ಶನಿವಾರ, ಡಿಸೆಂಬರ್ 3, 2022
20 °C
ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಸಮಸ್ಯೆ ಬಿಚ್ಚಿಟ್ಟ ಗ್ರಾಮಸ್ಥರು

ಕೊಪ್ಪದ ಗಡಿ ಭಾಗದ ಮನೆಗಳಲ್ಲಿ ವಿದ್ಯುತ್ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ‘ತಾಲ್ಲೂಕಿನ ಗಡಿ ಭಾಗವಾದ ಮಲ್ನಾಡ್ ಗ್ರಾಮದ ಮುಂಡೋಡಿಯ 8 ಮನೆಗಳಿಗೆ, ಕಚಿಗೆಯಲ್ಲಿನ ಕೆಲವು ಮನೆಗಳಿಗೆ ಅರಣ್ಯ ಇಲಾಖೆಯ ತಕರಾರಿನಿಂದಾಗಿ ಇದುವರೆಗೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ’ ಎಂದು ಮೇಗೂರು ಗ್ರಾಮದ ಮಣಿಶೇಖರ್ ಸಮಸ್ಯೆ ಬಿಚ್ಚಿಟ್ಟರು.

ಪುರಭವನದಲ್ಲಿ ಮಂಗಳವಾರ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

‘ಮುಂಡೋಡಿ, ಕಚಿಗೆ ಗ್ರಾಮಗಳು ಶೃಂಗೇರಿ ತಾಲ್ಲೂಕಿಗೆ ಸೇರುತ್ತದೆ. ಕೊಪ್ಪ ತಾಲ್ಲೂಕಿಗೆ ಸೇರಿದ ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ಆದರೆ, ಅಲ್ಲಿಯೇ ಪಕ್ಕದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಬೆಳಕು ಯೋಜನೆಯ ಮೀಟರ್ ಅನ್ನು ಯಾರದೋ ಮನೆಯಲ್ಲಿ ಇಟ್ಟು ಹೋಗಿದ್ದಾರೆ’ ಎಂದರು.

ನುಗ್ಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಆರ್.ಜಗದೀಶ್ ಮಾತನಾಡಿ, ‘ಕೊರಡಿಹಿತ್ಲುವಿನ ಲಿಂಕ್ ಲೈನ್ ಕಂಬಗಳನ್ನು ಚರಂಡಿಗೆ ಹಾಕಲಾಗಿದೆ. ಹಲವು ಕಡೆಗಳಲ್ಲಿ ಲೈನ್ ಹಾದು ಹೋದ ಕೆಳ ಭಾಗದಲ್ಲಿ ಸೇಫ್ಟಿ ಗಾರ್ಡ್ ಅಳವಡಿಸಿಲ್ಲ. ಬಡಿಗೆ ಕಾಲೋನಿ ವಿದ್ಯುತ್ ಪರಿವರ್ತಕ ಬೇರೆಡೆ ಹಾಕಿದ್ದಾರೆ’ ಎಂದು ಆಕ್ಷೇಪಿಸಿದರು.

ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ಮಾತನಾಡಿ, ‘ಅಡಿಕೆ ಸುಲಿಯು ಯಂತ್ರಕ್ಕೆ ಪ್ರತ್ಯೇಕ ಮೀಟರ್ ಅಳವಡಿಸಲು ಹೇಳುವುದು ಸರಿಯಲ್ಲ’ ಎಂದರು.

‘ಸಿದ್ದರಮಠ ಕಡೆಗೆ ಸಂಪರ್ಕದ ಲೈನ್ ಕಾಡಿನ ಮಧ್ಯೆ ಹಾದು ಹೋಗಿದೆ. ರಸ್ತೆ ಬದಿಯಲ್ಲಿ ಕಂಬ ಹಾಕಿ ಸಂಪರ್ಕ ಒದಗಿಸಬೇಕು’ ಎಂದು ಮುಖಂಡರಾದ ಕೆಸವೆ ರಾಮಪ್ಪ, ಎಚ್.ಎಸ್.ಕಳಸಪ್ಪ ಒತ್ತಾಯಿಸಿದರು.

‘ಅರ್ಧ ಎಚ್.ಪಿ, ಒಂದು ಎಚ್.ಪಿ ಪಂಪ್ ಅಳವಡಿಕೆಗೆ ಸಿಂಗಲ್ ಫೇಸ್ ಸಾಕಾಗುತ್ತದೆ. ಆದರೆ, ಮೆಸ್ಕಾಂ ತ್ರೀಫೇಸ್ ಸಂಪರ್ಕ ಮಾಡಿಕೊಳ್ಳಬೇಕು ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಹಿರೇಕೊಡಿಗೆಯ ಎಚ್.ಕೆ.ವಿಶ್ವ ಹೇಳಿದರು.

ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಶ್, ಎಇಇ ಅರುಣ್ ಭಟ್, ಎಇಇ ಮಾರ್ತಾಂಡಪ್ಪ ಆರ್.ಕರಿಯಪ್ಪನವರ್, ಲೆಕ್ಕಾಧಿಕಾರಿ ರಮೇಶ್, ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್ ಸುಧೀರ್ ಪಟೇಲ್, ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಕೆ.ನಾಗರಾಜ್, ಕೊಪ್ಪದ ಸಹಾಯಕ ಎಂಜಿನಿಯರ್ ಶಶಿಕಾಂತ್ ರಾಥೋಡ್, ಜಯಪುರ ಸಹಾಯಕ ಎಂಜಿನಿಯರ್ ಪ್ರಶಾಂತ್ ಕುಮಾರ್, ಹರಿಹರಪುರದ ಕಿರಿಯ ಎಂಜಿನಿಯರ್ ಟಿ.ಸೋಮಶೇಖರ್,  ಮುಖಂಡ ಫ್ರಾನ್ಸಿಸ್ ಕಾರ್ಡೋಜ, ರಶೀದ್, ವಿಜಯಕುಮಾರ್, ಮೈತ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು