ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿಗೆ ಹಸಿರು ಹುಳು ಕಾಟ: ಸಂಕಷ್ಟ

ಉತ್ತರೆ ಮಳೆಯ ಮೇಲೆಯೇ ಅವಲಂಬಿಸಿದೆ ಬೆಳೆಯ ಭವಿಷ್ಯ
Last Updated 12 ಸೆಪ್ಟೆಂಬರ್ 2019, 10:05 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನ ಕೆಲವು ಭಾಗದ ಈರುಳ್ಳಿ ಬೆಳೆಯಲ್ಲಿ ಹಸಿರು ಹುಳು (ಗಿಡ ತುಂಡು ಮಾಡುವ ಹುಳು) ಕಾಣಿಸಿಕೊಂಡಿದೆ. ಆರಂಭದಲ್ಲಿ ಮಳೆ ಕೊರತೆ, ಬಳಿಕ ಅಧಿಕ ಮಳೆಯಿಂದ ನಲುಗಿದ್ದ ಈರುಳ್ಳಿ ಬೆಳೆಯನ್ನು ಈಗ ಹುಳುಗಳು ಬಾಧಿಸುತ್ತಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

‘ಮುಂಗಾರು ಬಿತ್ತನೆ ಸಮಯವಾದ ಜೂನ್-ಜುಲೈ ಮಧ್ಯಭಾಗದವರೆಗೂ ಆದ ಮಳೆ ಕೊರತೆ ಮತ್ತು ಕಾಣಿಸಿಕೊಂಡ ಬಿರುಬಿಸಿಲಿನಿಂದ ಶೇ 20ರಷ್ಟು ಬಿತ್ತನೆ ಬೀಜ ಮೊಳಕೆಯೊಡೆಯದೇ ಹಾಳಾಗಿದ್ದವು. ಬಳಿಕ ಸುರಿದ ಬಿರುಸು ಮಳೆಗೆ ಶೇ 15-20ರಷ್ಟು ಬೀಜಗಳು ಕೊಚ್ಚಿ ನಾಶವಾದವು. ಈಗ ಹೊಲದಲ್ಲಿ ಈರುಳ್ಳಿ ಸಸಿಗಳು ಸಾಕಷ್ಟು ಬಿಡಿಬಿಡಿಯಾಗಿವೆ. ಇದು ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ರೈತ ತಿಮ್ಮಪ್ಪ ಕಳವಳ ವ್ಯಕ್ತಪಡಿಸಿದರು.

‘ಈ ನಡುವೆ ಹೆಬ್ಬೂರು, ಗೌರಾಪುರ ಭಾಗದಲ್ಲಿನ ಈರುಳ್ಳಿ ಬೆಳೆಗಳಲ್ಲಿ ಹಸಿರುಹುಳು ಕಾಣಿಸಿಕೊಂಡಿದೆ. ಹುಳುಗಳ ಮರಿಗಳು ಗಿಡದ ಬುಡವನ್ನು ಕತ್ತರಿಸುತ್ತಿವೆ. ಹುಳು, ಈರುಳ್ಳಿ ಗಡ್ಡೆ ಮತ್ತು ಬೆಳವಣಿಗೆಯ ಗರಿಗಳ ಸಂಪರ್ಕವನ್ನೇ ಕಡಿದುಹಾಕಿ, ಬೆಳೆ ಸಾಯುವಂತೆ ಮಾಡುತ್ತಿವೆ’ ಎಂದು ರೈತ ಗೌರಾಪುರದ ಪ್ರಶಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.

‘ಬರುವ ಶನಿವಾರದಿಂದ ಉತ್ತರೆ ಮಳೆ ಆರಂಭ ಆಗಲಿದೆ. ಈ ಮಳೆಯ ಸಮಯದಲ್ಲಿ ಕಾಣಸಿಕೊಳ್ಳುವ ದಟ್ಟ ಮಂಜು (ಕವಳ) ಈರುಳ್ಳಿ ಗರಿಗಳ ಮೇಲೆ ಸಂಗ್ರಹವಾಗುತ್ತದೆ. ಇದರಲ್ಲಿನ ದ್ರವರೂಪಿ ಅಂಟು ಗಿಡದ ಗರಿಗಳ ಬೆಳವಣಿಗೆಯನ್ನು ತಡೆಯುತ್ತದೆ. ಗಡ್ಡೆ ಹಿಗ್ಗುವಿಕೆಯನ್ನು ಸ್ಥಗಿತಗೊಳಿಸುತ್ತದೆ. ಇದು ಚಿಕ್ಕ ಗಾತ್ರದಲ್ಲಿದ್ದರೂ ಈರುಳ್ಳಿಯನ್ನು ಹೊಲದಿಂದ ತೆಗೆಯಲೇಬೇಕಾದ ಅನಿವಾರ್ಯತೆಗೆ ದೂಡುತ್ತದೆ ಎಂಬ ಭೀತಿ ಕಾಡುತ್ತಿದೆ’ ಎನ್ನುತ್ತಾರೆ ರೈತ ಹೊನ್ನಪ್ಪ.

‘ಉತ್ತರೆ ಮಳೆಯ ಹೊತ್ತಿಗಾಗಲೇ ಬಹುತೇಕ ಈರುಳ್ಳಿ ಗಡ್ಡೆಗಳನ್ನು ಹೊರತೆಗೆಯುತ್ತಿದ್ದೆವು. ಆದರೆ, ಈ ವರ್ಷ ಮುಂಗಾರು ವಿಳಂಬವಾಗಿದ್ದರಿಂದ ಬೆಳೆಗಳು ಉತ್ತರೆ ಮಳೆಗೆ ಸಿಲುಕಲಿವೆ. ಉತ್ತರೆ ಮಳೆಯ ಮೇಲೆಯೇ ಈರುಳ್ಳಿ ಭವಿಷ್ಯ ಹಾಗೂ ಬೆಳೆ ಕೈಸೇರುವ ಸಾಧ್ಯತೆಯೂ ನಿರ್ಧಾರ ಆಗಲಿದೆ’ ಎನ್ನುತ್ತಾರೆ ರೈತ ಬಸವರಾಜಪ್ಪ.

ಬೆಳೆ ಉಳಿಸಲು ಹೀಗೆ ಮಾಡಿ...

ಹಸಿರು ಹುಳು ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 2 ಮಿಲಿ ಕ್ಲೋರೋ ಪೈರಿಫಾಸ್ ಅಥವಾ ಪ್ರತಿ ಲೀಟರ್ ನೀರಿಗೆ 1 ಮಿಲಿ ಲ್ಯಾಮ್ಡಾ ಸೈಹಲೋಥ್ರಿನ್ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಹಸಿರು ಹುಳು ಕಾಟ ನಿಯಂತ್ರಿಸಬಹುದು. ಇದು ಎಕರೆಗೆ 200-250 ಲೀಟರ್ ದ್ರಾವಣ ಬೇಕಾಗುತ್ತದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕ್ರೇಂದ್ರದ ವಿಜ್ಞಾನಿ ಗಿರೀಶ್ ಸಲಹೆ ನೀಡಿದ್ದಾರೆ.

ಈ ವಾತಾವರಣದಲ್ಲಿ ಈರುಳ್ಳಿಗೆ ಎಲೆ ಮಚ್ಚೆರೋಗ (ಬೂದಿ ರೋಗ) ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಎಲೆಗಳ ಮೇಲೆ ನೇರಳೆ ಬಣ್ಣದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುವುದು ರೋಗದ ಲಕ್ಷಣ. ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮ್ಯಾಂಕೋಜೆಟ್, 2 ಗ್ರಾಂ ಜೈಸಿಜ್ ಮಿಶ್ರಣ ಮಾಡಿ ಸಿಂಪಡಿಸಿ, ರೋಗ ನಿಯಂತ್ರಿಸಬಹುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT