ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಾಲ: ಹಣ ಉಳಿತಾಯಕ್ಕೆ ಮಾರ್ಗಗಳು

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಎಲ್ಲರೂ ತಮ್ಮದೇ ಸ್ವಂತ ಸೂರು ಇರಬೇಕು ಎಂದು ಬಯಸುವುದು ಸಹಜ. ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಉಳಿತಾಯ ಮತ್ತು ಸಾಲ ಮಾಡಿ ಮನೆ ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೊನೆಗೆ ಇದೊಂದು ಹಣಕಾಸಿನ ಬದ್ಧತೆಯಾಗಿ ಉಳಿಯುತ್ತದೆ. ಉಳಿತಾಯದ ಮೊತ್ತವನ್ನು ಬಳಸದೆ ಸ್ವಂತ ಮನೆ ಹೊಂದುವುದು ಜಾಣರ ಲಕ್ಷಣ. ಆದರೆ, ಪ್ರತಿ ತಿಂಗಳು ಮನೆ ಸಾಲದ ಕಂತುಗಳನ್ನು ಪಾವತಿಸುವುದು ಸುಲಭವಲ್ಲ.

ಆಧಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ಸಾಲ ಪಾವತಿಸುವ ಐದು ಸುಲಭವಾದ ಮಾರ್ಗಗಳನ್ನು ತೋರಿಸುತ್ತದೆ. ಇದರಿಂದ ಸಾಲದಿಂದಲೂ ಬೇಗ ಮುಕ್ತರಾಗಬಹುದು.

ಉತ್ತಮ ಕ್ರೆಡಿಟ್‌ ಸ್ಕೋರ್‌

ಕ್ರೆಡಿಟ್‌ ಸ್ಕೋರ್‌ 700 ಮತ್ತು ಅದಕ್ಕಿಂತ ಹೆಚ್ಚು ಹೊಂದಿದ್ದರೆ ಮನೆ ಸಾಲ ಪಡೆಯುವುದು ಹೆಚ್ಚು ಅನುಕೂಲವಾಗುತ್ತದೆ. ಕ್ರೆಡಿಟ್‌ ಸ್ಕೋರ್‌ದಿಂದ ಮನೆ ಸಾಲದ ಅರ್ಜಿಗೆ ಅನುಮೋದನೆ ನೀಡುವ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆಯುತ್ತವೆ.

ಸಾಲಕ್ಕೆ ಸಂಬಂಧಿಸಿದ ವರದಿಯು ಸಾಲ ಅನುಮೋದನೆ ನೀಡುವಲ್ಲಿ ಮಹತ್ವದ್ದಾಗಿರುತ್ತದೆ. ಜತೆಗೆ ಈ ಮಾನದಂಡಗಳ ಮೂಲಕವೇ ಬ್ಯಾಂಕ್‌ ಅಥವಾ ಹೌಸಿಂಗ್‌ ಫೈನಾನ್ಸ್‌ ಕಂಪನಿಗಳು ಮನೆ ಸಾಲದ ಅರ್ಜಿಗೆ ಅನುಮೋದನೆ ನೀಡಬೇಕೆ ಅಥವಾ ಬೇಡ ಎನ್ನುವ ಪ್ರಕ್ರಿಯೆಗೆ ಚಾಲನೆ ನೀಡುತ್ತವೆ.

ಒಂದು ವೇಳೆ ಸ್ಕೋರ್‌ ಉತ್ತಮವಾಗಿದ್ದರೆ ಬ್ಯಾಂಕ್‌ ಮತ್ತು ಹೌಸಿಂಗ್‌ ಫೈನಾನ್ಸ್‌ ಕಂಪನಿಗಳು ಆಕರ್ಷಕ ಬಡ್ಡಿ ದರವನ್ನು ನೀಡುತ್ತವೆ. ಇದರಿಂದ ಆಸ್ತಿಯ ಶೇಕಡ 80ರಿಂದ 90ರಷ್ಟು ಸಾಲದ ಮೊತ್ತವು ದೊರೆಯುತ್ತವೆ. ಕಡಿಮೆ ಕ್ರೆಡಿಟ್‌ ಸ್ಕೋರ್‌ ಹೊಂದಿದವರ ಮನೆ ಸಾಲದ ಅರ್ಜಿಗಳನ್ನೂ ಪರಿಗಣಿಸಲಾಗುತ್ತದೆ. ಆದರೆ, ಅತಿ ಹೆಚ್ಚು ಬಡ್ಡಿ ವಿಧಿಸುವ ಸಾಧ್ಯತೆಗಳಿರುತ್ತವೆ.

ಅಧಿಕಾರಿ ಜತೆ ಚರ್ಚೆ

ಕ್ರೆಡಿಟ್‌ ವರದಿ ಬಳಸಿಕೊಂಡು ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡುವ ಕುರಿತು ಸಂಬಂಧಿಸಿದ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯ ಅಧಿಕಾರಿ ಜತೆ ಸಂಧಾನ ನಡೆಸಲು ಅವಕಾಶವಿದೆ. ಈ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇದೆ. ಪ್ರಸ್ತುತ ಬಡ್ಡಿ ದರ ಮತ್ತು ಪ್ರಕ್ರಿಯೆ ಶುಲ್ಕವನ್ನು ಕಡಿಮೆ ಮಾಡುವ ಕುರಿತು ಸಮಾಲೋಚನೆ ನಡೆಸಿ ಅದರ ಪ್ರಯೋಜನ ಪಡೆದುಕೊಳ್ಳಬಹುದು.

ಖರೀದಿಗೆ ಮುನ್ನ

ಉಳಿತಾಯ ಖಾತೆ ಹೊಂದಿದ ಬ್ಯಾಂಕ್‌ಗಳಿಂದಲೇ ಮನೆ ಸಾಲ ಪಡೆಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಪ್ರಯತ್ನ ಮಾಡಿ. ಸ್ನೇಹಪರವಾದ ಬಡ್ಡಿ ದರದಲ್ಲಿ ಸಾಲ ನೀಡುವ ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ಈಗಾಗಲೇ ಎಲ್ಲಿಯಾದರೂ ಮನೆ ಸಾಲ ಮಾಡಿದ್ದರೆ ಆಕರ್ಷಕ ಬಡ್ಡಿ ದರ ವಿಧಿಸುವ ಇತರ ಹಣಕಾಸು ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಲ್ಲಿಗೆ ಸಾಲವನ್ನು ವರ್ಗಾಯಿಸಿರಿ.

ಮನೆ ಸಾಲಕ್ಕೆ ಅರ್ಜಿ ಹಾಕುವ ಮೊದಲೇ ಸಮರ್ಪಕವಾದ ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ವೈಯಕ್ತಿಕ ಮನೆ ಸಾಲವನ್ನು ಅವಧಿಗೆ ಮುನ್ನ ಪಾವತಿಸಿದರೆ ದಂಡವನ್ನು ವಿಧಿಸಲು ಅವಕಾಶವೂ ಇಲ್ಲ.

ಮುಂಗಡ ಪಾವತಿ ಹೆಚ್ಚಿಸಿ

ಸಾಲ ಮಂಜೂರಾದ ಮೇಲೆ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದ ಮುಂಗಡ ಹಣ (ಡೌನ್‌ಪೇಮೆಂಟ್‌) ಪಾವತಿಸಲು ಪ್ರಯತ್ನಿಸಿ. ಇದರಿಂದ ಪ್ರತಿ ತಿಂಗಳೂ ಕಂತಿನ ಭಾರಿ ಮೊತ್ತ ಪಾವತಿಸುವ ಹೊರೆ ಕಡಿಮೆಯಾಗುತ್ತದೆ. ಸಾಲ ನೀಡುವವರು ಕನಿಷ್ಠ ಶೇಕಡ 15ರಿಂದ 20ರಷ್ಟು ಡೌನ್‌ಪೇಮೆಂಟ್‌ ಮೊತ್ತವನ್ನು ಪಾವತಿಸುವಂತೆ ಸೂಚಿಸುತ್ತಾರೆ. ದೂರದೃಷ್ಟಿ ಗಮನದಲ್ಲಿ ಇಟ್ಟುಕೊಂಡು ಸಾಲದ ಮೊತ್ತದ ಡೌನ್‌ಪೇಮೆಂಟ್‌ ಅನ್ನು ಸಾಧ್ಯವಾದಷ್ಟು ಅತಿ ಹೆಚ್ಚು ಪಾವತಿಸಲು ಪ್ರಯತ್ನಿಸಬೇಕು.

ಹೆಚ್ಚುವರಿ ಮೊತ್ತ ಪಾವತಿಸಿ

ಹೆಚ್ಚುವರಿ ಮೊತ್ತವನ್ನು ಪಾವತಿಸುವುದರಿಂದ ಸುಗಮವಾಗಿ ಸಾಲ ಮರುಪಾವತಿಸಲು ಅನುಕೂಲವಾಗುತ್ತದೆ. ನಿಮಗೆ ಸಿಗುವ ಬೋನಸ್ ಮೊತ್ತದಲ್ಲಿ ಸಾಧ್ಯವಾದಷ್ಟು ಮನೆ ಸಾಲಕ್ಕೆ ಪಾವತಿಸಿ ಬಡ್ಡಿ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ಅಸಲು ಮತ್ತು ಬಡ್ಡಿ ಮೊತ್ತವೂ ಕಡಿಮೆಯಾಗುತ್ತದೆ. ಮನೆ ಸಾಲದ ಮೇಲೆ ಉಳಿತಾಯ ಮಾಡಲು ಹೂಡಿಕೆಯ ನಿರ್ವಹಣೆ ಮೇಲೆಯೂ ಗಮನ ನೀಡಲು ಮರೆಯಬಾರದು.

(ಲೇಖಕ, ಆಧಾರ್ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT