ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಭದ್ರಾಹಿನ್ನೀರು ಪ್ರದೇಶದಲ್ಲಿ ಪ್ರಸ್ತುತ ನಾಟಿ ಮೀನು ಸಂತತಿ ಕುಸಿತವಾಗಿದ್ದು, ಜಿಲೇಬಿ ಮೀನಿನ ಸಂತತಿ ಹೆಚ್ಚಾಗಿದ್ದು ಮೀನುಗಾರರ ಜೀವನದ ಮೇಲೆ ಬರೆ ಬೀಳುವಂತಾಗಿದೆ.
ಭದ್ರಾಹಿನ್ನೀರಿನಲ್ಲಿ ದೊರೆಯುವ ಮೀನುಗಳು ತಿನ್ನಲು ಬಹಳ ರುಚಿಕರ ಆಗಿರುವುದರಿಂದ ಸ್ಥಳೀಯವಾಗಿ ಹಾಗೂ ಇತರೆ ಕಡೆಯಲ್ಲಿಯೂ ಭಾರಿ ಬೇಡಿಕೆಯಿದೆ. ಇಲ್ಲಿ ಕಾಟ್ಲ, ರೂಹು, ಕಾಮನ್ ಕಾರ್ಪ್, ಮೃಘಾಲ, ಗೋಜಲೆ, ಗಿರ್ಲ್, ಸುರಗಿ, ಪಟ್ಟೆಗಾರ, ಅವ್ಲು ಜಾತಿಯ ಮೀನುಗಳು ಲಭ್ಯವಿದ್ದು, ದಶಕಗಳ ಹಿಂದೆ ಮತ್ಸ್ಯ ಸಮೃದ್ಧಿಯೇ ನೆಲೆಸಿತ್ತು. ಆದರೆ, ಈ ಹಿಂದಿನ ದಿನಕ್ಕಿಂತಲೂ ಶೇ 80ರಷ್ಟು ಮತ್ಸ್ಯ ಸಂತತಿ ಕುಸಿದಿದೆ ಎಂಬುದು ಮೀನುಗಾರರ ಅಭಿಪ್ರಾಯ.
ಮಳೆಗಾಲದ ಸಂದರ್ಭದಲ್ಲಿ ರುಚಿಕರವಾದ ಮೀನುಗಳ ಶಿಕಾರಿಗಿಂತಲೂ ಮುಳ್ಳು ಅಧಿಕವಾಗಿರುವ ಜಿಲೇಬಿ ಮೀನುಗಳೇ ಹೆಚ್ಚಾಗಿ ಬಲೆಗೆ ಬೀಳುತ್ತಿವೆ. ಜಿಲೇಬಿ ಮೀನುಗಳಲ್ಲಿ ಮುಳ್ಳು ಹೆಚ್ಚಾಗಿರುವುದರಿಂದ ಮೊಸಳೆ ಮತ್ತಿತರ ಜಲಚರಗಳು ಇದನ್ನು ತಿನ್ನದೆ ಇರುವುದರಿಂದ ಹಾಗೂ ವರ್ಷಕ್ಕೆ ಮೂರು ಬಾರಿ ಸಂತಾನೋತ್ಪತ್ತಿ ಮಾಡುವ ಜಿಲೇಬಿ ಮೀನುಗಳ ಸಂತತಿ ಅಧಿಕವಾಗಿದೆ ಎಂಬುದು ಮೀನುಗಾರರ ಅಭಿಪ್ರಾಯ.
ಕಾಟ್ಲಾ ಮತ್ತು ಜಿಲೇಬಿ ಮೀನು ಮರಿಗಳು ಒಂದೇ ರೀತಿ ಇರುವುದರಿಂದ ಮೀನುಗಾರಿಕೆ ಇಲಾಖೆಯಿಂದ ಭದ್ರಾ ಹಿನ್ನೀರಿಗೆ ಮೀನು ಮರಿಗಳನ್ನು ಬಿಡುವಾಗ ಕಾಟ್ಲಾ ಮೀನಿಗೆ ಬದಲಾಗಿ ಜಿಲೇಬಿ ಮೀನಿನ ಮರಿಗಳನ್ನು ಬಿಟ್ಟಿರುವುದರಿಂದ ಅವುಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಮೀನುಗಾರರ ಆರೋಪ.
ಜಿಲೇಬಿ ಮೀನುಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ ಮೀನುಗಾರರಿಗೆ, ಮೀನು ಮಾರಾಟಗಾರರಿಗೆ ನಷ್ಟ ಉಂಟಾಗುತ್ತಿದೆ ಎಂದು ಮೀನು ಮಾರಾಟಗಾರರಾದ ಫೈರೋಜ್, ಅಮ್ಜದ್ ತಿಳಿಸಿದರು.
ಸರ್ಕಾರ ಮಳೆಗಾಲದಲ್ಲಿ ಮೀನುಗಾರರಿಗೆ ಪರ್ಯಾಯ ವೃತ್ತಿ ಒದಗಿಸಿ ಮೀನುಗಾರಿಕೆ ನಿಷೇಧ ಮಾಡದಿರುವುದರಿಂದ ಹಾಗೂ ಚುನಾಯಿತ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸದಿರುವುದರಿಂದ ಮತ್ಸ್ಯ ಸಂತತಿ ಕ್ಷೀಣಿಸುತ್ತಿದೆ ಎಂಬುದು ಮತ್ಸ್ಯ ಪ್ರಿಯರ ಅಭಿಪ್ರಾಯ.
ಜಿಲೇಬಿ ಮೀನು ಮರಿಗಳನ್ನು ಬಿಟ್ಟಿಲ್ಲ ಮೀನುಗಾರರು ಆರೋಪಿಸಿರುವಂತೆ ಜಿಲೇಬಿ ಮೀನು ಮರಿಗಳನ್ನು ಬಿಟ್ಟಿಲ್ಲ. ಮಳೆಗಾಲ ಮೀನುಗಳ ವಂಶಾಭಿವೃದ್ಧಿಯ ಸಮಯವಾಗಿರುವುದರಿಂದ ಈ ಸಮಯದಲ್ಲಿ ಇತರೆ ಜಾತಿಯ ದೊಡ್ಡ ಮೀನುಗಳನ್ನು ಶಿಕಾರಿ ಮಾಡುವುದರಿಂದ ಸಂತತಿ ಬೆಳೆಯಲು ಅವಕಾಶವಾಗುತ್ತಿಲ್ಲ. ಒಳನಾಡು ಮೀನುಗಾರರಿಗೆ ಮಳೆಗಾಲದಲ್ಲಿ ಬೇರೆ ವೃತ್ತಿ ಇಲ್ಲದಿರುವುದರಿಂದ ಹಾಗೂ ಜಲಾಶಯದ ವ್ಯಾಪ್ತಿ ವಿಶಾಲ ಆಗಿರುವುದರಿಂದ ಹಾಗೂ ಅನಿವಾರ್ಯವಾಗಿ ಮೀನುಗಾರಿಕೆ ನಿಷೇಧ ಮಾಡಲು ಸಾಧ್ಯ ಆಗದಿರುವುದರಿಂದ ಮೀನು ಸಂತತಿ ಕಡಿಮೆಯಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜೆ.ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.