ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಉಡುಗೊರೆ ಆಮಿಷಕ್ಕೆ ಮರುಳಾದ ಮಹಿಳೆ

ಆನ್‌ಲೈನ್‌ನಲ್ಲಿ ₹ 2.68 ಲಕ್ಷ ವಂಚನೆ
Last Updated 29 ಜೂನ್ 2022, 15:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಂಚಕರು ಜ್ಯೋತಿನಗರದ ಮಹಿಳೆಗೆ (40) ಫೋನ್‌ ಮಾಡಿ ಲಕ್ಕಿ ಗ್ರಾಹಕರಾಗಿ ಆಯ್ಕೆಯಾಗಿರುವುದಾಗಿ ಯಾಮಾರಿಸಿ ಆನ್‌ಲೈನ್‌ನಲ್ಲಿ ₹ 2.68 ಲಕ್ಷ ಲಪಟಾಯಿಸಿದ್ದಾರೆ.

ಮಹಿಳೆ ನಗರದ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚನೆ ಕುರಿತು ದೂರಿನಲ್ಲಿರುವ ವಿವರ ಇಂತಿದೆ.

ವಂಚಕನೊಬ್ಬ ಜೂನ್‌ 20ರಂದು ಮಧ್ಯಾಹ್ನ ಫೋನ್‌ ಮಾಡಿದ್ದ. ‘... ಡಿಜಿಟಲ್‌ ಮುಂಬೈ’ನಿಂದ ಕರೆ ಮಾಡಿರುವುದಾಗಿ ತಿಳಿಸಿದ. ನೀವು ಲಕ್ಕಿ ಕಸ್ಟಮರ್‌ ಆಗಿ ಆಯ್ಕೆಯಾಗಿರುವುದಾಗಿ ಹೇಳಿದ. ನಿಮಗೆ ಐದು ವಸ್ತುಗಳ ಪಟ್ಟಿ ಕಳಿಸುತ್ತೇವೆ, ಅದರಲ್ಲಿ ಒಂದನ್ನು ಆಯ್ಕೆ ಮಾಡಬೇಕು, ಇದು ಉಚಿತ ಕೊಡುಗೆ ತಿಳಿಸಿದ. ಆದರೆ, ಉಡುಗೊರೆ ಪಡೆದುಕೊಳ್ಳಲು ₹ 5,000 ಮೌಲ್ಯದ ವಸ್ತುವನ್ನು ‘... ಡಿಜಿಟಲ್‌’ ನಿಂದ ಖರೀದಿಸಬೇಕು ಎಂದು ಷರತ್ತು ಇತ್ತು.

ಪಟ್ಟಿಯನ್ನು ಪರಿಶೀಲಿಸಿ ಟ್ಯಾಬ್ಲೆಟ್‌ ಆಯ್ಕೆ ಮಾಡಿದೆ. ತಕ್ಷಣವೇ ವ್ಯಕ್ತಿಯೊಬ್ಬ 9670428533 ಸಂಖ್ಯೆಯಿಂದ ಕರೆ ಮಾಡಿ, ಜಿಎಸ್‌ಟಿ ಬಿಲ್‌ ಮೊತ್ತ ₹ 9,844 ಕಟ್ಟುವಂತೆ ತಿಳಿಸಿದ. ಆನ್‌ಲೈನ್‌ನಲ್ಲಿ ಹಣ ಪಾವತಿಸಿದೆ.

ಮತ್ತೊಬ್ಬರು ಫೋನ್‌ ಮಾಡಿ, ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸಿದಾಗ ‘ಪ್ರೊಮೊ ಕೋಡ್‌’ ತಪ್ಪಾಗಿದೆ ಎಂದು ಹೇಳಿದರು. ಆನ್‌ಲೈನ್‌ನಲ್ಲಿ ಮೂರು ಬಾರಿ ಹಣ ಕಟ್ಟಿಸಿಕೊಂಡರು. ಮೊದಲು ಹಾಕಿದ ಹಣ ನಿಮ್ಮ ಖಾತೆಗೆ ವಾಪಸ್‌ ಬರುತ್ತದೆ ಎಂದು ತಿಳಿಸಿದರು. ನಂತರ, ಈಗ ಹಣ ‘ರಿಫಂಡ್‌’ ಮಾಡಲು ಆಗುತ್ತಿಲ್ಲ, ಅದು ಬ್ಯಾಂಕ್‌ನಲ್ಲಿ ‘ಹೆಲ್ಡ್‌’ ಆಗಿದೆ ನಿಮ್ಮ ಖಾತೆಗೆ ಮರುಪಾವತಿಯಾಗಲು 24 ಗಂಟೆ ಬೇಕಾಗುತ್ತದೆ ಎಂದು ನಂಬಿಸಿದರು. ಹಂತ ಹಂತವಾಗಿ ಒಟ್ಟು ₹ 2.68 ಲಕ್ಷ ಹಣವನ್ನು ಬ್ಯಾಂಕ್‌ ಖಾತೆಯಿಂದ ‘ಗೂಗಲ್‌ ಪೇ’ ಮೂಲಕ ವರ್ಗಾವಣೆ ಮಾಡಿಕೊಂಡರು.

ನಂಬಿಸಿ ಮೋಸ ಮಾಡಿರುವ ವಂಚಕರನ್ನು ಪತ್ತೆ ಮಾಡಿ ಹಣವನ್ನು ವಾಪಸ್‌ ಕೊಡಿಸುವಂತೆ ಮಹಿಳೆ ಮನವಿ ಮಾಡಿದ್ದಾರೆ.

ಐಪಿಸಿ 420 (ವಂಚನೆ), ಐಟಿ ಕಾಯ್ದೆ 2008ನಡಿ 66(ಸಿ), 66 (ಡಿ) ಪ್ರಕರಣ ದಾಖಲಿಸಲಾಗಿದೆ.

ಬಹುಮಾನ; ₹ 2.91 ಲಕ್ಷ ವಂಚನೆ

ಬಹುಮಾನ ಮೊತ್ತ ಪಡೆಯಲು ಹಣ ಪಾವತಿಸುವಂತೆ ಪತ್ರ ಕಳಿಸಿ ಆನ್‌ಲೈನ್‌ನಲ್ಲಿ ₹ 2.91 ಲಕ್ಷ ಕಟ್ಟಿಸಿಕೊಂಡು ವಂಚಿಸಿದ್ದಾರೆ ಎಂದು ಚಿಕ್ಕಕುರುಬರಹಳ್ಳಿಯ ಮಹಿಳೆ (32) ನಗರದ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಮಿಷೊ’ ಆ್ಯಪ್‌ನಲ್ಲಿ ಹಲವರು ವಸ್ತು ಖರೀದಿ ಮಾಡಿದ್ದೇನೆ. ಜೂನ್‌ 5 ರಂದು ರಿಜಿಸ್ಟರ್ಡ್‌ ಪೋಸ್ಟ್‌ ಬಂದಿತ್ತು. ಅದರಲ್ಲಿ ಮಿಷೊ ಲೆಟರ್‌ ಹೆಡ್‌, ಕೂಪನ್‌ ಇತ್ತು. ಕೂಪನ್‌ ಸ್ಕ್ಯಾಚ್‌ ಮಾಡಿದೆ. ₹ 13.8 ಲಕ್ಷ ಗೆದ್ದಿರುವುದಾಗಿ ಅದರಲ್ಲಿ ಬರೆದಿತ್ತು.

ಪತ್ರದಲ್ಲಿದ್ದ ಸಹಾಯವಾಣಿಗೆ 9163178597 ಕರೆ ಮಾಡಿದೆ, ಅವರು 8276987 357 ಮತ್ತು 9144035325 ಸಂಖ್ಯೆಗಳನ್ನು ನೀಡಿದರು. ಈ ಸಂಖ್ಯೆಗೆ ಫೋನ್‌ ಮಾಡಿದಾಗ ಬಹುಮಾನಕ್ಕೆ ಸಂಬಂಧಿಸಿದಂತೆ ಪತ್ರವೊಂದರನ್ನು ವ್ಯಾಟ್ಸ ಅಪ್‌ನಲ್ಲಿ ಕಳಿಸಿದರು. ಬಹುಮಾನ ಪಡೆಯಲು ₹ 3 ಲಕ್ಷ ಕಟ್ಟಬೇಕು ಎಂದು ವ್ಯಾಟ್ಸ ಅಪ್‌ನಲ್ಲಿ ಸ್ಕ್ಯಾನ್‌ ಕೋಡ್‌ ಕಳಿಸಿದರು. ಪೋನ್‌ ಪೇ ಮೂಲಕ ಹಂತ ಹಂತವಾಗಿ ₹ 2.91 ಲಕ್ಷ ಹಣ ಪಾವತಿಸಿದೆ. ಜೂನ್‌ 20ರಿಂದ ಅವರ ಎಲ್ಲ ನಂಬರ್‌ಗಳು ಸ್ವಿಚ್‌ ಆಫ್‌ ಆಗಿವೆ. ವಂಚನೆ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಉದ್ಯೋಗ ಆಮಿಷ; ಯುವತಿಗೆ ವಂಚನೆ

ಉದ್ಯೋಗಕ್ಕೆ ಆಯ್ಕೆಯಾಗಿರುವುದಾಗಿ ನಂಬಿಸಿ ನೋಂದಣಿ, ನೇಮಕಾತಿ ಪರೀಕ್ಷಾ ಶುಲ್ಕ ಎಂದು ಆನ್‌ಲೈನ್‌ನಲ್ಲಿ ₹ 2.05 ಲಕ್ಷ ಕಟ್ಟುಕೊಂಡು ವಂಚಿಸಿದ್ದಾರೆ ಎಂದು ತಾಲ್ಲೂಕಿನ ಕ್ಯಾತನಬೀಡಿನ ಯುವತಿ (26) ನಗರದ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂನ್‌ 13ರಂದು ‘ಇನ್‌ಸ್ಟಾ ಗ್ರಾಂ’ಗೆ ‘ಏರ್‌ ಇಂಡಿಯಾ ಜಾಬ್‌ ಅಪ್ಲಿಕೇಷನ್‌’ ಎಂಬ ಲಿಂಕ್‌ ಇತ್ತು. ಅದನ್ನು ಕ್ಲಿಕ್‌ ಮಾಡಿ ಅಕ್ಸೆಪ್ಟ್‌ ಮಾಡಿದೆ. 09719329713 ನಂಬರ್‌ನಿಂದ ಕೋಮಲ ಎಂಬ ಹೆಸರಿನಲ್ಲಿ ಒಬ್ಬರು ಫೋನ್‌ ಮಾಡಿದರು. ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ ಎಂದು ತಿಳಿಸಿದರು. ನೋಂದಣಿ, ನೇಮಕಾತಿ ಪರೀಕ್ಷಾ ಶುಲ್ಕ ಕಟ್ಟುವಂತೆ ತಿಳಿಸಿದರು. 9599074106 ಹಾಗೂ 9953417672 ನಂಬರ್‌ಗಳಿಗೆ ಹಂತಹಂತವಾಗಿ ಗೂಗಲ್ ಪೇ ಮೂಲಕ ₹ 2.05 ಲಕ್ಷ ಮಾಡಿದ್ದೇನೆ. ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ವಂಚಕರ ಜಾಡು ಪತ್ತೆಗೆ ಶೋಧ’

‘ಹಣ ಜಮೆಯಾಗಿರುವ ವಂಚಕರ ಖಾತೆ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ. ಖಾತೆ ನಿಷ್ಕ್ರಿಯ ಮಾಡಿಸುತ್ತೇವೆ. ವಂಚಕರ ಜಾಲ, ಜಾಡು ಪತ್ತೆ ಮಾಡುತ್ತೇವೆ’ ಎಂದು ಸಿಇಎನ್‌ ಠಾಣೆ ಇನ್‌ಸ್ಪೆಕ್ಟರ್‌ ಮುತ್ತುರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಿಫ್ಟ್‌ ಕೊಡುತ್ತೇವೆ ಎಂದು ಮಹಿಳೆಗೆ ನಂಬಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ. ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆ ವಿವರ ಪಡೆದುಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT