ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮ ನೋಡಿ ಯೋಜನೆ ಕೊಟ್ಟಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬಿಜೆಪಿ ಸ್ತ್ರೀಶಕ್ತಿ ಸಮಾವೇಶದಲ್ಲಿ
Last Updated 13 ಮಾರ್ಚ್ 2023, 4:46 IST
ಅಕ್ಷರ ಗಾತ್ರ

ಕೊಪ್ಪ: ‘ಬಿಜೆಪಿ ಸರ್ಕಾರ ಜಾತಿ, ಧರ್ಮ ನೋಡಿ ಯೋಜನೆ ಕೊಟ್ಟಿಲ್ಲ. ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ ಎಲ್ಲರಿಗೂ ಸಿಕ್ಕಿದೆ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಹುಲುಮಕ್ಕಿಯಲ್ಲಿ ನಡೆದ ಕಸಬಾ ಹೋಬಳಿ ಬಿಜೆಪಿ ‘ಸ್ತ್ರೀ ಶಕ್ತಿ ಸಮಾವೇಶ’ದಲ್ಲಿ ಅವರು ಮಾತನಾಡಿ, ‘ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಿಮ್ಮ ಕ್ಷೇತ್ರಕ್ಕೆ ಶಾಸಕರು ಯಾರಿರಬೇಕು ಎಂದು ನೀವು ನಿರ್ಧರಿಸಬೇಕು’ ಎಂದರು.

‘ಕಸ್ತೂರಿ ರಂಗನ್ ವರದಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆದಾಗ ಶಾಸಕರು ಹಾಜರಿರಲಿಲ್ಲ. ಜನರಿಗೆ ಮುಂದಿನ ಎರಡೂವರೆ ತಿಂಗಳು ಬಿಜೆಪಿ, ಕಾಂಗ್ರೆಸ್ ವ್ಯತ್ಯಾಸ ತಿಳಿಸಿ ಹೇಳುವ ಕೆಲಸವಾಗಬೇಕು. ‘ನೀವು ಬೂತ್ ಗೆಲ್ಲಿಸಿಕೊಳ್ಳಿ, ನಾನು ದೇಶ ಗೆಲ್ಲಿಸುತ್ತೇನೆ’ ಎಂದು ಮೋದಿ ಹೇಳಿ ದ್ದಾರೆ. ಯಾವ ವಿಚಾರದಡಿ ಮೋದಿ ಕೆಲಸ ಮಾಡುತ್ತಿದ್ದಾರೆಯೋ, ಅದೇ ವಿಚಾರ
ದಲ್ಲಿ ಜೀವರಾಜ್ ಕೆಲಸ ಮಾಡಲು ಬದ್ಧರಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ವಿರೋಧಿಗಳಲ್ಲಿದ್ದ ಹೊಂದಾಣಿಕೆ, ಒಳ ಒಪ್ಪಂದದಿಂದಾಗಿ ಜೀವರಾಜ್ ಅವರನ್ನು ಸೋಲಿನ ದವಡೆಗೆ ನೂಕಲಾಗಿತ್ತು’ ಎಂದರು.

‘ಸ್ಥಳೀಯ ಶಾಸಕರು ಸಮ್ಮಿಶ್ರ ಸರ್ಕಾರವಿದ್ದಾಗ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು, ಆಗ ಅಭಿವೃದ್ಧಿ ಮಾಡಲು ಆಗಲಿಲ್ಲವೇ? ಆಶ್ರಯ ನಿವೇಶನ ಕೊಡಲು ಆಗಲಿ ಲ್ಲವೇ? ನಾಲ್ಕು ವರ್ಷ ಎಂಟು ತಿಂಗಳಲ್ಲಿ ನಿವೇಶನ ಕೊಡಲು ಆಗದವರು, ಈಗ ನಿವೇಶನ ಕೊಡಲು ಪ್ರಾಣೇಶ್ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಚುನಾವಣೆ ಸಂದರ್ಭ ಹೇಳುತ್ತಿದ್ದಾರೆ’ ಎಂದು ಜರಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ‘ನಾನು ಶಾಸಕನಿದ್ದಾಗ 2,766 ಸಾಗುವಳಿ ಚೀಟಿ ಕೊಟ್ಟಿದ್ದೇನೆ. ಈಗಿನ ಶಾಸಕರು 24 ಸಾಗುವಳಿ ಚೀಟಿ ಕೊಟ್ಟಿದ್ದಾರೆ. ನಾನು ಮಾಡಿದ್ದ ಸಭೆಗೆ ಸಾಗುವಳಿ ಚೀಟಿ ಕೊಡಲು ಅವರಿಗೆ ಆಗಲಿಲ್ಲ. ಈ ಬಾರಿ ನನಗೆ ಆಶೀರ್ವಾದ ಮಾಡಿ, ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ’ ಎಂದರು.

‘ಹಕ್ಕುಪತ್ರ ವಿತರಿಸುವ ಮುನ್ನ ಅರಣ್ಯ ಇಲಾಖೆ ಅನುಮತಿ ಅಗತ್ಯ ಎಂದು ರಾಜೇಗೌಡ ಅವರು ನಡಾವಳಿ ಬರೆಸಿದ್ದರು. ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈಚೆಗೆ ಹೇಳಿಕೆ ನೀಡಿ ಡಿ.ಸಿಯಿಂದ ಪತ್ರ ಬಂದಿತ್ತು ಎಂದಿದ್ದರು. ಆದರೆ, ಆದೇಶಕ್ಕೂ ಮೊದಲೇ ನಡಾವಳಿ ಬರೆಯಿಸಲಾಗಿತ್ತು’ ಎಂದು ಆರೋಪಿಸಿದರು.

ಶಾನುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಸಂತೋಷ್ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಧಾ ಮೋಹನ್ ಅಧ್ಯಕ್ಷತೆ ವಹಿಸಿದ್ದರು.

ಮಂಡಲ ಬಿಜೆಪಿ ಅಧ್ಯಕ್ಷ ಅದ್ದಡ ಸತೀಶ್, ಜಿಲ್ಲಾ ಕಾರ್ಯದರ್ಶಿ ಪದ್ಮಾವತಿ ರಮೇಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ.ವಿಶಾಖ, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್.ಕೆ.ದಿನೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ದಿವ್ಯಾ ದಿನೇಶ್, ತಾಲ್ಲೂಕು ಕಾರ್ಯದರ್ಶಿ ಅನುಸೂಯ ಕೃಷ್ಣಮೂರ್ತಿ, ಲಿಲಿತಾ ನಾಗೇಂದ್ರ, ನಾಗರತ್ನಾ ಕಲ್ಕೆರೆ ಮುಂತಾದವರು ವೇದಿಕೆಯಲ್ಲಿದ್ದರು.

ಸತ್ಯನಾರಾಯಣ ಪೂಜೆ: ಶೃಂಗೇರಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲೆಂದು ಸಂಕಲ್ಪ ಮಾಡಿ ಸತ್ಯನಾರಾಯಣ ಪೂಜೆ ಸಲ್ಲಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸೀರೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT