ಭಾನುವಾರ, ಡಿಸೆಂಬರ್ 8, 2019
20 °C

ಬಾಸೂರು ಕಾವಲ್‌ನಲ್ಲಿ ಈರುಳ್ಳಿ ಬೆಳೆ; ಇಲಾಖೆಗಳ ಜಾಣ ಕುರುಡು: ಪರಿಸರಾಸಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಬಾಸೂರು ಕಾವಲನ್ನು ಸಮುದಾಯ ಸಂರಕ್ಷಣಾ ಪ್ರದೇಶ ಎಂದು ಘೋಷಿಸಿದ್ದರೂ ಅಲ್ಲಿ ಈರುಳ್ಳಿ ಬೆಳೆದು, ಮಾರಾಟ ಮಾಡಲು ಇಲಾಖೆಗಳು ಅವಕಾಶ ನೀಡಿವೆ ಎಂದು ಪರಿಸರಾಸಕ್ತರು ದೂಷಿಸಿದ್ದಾರೆ.

ಕಾವಲು ಕಾಯುವವರು ಕಾವಲಿನ ಹಲವು ಎಕರೆ ಜಾಗದಲ್ಲಿ ಈರುಳ್ಳಿ ಬೆಳೆಯುತ್ತಿರುವುದನ್ನು ಅರಣ್ಯ, ಪಶುಪಾಲನೆ ಇಲಾಖೆ ಗಮನಕ್ಕೆ ತರಲಾಗಿತ್ತು. ತಕ್ಷಣ ಇದನ್ನು ನಿರ್ಬಂಧಿಸುವಂತೆ ಮನವಿ ಮಾಡಲಾಗಿತ್ತು. ಈ ಎರಡೂ ಇಲಾಖೆಗಳು ಈ ಸಂಬಂಧ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈರುಳ್ಳಿ ಬೆಳೆದು, ಕಟಾವು ಮಾಡಲಾಗಿದೆ. ಇದನ್ನು ಗಮನಿಸಿದರೆ ಈ ಎರಡು ಇಲಾಖೆಗಳು ಕಾವಲುಗಾರರಿಗೆ ಪರೋಕ್ಷವಾಗಿ ಈರುಳ್ಳಿ ಬೆಳೆಯಲು ಮೌಖಿಕ ಅನುಮತಿ ನೀಡಿರುವ ಸಂಶಯ ಕಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಬಾಸೂರು ಕಾವಲು ಅಮೃತಮಹಲ್ ತಳಿಗಳ ಮೇವಿನ ಹುಲ್ಲುಗಾವಲು. ಈ ಹುಲ್ಲುಗಾವಲು ಕೃಷ್ಣಮೃಗ ಸಹಿತ ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಗಳ ಸಂತತಿಯ ಆವಾಸ ಸ್ಥಾನವಾಗಿದೆ. ಇಂಥ ವಿಶೇಷ ಹುಲ್ಲುಗಾವಲನ್ನು ಅರಣ್ಯೇತರ ಚಟುವಟಿಕೆಗೆ ಬಳಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕಾವಲಿನಲ್ಲಿ ಅರಣ್ಯೇತರ ಚಟುವಟಿಕೆಗೆ ಹಲವು ವರ್ಷಗಳಿಂದ ಅವಕಾಶ ನೀಡಲಾಗಿದೆ. ಇದನ್ನು ಪರಿಸರಾಸಕ್ತ ಸಂಘಟನೆಗಳು ಇಲಾಖೆಗಳ ಗಮನಕ್ಕೆ ತಂದಿವೆ. ಕಾವಲುಗಾರರಿಗೆ ಅವರ ಜೀವನೋಪಾಯಕ್ಕಾಗಿ ಬೇರೆ ತಾಕುಗಳನ್ನು ನೀಡಿ ಆಹಾರ ಬೆಳೆಗಳಾದ ರಾಗಿ, ಜೋಳ ಬೆಳೆಯಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು ವಾಣಿಜ್ಯ ಬೆಳೆ ಈರುಳ್ಳಿ ಬೆಳೆಯುತ್ತಿದ್ದಾರೆ. ಇಲಾಖೆಗಳು ಜಾಣ ಕುರುಡು ಪ್ರದರ್ಶಿಸುತ್ತಿವೆ ಎಂದು ದೂರಿದ್ದಾರೆ.

ಕಾವಲ್‌ನಲ್ಲಿ ವಾಣಿಜ್ಯ ಬೆಳೆ ಬೆಳೆದವರ ಮೇಲೆ ಕ್ರಮ ಜರುಗಿಸಬೇಕು. ಈ ಕಾವಲಿನಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಭದ್ರಾ ವನ್ಯಜೀವಿ ಸಂರಕ್ಷನಾ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ಡಿ.ವಿ.ಗಿರೀಶ್‌, ವೈಲ್ಡ್‌ ಕ್ಯಾಟ್‌–ಸಿನ ಶ್ರೀದೇವ್‌ಹುಲಿಕೆರೆ, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ , ಪರಿಸರಾಸಕ್ತ ಎಸ್.ಗಿರಿಜಾಶಂಕರ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು