ರಘು ಕೆ.ಜಿ
ಚಿಕ್ಕಮಗಳೂರು: ಸಮರ್ಪಕವಾಗಿ ಮಳೆಯಾಗದ ಕಾರಣ ಈರುಳ್ಳಿ ಸೇರಿದಂತೆ ತರಕಾರಿಗಳ ಆವಕ ಮಾರುಕಟ್ಟೆಗೆ ಕಡಿಮೆ ಇದೆ. ಸಾಲು ಸಾಲು ಹಬ್ಬಗಳೂ ಆರಂಭವಾಗಿರುವುರಿಂದ ಬೇಡಿಕೆ ಹೆಚ್ಚಿದ್ದು, ದರ ಹೆಚ್ಚಳದ ಬಿಸಿ ಗ್ರಾಹಕರ ಜೇಬು ಸುಡುವ ಸಾಧ್ಯತೆ ಇದೆ.
‘ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ (ದಪ್ಪ) ದರ 50 ಕೆ.ಜಿ ಚೀಲಕ್ಕೆ ₹1,200 ರಿಂದ ₹1,400ರವರೆಗೆ ಇದೆ. ಸಣ್ಣ ಈರುಳ್ಳಿಗೆ ₹900 ರಿಂದ ₹1,100 ಇದೆ. ‘ಮಹಾರಾಷ್ಟ್ರದಿಂದ ಈರುಳ್ಳಿ ತರಿಸಿಕೊಳ್ಳುತ್ತಿದ್ದೇವೆ. ದರದಲ್ಲಿ ನಿಧಾನವಾಗಿ ಏರಿಕೆ ಕಾಣುತ್ತಿದೆ’ ಎನ್ನುತ್ತಾರೆ ನಗರದ ಎಪಿಎಂಸಿಯ ಎಸ್‌ಎಂಪಿ ಮಳಿಗೆ ಈರುಳ್ಳಿ ವ್ಯಾಪಾರಿ ಸೈಯದ್.
‘₹100 ಗಡಿ ದಾಟಿದ್ದ ಟೊಮೆಟೊ ದರ ಈಗ ಮಾರುಕಟ್ಟೆಯಲ್ಲಿ ₹20ಕ್ಕೆ ಇಳಿದಿದೆ. ‘ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ₹50 ಸಾವಿರ ಖರ್ಚು ಮಾಡಿ ಟೊಮೆಟೊ ಬೆಳೆ ಬೆಳೆದಿದ್ದೇನೆ. ಈ ಹಿಂದೆ ಬೆಲೆ ಹೆಚ್ಚಳದಿಂದ ಉತ್ತಮ ಲಾಭ ಸಿಕ್ಕಿತ್ತು. ಈಗ ಜಮೀನಿನಲ್ಲಿ ಫಸಲು ಇದೆ. ಆದರೆ, ಬೆಲೆ ಕುಸಿತವಾಗಿರುವುದು ಆತಂಕ ತಂದಿದೆ’ ಎಂದು ನೆಟ್ಟೆಕೆರೆಹಳ್ಳಿ ರೈತ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.