ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ: ಶಿಕ್ಷಕಿಯರ ಅಮಾನತಿಗೆ ಗ್ರಾಮಸ್ಥರ ಪಟ್ಟು

ಕಿರುಗುಂದ ಶಾಲೆಗೆ ಉಪನಿರ್ದೇಶಕರ ಭೇಟಿ
Published : 11 ಸೆಪ್ಟೆಂಬರ್ 2024, 13:45 IST
Last Updated : 11 ಸೆಪ್ಟೆಂಬರ್ 2024, 13:45 IST
ಫಾಲೋ ಮಾಡಿ
Comments

ಮೂಡಿಗೆರೆ: ತಾಲ್ಲೂಕಿನ ಕಿರುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆ. ಪುಟ್ಟರಾಜ್ ನೇತೃತ್ವದಲ್ಲಿ ಅಧಿಕಾರಿಗಳ ತಂಡದವರು ಭೇಟಿ ನೀಡಿ, ಶಿಕ್ಷಕಿಯರ ವಿರುದ್ಧ ನೀಡಿದ್ದ ಪ್ರತ್ಯೇಕ ದೂರಗಳನ್ನು ಪರಿಶೀಲಿಸಿದರು.

ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡುತ್ತಿದ್ದಂತೆ, ಗ್ರಾಮಸ್ಥರು ಗ್ರಾಮ ಪಂಚಾಯಿತಿ ಆವರಣದಲ್ಲಿ ಜಮಾಯಿಸಿ ‘ಮೂವರು ಶಿಕ್ಷಕಿಯರನ್ನು ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ಗ್ರಾಮಸ್ಥರು ಶಾಲೆ ಆವರಣಕ್ಕೆ ಬರುವುದಿಲ್ಲ. ಗ್ರಾಮ ಪಂಚಾಯಿತಿ ಸಭಾಂಗಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ನಮ್ಮ ಅಹವಾಲು ಸ್ವೀಕರಿಸಬೇಕು’ ಎಂದು ಪಟ್ಟು ಹಿಡಿದಾಗ, ಅಧಿಕಾರಿಗಳ ತಂಡ ಗ್ರಾಮ ಪಂಚಾಯಿತಿ ಸಭಾಂಗಣಕ್ಕೆ ತೆರಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಸಭೆಯಲ್ಲಿ ಗ್ರಾಮಸ್ಥ ಕೆ.ಕೆ. ರಾಮಯ್ಯ ಮಾತನಾಡಿ, ‘ಕಳೆದ ವರ್ಷ ಮಕ್ಕಳ ಆಹಾರಧಾನ್ಯ ಹಾಗೂ ಹಾಲಿನ ಪುಡಿಯನ್ನು ಮುಖ್ಯ ಶಿಕ್ಷಕಿ ಸಾಗಿಸುವಾಗ ಗ್ರಾಮಸ್ಥರು ಹಿಡಿದು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತರಕಾರಿ ಮಾರಾಟದ ವಾಹನವನ್ನು ಶಾಲೆ ಆವರಣಕ್ಕೆ ಕರೆದೊಯ್ದು ಬಿಸಿಯೂಟಕ್ಕೆ ತರಕಾರಿ ಖರೀದಿಸುವ ನೆಪದಲ್ಲಿ ಆಹಾರಧಾನ್ಯ ಹಾಗೂ ಹಾಲಿನ ಪುಡಿಯನ್ನು ಜನರ ಕಣ್ಣು ತಪ್ಪಿಸಿ ತರಕಾರಿ ವಾಹನದಲ್ಲಿ ಸಾಗಿಸುತ್ತಾರೆ. ಹಲವಾರು ಬಾರಿ ಶಿಕ್ಷಕಿಯರ ವಿರುದ್ಧ ದೂರು ನೀಡಿ ಪ್ರತಿಭಟಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಇನ್ನೆರಡು ದಿನಗಳಲ್ಲಿ ಮೂವರು ಶಿಕ್ಷಕಿಯರ ವಿರುದ್ಧ ಕ್ರಮ ಕೈಗೊಂಡು, ಈ ಶಾಲೆಗೆ ಮೂವರು ಶಿಕ್ಷಕರನ್ನು ಹೊಸದಾಗಿ ನೇಮಿಸಬೇಕು. ಇಲ್ಲವಾದರೆ ಈಗ ದಾಖಲಾಗಿರುವ 34 ಮಕ್ಕಳನ್ನು ಪೋಷಕರು ಬೇರೆ ಶಾಲೆಗೆ ದಾಖಲಿಸಲಿದ್ದಾರೆ’ ಎಂದು ಎಚ್ಚರಿಸಿದರು.

ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಉಪನಿರ್ದೇಶಕ ಜಿ.ಕೆ. ಪುಟ್ಟರಾಜ್, ಶಾಲೆಯ ಮೂವರು ಶಿಕ್ಷಕಿಯರು ನಿತ್ಯ ಜಗಳವಾಡುತ್ತಿರುವುದು ಸೇರಿದಂತೆ ಇನ್ನಿತರ ದೂರುಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಕಳಿಸಿದ್ದು, ಅವರು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. 5 ವರ್ಷಗಳಿಂದ ಶಾಲೆಯ ದಾಖಲಾತಿ ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಲಾಗುವುದು. ಜಿಲ್ಲೆಯ ಯಾವುದೇ ಶಾಲೆಯ ಶಿಕ್ಷಕರ ವಿರುದ್ಧ ಇಷ್ಟು ದೊಡ್ಡ ಮಟ್ಟದಲ್ಲಿ ದೂರುಗಳು ಬಂದಿರಲಿಲ್ಲ. ಶಿಕ್ಷಕರ ವರ್ಗಾವಣೆ ನಿಯಮಾನಸಾರ ಕೌನ್ಸಿಲಿಂಗ್ ಮೂಲಕ ಮಾಡಬೇಕಾಗಿದೆ. ದೂರಿನ ಆಧಾರದಲ್ಲಿ ವರ್ಗಾವಣೆ ಮಾಡಬಹುದಾಗಿದೆ. ಒಂದೆರಡು ದಿನದಲ್ಲಿ ಮೂವರು ಶಿಕ್ಷಕರು ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿಶ್ರೀ, ಸದಸ್ಯ ಕೆ.ಆರ್. ದಿನೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರಿಭಾರ್ಗವ ಮಾತನಾಡಿದರು. ಗ್ರಾಮಸ್ಥರಾದ ಯು.ಎಚ್. ರಾಜಶೇಖರ್, ಬಿ.ಕೆ. ಚಂದ್ರಶೇಖರ್, ಅಬ್ಬಾಸ್, ಕೆ.ಆರ್. ಲೋಕೇಶ್, ಗುಲಾಂ ಮಹಮ್ಮದ್, ಕೆ.ಆರ್. ಮಂಜುನಾಥ್, ಚನ್ನಕೇಶವ, ಪರಮೇಶ, ಕೆ.ಎ. ರವಿಕುಮಾರ್, ಶಿವರಾಜ್, ಮನೋಜ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸ್ಮಿತಾ, ಶಿವಕುಮಾರ್, ಪುರುಷೋತ್ತಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT