ಹಳೆಯ ಜೈಲು ಆವರಣ; ಅಕ್ರಮ ಚಟುವಟಿಕೆ ತಾಣ

7

ಹಳೆಯ ಜೈಲು ಆವರಣ; ಅಕ್ರಮ ಚಟುವಟಿಕೆ ತಾಣ

Published:
Updated:
Prajavani

ಚಿಕ್ಕಮಗಳೂರು: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಕೂಗಳತೆ ದೂರದಲ್ಲಿರುವ ಹಳೆಯ ಜೈಲು ಆವರಣವು ಮೂಲಮೂತ್ರ ವಿಸರ್ಜನೆ, ಅಕ್ರಮ, ಅಪಾಯಕಾರಿ ಚಟುವಟಿಕೆಗಳ ತಾಣವಾಗಿದೆ. ಇಲ್ಲಿನ ದಂಧೆಗಳು ನಾಗರಿಕರಲ್ಲಿ ತಲ್ಲಣ ಸೃಷ್ಟಿಸಿವೆ.

ನಗರದ ಹೃದಯ ಭಾಗದ ಈ ನಿರ್ಜನ ಪ್ರದೇಶದಲ್ಲಿ ‘ಗುಪ್ತ’ ಚಟುವಟಿಕೆಗಳು ನಿರಾತಂಕವಾಗಿ ಸಾಗಿವೆ. ಈ ತಾಣ ಮದ್ಯಪಾನ, ಧೂಮಪಾನ, ಗಾಂಜಾ, ಗುಟ್ಕಾ, ವೈಟ್ನರ್‌ (ಸೆಲ್ಯೂಷನ್) ಸೇವನೆ, ವೇಶ್ಯಾವಾಟಿಕೆ ಅಡ್ಡೆಯಾಗಿದೆ. ಮಲಮೂತ್ರದ ತೊಟ್ಟಿಯಾಗಿದೆ.
ಆವರಣದಲ್ಲಿ ಬಿಸಾಕಿರುವ ಮದ್ಯದ ಬಾಟಲಿಗಳು, ಪೌಚುಗಳು, ಪ್ಯಾಕೆಟ್ಟುಗಳು, ಹಳೆಯ ಬಟ್ಟೆಗಳು, ಗೋಣಿಚೀಲ, ಗುಟ್ಕಾ–ಸಿಗರೇಟು ಪೊಟ್ಟಣಗಳು, ಗಲೀಜು ಅಲ್ಲಿ ನಡೆಯುವ ಚಟುವಟಿಕೆಗಳನ್ನು ಸಾರಿ ಹೇಳುತ್ತವೆ. ಇಡೀ ಆವರಣ ದುಃಸ್ಥಿತಿಯಲಿದೆ.

ಟ್ಯಾಕ್ಸಿ ಚಾಲಕ ಸಿದ್ದಲಿಂಗಸ್ವಾಮಿ ಶವ ಮೂರು ದಿನಗಳ ಹಿಂದೆ ಈ ಆವರಣದಲ್ಲಿ ಪತ್ತೆಯಾಗಿದೆ. ದೇಹದಲ್ಲಿ ಏಟಾಗಿರುವ ಗುರುತುಗಳಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಚಾಲಕನ ಸಾವು ನಾಗರಿಕರನ್ನು ಬೆಚ್ಚಿಬೀಳಿಸಿದೆ.

‘ಇಲ್ಲಿ ಎಲ್ಲ ರೀತಿಯ ದಂಧೆಗಳು ನಡೆಯುತ್ತವೆ. ಇಲ್ಲಿನ ಪಾಳುಕಟ್ಟಡಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತದೆ. ಐದಾರು ಮಹಿಳೆಯರು ಬಸ್‌ ನಿಲ್ದಾಣ, ಅಕ್ಕ‍ಪಕ್ಕದಲ್ಲಿ ಯಾವಾಗಲೂ ಅಡ್ಡಾಡುತ್ತಾರೆ. ಗಿರಾಕಿ ಕುದುರಿಸಿಕೊಂಡು ಇಲ್ಲಿಗೆ ಕರೆತರುತ್ತಾರೆ. ನಿರ್ಗತಿಕರು ಹಣಕ್ಕೆ ಪೀಡಿಸುತ್ತಾರೆ. ಸಂಜೆ ನಂತರ ಈ ಜಾಗದ ಅಸುಪಾಸಿನಲ್ಲಿ ಒಬ್ಬೊಬ್ಬರೇ ಓಡಾಡುವುದಕ್ಕೆ ಭಯವಾಗುತ್ತದೆ’ ಎಂದು ಲಗೇಜ್‌ ಜೀಪು ಚಾಲಕ ಶಶಿ ಹೇಳುತ್ತಾರೆ.

ಹಳೆಯ ಜೈಲಿನ ಜಾಗವು ಕೆಎಸ್‌ಆರ್‌ಟಿಸಿ ಸುಪರ್ದಿಯಲ್ಲಿದೆ. ಈ ಆವರಣದ ಚಟುವಟಿಕೆಗಳ ಮೇಲೆ ಕಣ್ಗಾವಲು ಇದ್ದಂತಿಲ್ಲ. ಇಲ್ಲಿನ ಕಟ್ಟಡಗಳು ಹಾಳು ಬಿದ್ದಿವೆ. ಕಟ್ಟಡಗಳ ಬದಿಯಲ್ಲಿ ಹಲ್ಲು, ಪೊದೆ, ಗಿಡಗಂಟಿಗಳು ಬೆಳೆದುಕೊಂಡಿವೆ.

ಐ.ಜಿ ರಸ್ತೆ ಭಾಗದಲ್ಲಿ ಆವರಣಕ್ಕೆ ಚೈನ್‌ಲಿಂಕ್‌ ಮೆಷ್‌ ಬೇಲಿ ಅಳವಡಿಸಲಾಗಿದೆ. ಆದರೆ, ಬೇಲಿ ಎತ್ತರ ಕಡಿಮೆ ಇದೆ. ಪುಡಾರಿಗಳು, ವ್ಯಸನಿಗಳು ಆವರಣದೊಳಕ್ಕೆ ಹಾರುತ್ತಾರೆ. ಮತ್ತೊಂದು ಭಾಗದಲ್ಲಿ (ಆಟೊ ಸ್ಟ್ಯಾಂಡ್‌ ಕಡೆ) ಗೇಟಿಗೆ ಬೀಗ ಹಾಕಿಲ್ಲ. ಸರಾಗವಾಗಿ ಒಳಕ್ಕೆ ಪ್ರವೇಶಿಸಬಹುದು.

‘ಚಾಲಕ ಸಿದ್ದಲಿಂಗಸ್ವಾಮಿ ಸಾವು ನಮ್ಮನ್ನು ಬೆಚ್ಚಿಬೀಳಿಸಿದೆ. ಹಳೆಯ ಜೈಲು ಆವರಣದಲ್ಲಿನ ಎಲ್ಲ ಕಟ್ಟಡಗಳನ್ನು ನೆಲ ಸಮಗೊಳಿಸಬೇಕು. ಇಡೀ ಆವರಣ ಸ್ವಚ್ಛಗೊಳಿಸಬೇಕು. ಅಕ್ರಮ ದಂಧೆಗಳಿಗೆ ಪೊಲೀಸರು ಕಡಿವಾಣ ಹಾಕಬೇಕು’ ಎಂದು ಚಾಲಕ ಶ್ರೀನಿವಾಸ್‌ ಒತ್ತಾಯಿಸುತ್ತಾರೆ.

ಬೇಲಿ ಅಳವಡಿಸಿದ ನಂತರ ಕಿರಿಕಿರಿ ಕೊಂಚ ತಗ್ಗಿದೆ. ಆಟೊಗಳಲ್ಲಿ ಸಂಗ್ರಹಿಸಿದ ಕಸವನ್ನು ಈ ಆವರಣದಲ್ಲಿ ಟಿಪ್ಪರ್‌ ಲಾರಿ ವರ್ಗಾಯಿಸುತ್ತಾರೆ. ದುರ್ನಾತ ಸಂಕಷ್ಟ ಹೇಳತೀರದಾಗಿದೆ ಎಂಬುದು ಚಾಲಕರು, ಇಂದಿರಾ ಕ್ಯಾಂಟೀನ್‌ ಗ್ರಾಹಕರು, ನಿವಾಸಿಗಳ ಅಳಲು.

‘ಕಟ್ಟಡ ನೆಲಸಮಕ್ಕೆ ಕ್ರಮ ಶೀಘ್ರ’

ಹಳೆಯ ಜೈಲು ಆವರಣದ ಕಟ್ಟಡಗಳನ್ನು ಶೀಘ್ರದಲ್ಲಿ ನೆಲಸಮಗೊಳಿಸಲಾಗುವುದು. ಈ ಜಾಗದಲ್ಲಿ ವಾಹನ ನಿಲುಗಡೆಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗುವುದು. ಆವರಣ ಸ್ವಚ್ಛ ಮಾಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು ₹ 15 ಕೋಟಿ ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣದ ನಿರ್ಮಿಸುವ ಪ್ರಸ್ತಾವ ಇದೆ. ಈ ಜಾಗದಲ್ಲಿ ಸ್ಥಳೀಯ, ವೇಗದೂತ ಬಸ್ಸುಗಳಿಗೆವ್ಯವಸ್ಥೆ ಮಾಡುವ ಚಿಂತನೆ ಇದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !