ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪಿಎಸ್‌ ಇಲ್ಲದಿದ್ದರೆ ಗುತ್ತಿಗೆ ರದ್ದುಪಡಿಸಲು ಸೂಚನೆ

ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆ ಸಭೆ
Last Updated 1 ಜೂನ್ 2019, 16:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಾಹನದಲ್ಲಿ ಜಿಪಿಎಸ್‌(ಭೌಗೋಳಿಕ ಸೂಚಿ) ವ್ಯವಸ್ಥೆ ಅಳವಡಿಸಿಲ್ಲದಿದ್ದರೆ, ನೀರು ಪೂರೈಕೆ ಪ್ರಮಾಣದಲ್ಲಿ ವ್ಯತ್ಯಯ ಕಂಡುಬಂದರೆ ಟ್ಯಾಂಕರ್‌ ಗುತ್ತಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಟ್ಯಾಂಕರ್‌ ವಾಹನಕ್ಕೆ ಜಿಪಿಎಸ್‌ ಅಳವಡಿಸಲಾಗಿದೆಯೇ ಎಂಬುದನ್ನು ಪೊಲೀಸರು ನಿಗಾವಹಿಸಿ ತಪಾಸಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಅವರಿಗೆ ಸೂಚಿಸಿದರು.

ಎಲ್ಲಿಂದ ನೀರು ತರಲಾಗುತ್ತಿದೆ, ಸೂಚಿತ ನಿಗದಿ ಪ್ರಮಾಣದಲ್ಲಿ ಟ್ಯಾಂಕರನಲ್ಲಿ ನೀರು ಪೂರೈಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಧಿಕಾರಿಗಳು ಹಠಾತ್ತಾಗಿ ಪೂರೈಕೆ ಸ್ಥಳಕ್ಕೆ ಭೇಟಿ ನೀಡಿ ಈ ಅಂಶಗಳನ್ನು ಖಾತರಿಪಡಿಸಿಕೊಳ್ಳಬೇಕು. ಲೋಪಗಳು ಕಂಡುಬಂದರೆ ಗುತ್ತಿಗೆ ರದ್ದುಪಡಿಸಲು ಕ್ರಮ ವಹಿಸಬೇಕು ಎಂದರು.

‘ಇಡೀ ಜಿಲ್ಲೆಗೆ ಕೇಂದ್ರಿತ ಟೆಂಡರ್‌ ಆಹ್ವಾನಿಸಿ ಗುತ್ತಿಗೆ ವಹಿಸಿರುವುದು ಸರಿಯಲ್ಲ. ಟೆಂಡರ್‌ ಆಹ್ವಾನಕ್ಕೆ ಯಾವ ಮಾನದಂಡ ಅನುಸರಿಸಿದ್ದಾರೆ ಎಂಬುದು ಗೊತ್ತಿಲ್ಲ. ಬಿಡ್‌ನಲ್ಲಿ ಭಾಗವಹಿಸಿದ್ದ ಏಕ ವ್ಯಕ್ತಿಗೇ ಗುತ್ತಿಗೆ ನೀಡಲಾಗಿದೆ. ಅಧಿಕಾರಿಗಳ ಈ ನಿರ್ಧಾರದಿಂದ ಬಹಳ ತೊಂದರೆಯಾಗಿದೆ’ ಎಂದು ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್‌ ಕಿಡಿಕಾರಿದರು.

‘ಟ್ಯಾಂಕರ್‌ ಟೆಂಡರ್‌ ಒಪ್ಪಂದ ಆಗಿದ್ದು ಯಾವಾಗ, ನಿರ್ವಹಣೆ ಹೇಗೆ, ಮೇಲುಸ್ತುವಾರಿ ಮಾಡುವವರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಶಾಸಕ ಸಿ.ಟಿ.ರವಿ ದೂಷಿಸಿದರು.

‘ಟ್ಯಾಂಕರ್‌ ನೀರಿಗೆ ನಿಗದಿಪಡಿಸಿರುವ ದರ ಜಾಸ್ತಿಯಾಗಿದೆ. ದರ ನಿಗದಿಯಲ್ಲಿ ಅಧಿಕಾರಿಗಳು ಎಡವಿದ್ದಾರೆ. ಇದು ಸರ್ಕಾರಕ್ಕೆ ಹೊರೆ. ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಜವಾಬ್ದಾರಿಯನ್ನು ಹಿಂದೆ ಇದ್ದಂತೆ ಗ್ರಾಮ ಪಂಚಾಯಿತಿಗಳಿಗೆ ವಹಿಸುವುದೇ ಒಳಿತು’ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌.ಧರ್ಮೇಗೌಡ ಸಲಹೆ ನೀಡಿದರು.

‘ಬರಪೀಡಿತ ಪ್ರದೇಶಗಳ ಹಳ್ಳಿಗಳ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು. ಗ್ರಾಮಗಳ ಕೆರೆಗಳನ್ನು ತುಂಬಿಸುವ ಯೋಜನೆಗಳ ಕಾರ್ಯಗತಕ್ಕೆ ಕ್ರಮ ವಹಿಸಬೇಕು. ಜಲಧಾರೆ ಯೋಜನೆಯಲ್ಲಿ ಈ ಹಳ್ಳಿಗಳನ್ನು ಸೇರಿಸಿ ಕ್ರಮ ವಹಿಸಬೇಕು’ ಎಂದು ಬೆಳ್ಳಿ ಪ್ರಕಾಶ್‌ ಒತ್ತಾಯಿಸಿದರು.

‘ಕರಗಡ’: ಜೂ.15ರವರೆಗೆ ಕಾಲಾವಕಾಶ
ಕರಗಡ ಕಾಮಗಾರಿಯನ್ನು ತ್ವರಿತಗೊಳಿಸಿ ಇದೇ 15ರೊಳಗೆ ಮುಗಿಸುವಂತೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗೆ ಸಚಿವ ಜಾರ್ಜ್‌ ಸೂಚನೆ ನೀಡಿದರು.

ಕಾಲುವೆ ಪಾತ್ರದ ಕೆಲವರು ಹೆಚ್ಚು ಪರಿಹಾರ ಕೋರಿ ಕೋರ್ಟ್‌ ನಿಂದ ತಡೆ ತಂದಿದ್ದಾರೆ. ಇದೇ 3ರಂದು ತಡೆಯಾಜ್ಞೆ ತೆರವಾಗುವ ಭರವಸೆ ಇದೆ. ಇದೇ 15ರೊಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಎಂಜಿನಿಯರ್‌ ಸಭೆಗೆ ತಿಳಿಸಿದರು.

ಕಾಮಗಾರಿ ನಡೆಯುತ್ತಿರುವ ಭಾಗಕ್ಕೂ ಕೋರ್ಟ್‌ ತಡೆಯಾಜ್ಞೆ ನೀಡಿರುವ ಭಾಗಕ್ಕೂ ಸಂಬಂಧ ಇಲ್ಲ. ವಿಳಂಬಕ್ಕೆ ತಡೆಯಾಜ್ಞೆ ಸಬೂಬು ನೀಡುವುದರಲ್ಲಿ ಹುರುಳಿಲ್ಲ. ಈಗ ನಡೆಸುತ್ತಿರುವುದು ‘ಕಂಟ್ರೊಲ್‌ ಬ್ಲಾಸ್ಟ್‌’. ಅದರಿಂದ ಕಾಲುವೆ ಪಕ್ಕದ ಮನೆಗಳಿಗೆ ಹಾನಿಯಾಗುತ್ತದೆ ಎಂಬುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಹೆಚ್ಚು ಪರಿಹಾರ ನೀಡಬೇಕಾದರೆ ಅದನ್ನು ಗುತ್ತಿಗೆದಾರ ನಿರ್ವಹಿಸಬೇಕು. ಹೀಗಾಗಿ, ಸಬೂಬು ನೀಡದೆ ಕಾಮಗಾರಿ ಮುಂದುವರಿಸಬೇಕು’ ಎಂದು ಶಾಸಕ ಸಿ.ಟಿ.ರವಿ ಪಟ್ಟುಹಿಡಿದರು.

ಮರ್ಲೆತಿಮ್ಮನಹಳ್ಳಿ: ವೈರಾಣುಜ್ವರ ಬಾಧೆ ಪರಿಹಾರಕ್ಕೆ ಸೂಚನೆ
‘ಮರ್ಲೆತಿಮ್ಮನಹಳ್ಳಿಯಲ್ಲಿ ವೈರಾಣು ಜ್ವರಬಾಧೆ, ಕೈಕಾಲು ಊತ ಮತ್ತು ನೋವಿನಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗ್ರಾಮದ ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳ ದೂಳಿನಿಂದಾಗಿ ಸಮಸ್ಯೆ ತಲೆದೋರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ತಕ್ಷಣವೇ ಸಮಸ್ಯೆ ಪರಿಹರಿಸಬೇಕು’ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಗಮನ ಸೆಳೆದರು.

‘ರಾಸಾಯನಿಕ ಬಳಸಿ ಬಂಡೆ ಸ್ಫೋಟಿಸುವುದೇ ಇದಕ್ಕೆಲ್ಲ ಕಾರಣ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ವೈರಾಣು ಜ್ವರ ಮರುಕಳಿಸುತ್ತಿದೆ. ಸ್ಫೋಟಕ್ಕೆ ಇಲ್ಲಿ ಬಳಸುವ ರಾಸಾಯನಿಕಗಳನ್ನು ಪರೀಕ್ಷೆ ಮಾಡಿಸಬೇಕು’ ಎಂದು ಸಿ.ಟಿ ಗಮನಸೆಳೆದರು.

‘ತಜ್ಞರನ್ನು ಕರೆಸಿ ಸ್ಥಳ ಪರಿಶೀಲನೆ ಮಾಡಿಸಬೇಕು. ಸಮಸ್ಯೆ ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ಸಚಿವ ಜಾರ್ಜ್‌ ಸೂಚಿಸಿದರು.

‘ಗ್ರಾಮದಲ್ಲಿ ಒಬ್ಬರಿಗೆ ಡೆಂಗಿಜ್ವರ ಪತ್ತೆಯಾಗಿದೆ. ಮಲೇರಿಯಾ, ಚಿಕುನ್‌ಗುನ್ಯಾ ಈ ಯಾವ ಪ್ರಕರಣಗಳು ಕಂಡುಬಂದಿಲ್ಲ. ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದರು.

ಇಂದಾವರ ಕಸ ಸಮಸ್ಯೆ– ಸರ್ಕಾರಕ್ಕೆ ಪ್ರಸ್ತಾವ: ಜಿಲ್ಲಾಧಿಕಾರಿ

‘ಇಂದಾವರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಂದಿ ಡೆಂಗಿಜ್ವರ ಕಂಡುಬಂದಿದೆ. ಗ್ರಾಮದ ಸಮೀಪದ ಕಸ ಘಟಕವನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಸಿ.ಟಿ.ರವಿ ಸಭೆಗೆ ತಿಳಿಸಿದರು.

‘ಕಸ ಘಟಕಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಲಭಿಸಿದ ತಕ್ಷಣ ಕ್ರಮ ವಹಿಸಲಾಗುವುದು’ ಎಂದು ಡಾ.ಬಗಾದಿ ಗೌತಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT