ಮಂಗಳವಾರ, ನವೆಂಬರ್ 12, 2019
28 °C

‘ಶೋಷಣೆ ವಿರುದ್ಧ ಹೋರಾಡಿದ ದಾರ್ಶನಿಕ’ ಬ್ರಹ್ಮಶ್ರೀ ನಾರಾಯಣಗುರು

Published:
Updated:
Prajavani

ಚಿಕ್ಕಮಗಳೂರು: ‘ಬ್ರಹ್ಮಶ್ರೀ ನಾರಾಯಣಗುರು ಅವರು ಶೋಷಣೆ ವಿರುದ್ಧ ಹೋರಾಡಿದರು. ವಿಚಾರಧಾರೆಗಳ ಮೂಲಕ ಗಮನ ಸೆಳೆದು ಸಮಾಜ ಸುಧಾರಣೆಗೆ ಶ್ರಮಿಸಿದರು’ ಎಂದು ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್‌.ಭೋಜೇಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದು ‘ಮಲಯಾಳಂ, ತಮಿಳು ಅಧ್ಯಯನ ಮಾಡಿ ನಾಡಿನಾದ್ಯಂತ ಸಂಚಾರ ಮಾಡಿದರು. ಜಾತೀಯತೆ, ಮೇಲುಕೀಳು, ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಶ್ರಮಿಸಿದರು. ಆದರ್ಶಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದರು. ಅವರ ಆದರ್ಶ, ವಿಚಾರಧಾರೆಗಳನ್ನು ಪಾಲಿಸಬೇಕು’ ಎಂದರು.

‘ನಾರಾಯಣ ಗುರು ಅವರು ‘ಅರಿವು’ ಕೃತಿ ಬರೆದಿದ್ದಾರೆ. ಅದರಲ್ಲಿ ಅಂದಿನ ಶೋಚನೀಯ ಸ್ಥಿತಿಯನ್ನು ದಾಖಲಿಸಿದ್ದಾರೆ. ಕೃತಿಯನ್ನು ಎಲ್ಲರೂ ಓದಬೇಕು’ ಎಂದು ಹೇಳಿದರು.

‘ದೇಗುಲ ಪ್ರವೇಶಕ್ಕೆ ಒಂದು ವರ್ಗಕ್ಕೆ ಮಾತ್ರ ಅವಕಾಶ ಇತ್ತು. ಇತರರ ಹೋಗುವಂತಿರಲಿಲ್ಲ. ದೇವರು ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತ ಅಲ್ಲ ಎಂದು ನಾರಾಯಣಗುರು ಪ್ರತಿಪಾದಿಸಿದರು. ಈಶ್ವರ, ಸುಬ್ರಹ್ಮಣ್ಯ ದೇಗುಲಗಳನ್ನು ನಿರ್ಮಿಸಿ ಎಲ್ಲ ವರ್ಗದವರಿಗೂ ಪ್ರವೇಶಾವಕಾಶ ಕಲ್ಪಿಸಿದರು. ಸುಮಾರು 79 ದೇಗುಲಗಳನ್ನು ನಿರ್ಮಿಸಿದ ಕೀರ್ತಿ ಅವರಿಗಿದೆ. ಕ್ರಾಂತಿ ಇಲ್ಲದೆ ಸಾಧನೆ ಮಾಡಿದರು’ ಎಂದು ಹೇಳಿದರು.

‘ಹಿಂದುಳಿದ ವರ್ಗದ ಮಹಿಳೆಯರು ಸೆರಗು ತೆಗೆದು ನಿಂತು ಗೌರವ ನೀಡಬೇಕು ಎಂಬ ಕಟ್ಟುಪಾಡು ಇತ್ತು. ಈ ಅಮಾನವೀಯ ಪದ್ಧತಿ ತೊಡೆದುಹಾಕಲು ಹೋರಾಡಿದರು. ಬಹಳಷ್ಟು ಕಷ್ಟಗಳನ್ನು ಅನುಭವಿಸಿದರು’ ಎಂದರು.

‘ನಾರಾಯಣಗುರು ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಬೇಕು. ಅಂಥ ಮಹನೀಯರು ಮತ್ತೊಮ್ಮೆ ಹುಟ್ಟಿ ಬರಬೇಕು’ ಎಂದು ಆಶಿಸಿದರು.

ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ‘ನಾರಾಯಣ ಗುರು ಅವರು ಸಂಸ್ಕೃತದಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದರು. ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿದ್ದಾರೆ. 45ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ’ ಎಂದು ಹೇಳಿದರು.

‘ಜಾತೀಯತೆ, ಅಸ್ಪೃಶ್ಯತೆ, ಶೋಷಣೆಗಳನ್ನು ತೊಲಗಿಸಲು ಹೋರಾಡಿದರು. ದೇಶ ಸಂಚಾರ ಮಾಡಿದರು. ಒಂದೇ ಜಾತಿ, ಒಂದೇ ಮತ, ದೇವರೊಬ್ಬ ಎಂಬ ಸಂದೇಶ ಸಾರಿದರು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್‌ ಮಾತನಾಡಿ, ನಾರಾಯಣಗುರು ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಸರಳವಾಗಿ ಆಚರಿಸಲಾಗಿದೆ. ನೆರೆಹಾವಳಿ ಸಂತ್ರಸ್ತರಿಗೆ ನೆರುವ ಕಲ್ಪಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು’ ಎಂದು ತಿಳಿಸಿದರು.

ಮುಖಂಡರಾದ ಕೆ.ನಾರಾಯಣ್‌, ಕೇಶವ, ಗುಣಶೇಖರ್‌, ಕೃಷ್ಣ, ಶ್ರೀನಿವಾಸ್‌, ಎಲ್‌.ಸಿ.ಚಂದ್ರು, ಎಂ.ಕೆ.ರಮೇಶ್‌, ಎಂ.ರಾಜು, ರಾಜೇಶ್‌, ರವಿ ಇದ್ದರು.

ಪ್ರತಿಕ್ರಿಯಿಸಿ (+)