ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟ ಪರಿಶೀಲನೆಗೆ ತಡೆ; ಪರಿಮಾಣ ಪರಿಶೀಲನೆಗೆ ಮೊರೆ

ಹಂಪಾಪುರ ತೂಬು ಕೆರೆ ಕಾಮಗಾರಿ ಅಕ್ರಮ ಆರೋಪ; ದೂರು
Last Updated 20 ಅಕ್ಟೋಬರ್ 2018, 19:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಹಂಪಾಪುರ ತೂಬು ಕೆರೆ ಕಾಮಗಾರಿ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಪತ್ರಕ್ಕೆ ಸಂಬಂಧಿಸಿದಂತೆ ಗುಣಮಟ್ಟ ಪರಿಶೀಲನೆಗೆ ಅವಕಾಶ ನೀಡುವುದಿಲ್ಲ ಎಂದು ರೈತ ಸಂಘದವರು ಪ್ರತಿಭಟನೆ ಮಾಡಿ, ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ತಂಡವನ್ನು ವಾಪಸ್‌ ಕಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದನ್‌ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ಪರಿಶೀಲನೆಗೆ ಬಂದಿತ್ತು. ರೈತ ಸಂಘದ ಮುಖಂಡ ಎಂ.ಮಂಜುನಾಥ್‌, ಚಂದ್ರೇಗೌಡ, ಕೆ.ಕೆ.ಕೃಷ್ಣೇಗೌಡ ಅವರು ಪರಿಶೀಲನೆ ಮಾಡದಂತೆ ತಡೆದಿದ್ದಾರೆ.

ಹಂಪಾಪುರ ತೂಬು ಕೆರೆ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ ಮತ್ತು ಅವ್ಯವಹಾರ ನಡೆದಿದೆ ಎಂದು ರೈತ ಸಂಘದಿಂದ ಲೋಕಾಯುಕ್ತಕ್ಕೆ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿ ಎಂದು ಆಧಿಕಾರಿಗಳಿಗೆ ರೈತ ಸಂಘದ ಮುಖಂಡರು ತಾಕೀತು ಮಾಡಿದ್ದಾರೆ.

ರೈತ ಸಂಘದ ಪದಾಧಿಕಾರಿ ಮಂಜುನಾಥ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕೆರೆಯಲ್ಲಿ 28 ಸಾವಿರ ಮೀಟರ್‌ ಹೂಳು ತೆಗೆದಿರುವುದಾಗಿ ದಾಖಲಿಸಿ ಬಿಲ್‌ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಅಷ್ಟು ಹೂಳು ತೆಗೆದಿಲ್ಲ. ಎರಡು ಮೀಟರ್‌ ಆಳ ಹೂಳು ತೆಗೆದಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು 2014ರಲ್ಲಿ ಲೋಕಾಯಕ್ತರಿಗೆ ದೂರು ನೀಡಿದ್ದೆವು. ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದರು. ನಾಲ್ಕು ವರ್ಷವಾದರೂ ಮುಗಿದಿಲ್ಲ’ ಎಂದು ಹೇಳಿದರು.

‘ಪ್ರಕರಣದಲ್ಲಿ ಜಿಲ್ಲಾಧಿಕಾರಿ ಹೆಸರು ಇದೆ. ಹೀಗಾಗಿ, ಪರಿಶೀಲನೆ ಮಾಡದಂತೆ ತಂಡಕ್ಕೆ ದಿಗ್ಬಂಧನ ಹಾಕಿದೆವು. ಗುಣಮಟ್ಟ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಪರಿಶೀಲನೆಗೆ ಬಂದಿರುವುದಾಗಿ ಅಧಿಕಾರಿಗಳ ತಂಡ ಹೇಳಿದೆ’ ಎಂದು ಹೇಳಿದರು.

‘ಪೊಲೀಸರ ಮಧ್ಯಪ್ರವೇಶದಿಂದ ಪ್ರತಿಭಟನೆ ಹಿಂಪಡೆದೆವು. ಲೋಕಾಯಕ್ತಕ್ಕೆ ನೀಡಿರುವ ದೂರಿಗೆ ಸಂಬಂಧಿಸಿದಂತೆ ಎಂಟು ದಿನಗಳಲ್ಲಿ ಮತ್ತೆ ಪರಿಶೀಲನೆಗೆ ಬರುವುದಾಗಿ ತಂಡದವರು ಹೇಳಿದ್ದಾರೆ. ಪರಿಶೀಲನೆ ನಿಟ್ಟಿನಲ್ಲಿ ಈವರೆಗೆ ಅಧಿಕಾರಿಗಳ ತಂಡ ಎಂಟು ಬಾರಿ ಇಲ್ಲಿಗೆ ಬಂದಿದೆ’ ಎಂದರು.

ಎಂಜಿನಿಯರ್‌ ಚಂದನ್‌ ಮಾತನಾಡಿ, ‘ಗುಣಮಟ್ಟ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ, ಮುಖ್ಯ ಎಂಜಿನಿಯರ್‌ ತಿಳಿಸಿದ್ದಾರೆ. ಅದರಂತೆ ಪರಿಶೀಲನೆಗೆ ಬಂದಿದ್ದೇವೆ. ಕಾಮಗಾರಿ ಪರಿಮಾಣ ಪರಿಶೀಲನೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಪರಿಮಾಣ ಪರಿಶೀಲನೆಗೆ ಪ್ರತ್ಯೇಕ ಆದೇಶ ಮಾಡಿದರೆ, ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದರು.

ರೈತ ಮುಖಂಡರಾದ ಎಂ.ಎಲ್‌.ಬಸವರಾಜು, ಪರಮೇಶ್‌, ಪುಟ್ಟಸ್ವಾಮಿಗೌಡ, ಲಕ್ಷ್ಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT