ಸಾರ್ವಜನಿಕ ಹಣ ಪೋಲಾಗುವುದರ ರಕ್ಷಣೆಗೆ ಯತ್ನ–ಮುಖಂಡರ ಹೇಳಿಕೆ
Last Updated 17 ಜೂನ್ 2018, 12:30 IST
ಅಕ್ಷರ ಗಾತ್ರ

ಚಾಮರಾನಗರ: ‘ಸಾರ್ವಜನಿಕರ ಹಣ ಪೋಲಾಗುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯ ಆಡಳಿತ ಯಂತ್ರದ ಮೇಲೆ ಹದ್ದಿನ ಕಣ್ಣಿಡಲು ರಾಜ್ಯ ಸರ್ಕಾರಕ್ಕೆ ಪರ್ಯಾಯವಾಗಿ ಮತ್ತೊಂದು ಸರ್ಕಾರವನ್ನು ರಚಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‌ ಬಣ) ನಿರ್ಧರಿಸಿದೆ’ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಾ. ಗುರುಪ್ರಸಾದ್‌  ಶನಿವಾರ ಇಲ್ಲಿ ಹೇಳಿದರು.

ಪರ್ಯಾಯ ಸರ್ಕಾರದ ರೂಪುರೇಷೆಗಳನ್ನೂ ಅವರು ನೀಡಿದರು.

‘ರಾಜ್ಯ ಸಚಿವ ಸಂಪುಟದಲ್ಲಿ 36 ಸಚಿವರು ಇರುವಂತೆಯೇ, ಪರ್ಯಾಯ ಸರ್ಕಾರದಲ್ಲೂ 36 ಮಂದಿಯ ತಂಡ ಇರಲಿದೆ. ಅಲ್ಲಿನ ಪ್ರತಿಯೊಂದು ಖಾತೆಗೂ ಇಲ್ಲಿ ಪ್ರತಿನಿಧಿ ಇರಲಿದ್ದಾರೆ. ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಈ ತಂಡಗಳನ್ನು ರಚಿಸಲಾಗುವುದು’ ಎಂದರು.

‘ಬಜೆಟ್‌ ಹಣ ಎಷ್ಟು ಬಿಡುಗಡೆ ಆಗಿದೆ? ಎಲ್ಲಿಗೆ ಹಂಚಿಕೆ ಆಗಿದೆ? ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಯೇ ಎಂಬುದರ ಮೇಲೆ ಪರ್ಯಾಯ ಸರ್ಕಾರದವರು ನಿಗಾ ಇಡಲಿದ್ದಾರೆ’ ಎಂದು ವಿವರಿಸಿದರು.

‘ಅನುದಾನ ಬಿಡುಗಡೆ, ಹಂಚಿಕೆಯ ಬಗ್ಗೆ ರಾಜ್ಯ ಮಟ್ಟದ ತಂಡ ದತ್ತಾಂಶ ಸಂಗ್ರಹಿಸಿ ಜಿಲ್ಲಾ ಮಟ್ಟದ ತಂಡಕ್ಕೆ ಕಳುಹಿಸಲಿದೆ. ಆ ತಂಡ, ಜಿಲ್ಲಾ ಮಟ್ಟದ ಮಾಹಿತಿಯನ್ನು ಕಲೆ ಹಾಕಿ ತಾಲ್ಲೂಕು ಮಟ್ಟಕ್ಕೆ ಕಳುಹಿಸಲಿದೆ’ ಎಂದರು.

ಪ್ರತಿ ತಂಡವೂ ತಮ್ಮ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನದ ಪ್ರಗತಿಯ ಮೇಲೆ ನಿಗಾ ಇಟ್ಟು, ತಳ ಮಟ್ಟದಲ್ಲಿ ಸಾರ್ವಜನಿಕರೊಂದಿಗೆ ಮಾಹಿತಿಗಳನ್ನು ಹಂಚುವುದರ ಜೊತೆಗೆ, ತಮ್ಮ ಮೇಲಿನ ತಂಡಕ್ಕೂ ರವಾನಿಸಲಿದೆ ಎಂದರು.

ಯಾರೂ ಬೇಕಾದರೂ ಸೇರಬಹುದು: ‘ಜಿಲ್ಲೆಯಲ್ಲಿ  ನಾಲ್ಕು ತಾಲ್ಲೂಕುಗಳಲ್ಲಿ (ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು) ತಲಾ 36 ಜನರ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ. ನಮಗೆ 144 ಜನರು ಬೇಕು. ಜನರ ಸೇವೆ
ಮಾಡಲು ಆಸಕ್ತಿ ಇರುವವರು ಯಾರೂ ಬೇಕಾದರೂ ಸೇರಬಹುದು. ಇಲ್ಲಿ ವೇತನ ಇರುವುದಿಲ್ಲ’ಎಂದು ಅವರು ಸ್ಪಷ್ಟಪಡಿಸಿದರು.

ತರಬೇತಿ: ಪರ್ಯಾಯ ಸರ್ಕಾರವನ್ನು ಸೇರುವವರಿಗೆ, ಹೊಸ ವ್ಯವಸ್ಥೆಯ ರೂಪುರೇಷೆ ಹಾಗೂ ಸರ್ಕಾರದಿಂದ ಮಾಹಿತಿಗಳನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಬೆಂಗಳೂರಿನಲ್ಲಿ ಒಂದು ವಾರದ ಉಚಿತ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಪಟ್ಟಣದಲ್ಲಿ ನಾಳೆ ಸಭೆ

ಪಟ್ಟಣದ ಚಾಮರಾಜೇಶ್ವರ ದೇವಾಲಯದ ಬಳಿಯ ಉದ್ಯಾನದಲ್ಲಿ ಸೋಮವಾರ ಈ ವಿಚಾರವಾಗಿ ಚರ್ಚಿಸಲು ರೈತ ಸಂಘ ಸೋಮವಾರ ಬಹಿರಂಗ ಸಭೆ ಹಮ್ಮಿಕೊಂಡಿದೆ. ಪರ್ಯಾಯ ಸರ್ಕಾರವನ್ನು ಸೇರಲು ಬಯಸುವವರು ಅಲ್ಲಿ ಇದರ ಬಗ್ಗೆ ವಿವರ ಪಡೆದು ಸೇರಬಹುದು ಎಂದು ಗುರುಪ್ರಸಾದ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT